ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ: ಕಾರಣ ಕೊಟ್ಟಿದ್ದಾರೆ ವಿಶ್ವನಾಥ್
ಮೈಸೂರು, ಡಿಸೆಂಬರ್ 22 : ಸಿದ್ದರಾಮಯ್ಯ ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಮಗನಿಗೆ ವರುಣಾ ಕ್ಷೇತ್ರ ಬಿಟ್ಟುಕೊಟ್ಟು, ಅವರು ರಾಜ್ಯ ಪ್ರವಾಸ ಮಾಡುತ್ತಾರೆ ಎಂದು ಜೆಡಿಎಸ್ ಮುಖಂಡ- ಮಾಜಿ ಸಚಿವ ಎಚ್.ವಿಶ್ವನಾಥ್ ಲೇವಡಿ ಮಾಡಿದರು.
ಮೈಸೂರಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಎಸಿಬಿಗೆ ಬೀಗ ಹಾಕಿ, ಲೋಕಾಯುಕ್ತಕ್ಕೆ ಶಕ್ತಿ ತುಂಬುತ್ತೇವೆ ಎಂದು ಅವರು ತಿಳಿಸಿದರು.
ಹೌಸಿಂಗ್ ಬೋರ್ಡ್ ಕೇಸನ್ನು ಸಿದ್ದರಾಮಯ್ಯ ರಾಜಕೀಯವಾಗಿ ಬಳಸುತ್ತಿದ್ದಾರೆ. ಮೈಸೂರು ಜಿಲ್ಲೆಯ ತ್ರಿಪುರ ಭೈರವಿ ಕೇಸ್, ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಿಮ್ಮಾವು ಬಳಿಯ 821 ಎಕರೆ ಭೂಮಿ ಕಥೆ ಏನಾಯ್ತು? 300 ರೈತರು ಇಲ್ಲಿ ವ್ಯವಸಾಯ ಮಾಡುತ್ತಿದ್ದರು. ಈ ಭೂಮಿಯನ್ನು ಒಂದೇ ದಿನ ಸತ್ತವರನ್ನು ಸೇರಿ ಖಾತೆ ಮಾಡಿದರಲ್ಲಾ ಈ ಪ್ರಕರಣ ಯಾಕೆ ಹಳ್ಳ ಹಿಡಿಯಿತು ಎಂದು ಪ್ರಶ್ನಿಸಿದರು.

ಈ ಭೂಮಿ ವಿವಾದ ಸಂಬಂಧ ಎಸಿಬಿಗೆ ದೂರು ಕೊಟ್ಟರೆ ಅಲ್ಲಿ ಎನ್ ಸಿಆರ್ ಕೊಟ್ಟಿರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಹಿಮ್ಮಾವು ಭೂಮಿ ಅವ್ಯವಹಾರದಲ್ಲಿ ಸಿದ್ದರಾಮಯ್ಯ ಆಶೀರ್ವಾದ ಇದೆ. ಕೆಐಎಡಿಬಿಗೆ ಭೂಮಿ ನೀಡವಾಗ ಕೋಟ್ಯಂತರ ರುಪಾಯಿ ಕಿಕ್ ಬ್ಯಾಕ್ ಹೋಗಿದೆ. ಈ ವಿಚಾರದಲ್ಲಿ ಜೆಡಿಎಸ್ ಹೋರಾಟ ಆರಂಭ ಮಾಡುತ್ತದೆ ಎಂದರು.
ಅರ್ಕಾವತಿ ಬಡಾವಣೆ ಪ್ರಕರಣವನ್ನು ಸಿದ್ದರಾಮಯ್ಯ ಯಾಕೆ ಎಸಿಬಿಗೆ ಕೊಡಲಿಲ್ಲ? ನೀವು ಪ್ರಾಮಾಣಿಕರಾಗಿದ್ದರೆ ಅರ್ಕಾವತಿ ಭೂ ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ವಿಶ್ವನಾಥ್ ಸವಾಲು ಹಾಕಿದರು.
ಕಾಂಗ್ರೆಸ್ ನ ಹಾಳು ಮಾಡಿದ್ದೇ ಕೆಂಪಯ್ಯ
ಈ ಕೆಂಪಯ್ಯ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನ ಹಾಳು ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರರಾಗಿದ್ದಾರೆ. ನಮ್ಮನ್ನೆಲ್ಲಾ ಹತ್ತಿರ ಸೇರಿಸಬೇಡಿ ಎಂದು ಸಿದ್ದರಾಮಯ್ಯಗೆ ಹೇಳಿದ್ದು ಅವರೇ. ಎಸಿಬಿ ಬಳಸಿ ವಿರೋಧಿಗಳನ್ನು ಮಟ್ಟ ಹಾಕಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಆರೆಸ್ಸೆಸ್ ಕಚೇರಿಗೆ ಹೋಗಲಿ
ಹಿಂದೂ ದೇವಾಲಗಳಿಗೆ ಭೇಟಿ ಕೊಡುವ ಬದಲು ನಾಗ್ಪುರದ ಭಾಗವತ್ ರ ಆರೆಸ್ಸೆಸ್ ಕಚೇರಿಗೆ ಹೋಗಲಿ ಎಂದು ರಾಹುಲ್ ಗಾಂಧಿ ಬಗ್ಗೆ ವಿಶ್ವನಾಥ್ ವ್ಯಂಗ್ಯವಾಡಿದರು.
ಸಾಲು ಸಾಲು ದೇವಾಲಯಗಳಿಗೆ ರಾಹುಲ್ ಗಾಂಧಿಯನ್ನು ಕರೆದೊಯ್ಯಲು ಸಿದ್ದರಾಮಯ್ಯ ಸಿದ್ದತೆ ಮಾಡಿದ್ದಾರೆ. ನಾನು ಹಿಂದೂ ಅಂತ ದೇವಾಲಗಳಿಗೆ ಭೇಟಿ ಕೊಡುವ ಬದಲು ನಾಗ್ಪುರದಲ್ಲಿರುವ ಭಾಗವತ್ ರ ಆರೆಸ್ಸೆಸ್ ಕಚೇರಿಗೆ ಹೋಗಲಿ ಎಂದು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.












Click it and Unblock the Notifications