ಕಾವೇರಿ ವಿವಾದ: ನಮ್ಮ ರೈತರ ಹಿತ ಕಾಪಾಡುವುದೇ ಮೊದಲ ಆದ್ಯತೆ: ಸಿಎಂ ಸಿದ್ದರಾಮಯ್ಯ
ಮೈಸೂರು, ಆಗಸ್ಟ್, 28: ಕುಡಿಯುವ ನೀರಿಗೆ ಮತ್ತು ಕೃಷಿಗೆ ಅಗತ್ಯವಾದ ನೀರಿನ ಪ್ರಮಾಣ ಎಷ್ಟು? ನಮ್ಮ ರೈತರ ಹಿತ ಕಾಪಾಡುವುದನ್ನೇ ಮೊದಲ ಆದ್ಯತೆಯನ್ನಾಗಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ಸಭೆ ನಡೆಸಿ ಮಾತನಾಡಿದ ಅವರು, ನಮ್ಮಲ್ಲಿ ಸಂಗ್ರಹದಲ್ಲಿರುವ ನೀರಿನ ಪ್ರಮಾಣ ಎಷ್ಟು ಎನ್ನುವ ಕುರಿತಾಗಿ ವೈಜ್ಞಾನಿಕ ತಿಳಿವಳಿಕೆ ಮತ್ತು ಮಾಹಿತಿ ಸಿದ್ಧವಿಟ್ಟುಕೊಂಡು ನಮ್ಮ ರೈತರ ಹಿತ ಕಾಪಾಡುವುದನ್ನೇ ಮೊದಲ ಆದ್ಯತೆ ನೀಡಿ ಎಂದು ನಿರ್ದೇಶನ ನೀಡಿದರು.

ಎಂಜಿನಿಯರ್‌ಗಳು ಕಚೇರಿಯಲ್ಲಿ ಕುಳಿತು ನಿರ್ಧಾರ ಕೈಗೊಳ್ಳದೇ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾಲೆಗೆ ನೀರು ಬಿಡುವ ಮೊದಲು ಹೂಳು ತೆಗೆಯಬೇಕು. ನೀರು ಬಿಟ್ಟ ಬಳಿಕ ಹೂಳು ತೆಗೆಯಲು ಹೋಗಬಾರದು ಎಂದು ಸಲಹೆ ನೀಡಿದರು.
ನಮ್ಮ ರೈತರಿಗೆ ಅನ್ಯಾಯ ಮಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಕೊಡಬೇಕು ಎನ್ನುವ ಸೂಚನೆ ಯಾವ ಆದೇಶದಲ್ಲೂ ಇಲ್ಲ. ನಮ್ಮ ಬೆಳೆ ಮತ್ತು ಕುಡಿಯುವ ನೀರಿನ ರಕ್ಷಣೆ ಮಾಡಿಕೊಳ್ಳಬೇಕು. ಅದಕ್ಕಾಗಿ ಈ ಬಗ್ಗೆ ರೆಗ್ಯುಲೇಷನ್ ಕಮಿಟಿ ಸಭೆ ನಡೆಸಿ ಸಂಕಷ್ಟ ಪರಿಹಾರ ಸೂತ್ರ ಕಂಡುಕೊಳ್ಳಬೇಕಿದೆ ಎಂದರು.
ಹಳ್ಳಿಗಳಿಗೆ ಹೋಗಿ ಸಮಸ್ಯೆ ಆಲಿಸಿ
ಕಚೇರಿಗೆ ಬರುವ ರೈತರ ಜೊತೆ ಆರೋಗ್ಯಕರವಾದ ನಡವಳಿಕೆ ಇಟ್ಟುಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ಇರುವುದೇ ರೈತರಿಗೆ ಮಾಹಿತಿ ಕೊಟ್ಟು ಸಹಕಾರ ಕೊಡುವುದಕ್ಕೆ. ರೈತರು ತಮ್ಮ ಅನುಭವದಿಂದಲೇ ಕೃಷಿಯಲ್ಲಿ ಪಳಗಿರುತ್ತಾರೆ. ಅಧಿಕಾರಿಗಳಿಗಿಂತ ಹೆಚ್ಚು ತಿಳಿವಳಿಕೆ ಹೊಂದಿದ್ದಾರೆ. ಆದ್ದರಿಂದ ರೈತರ ಮಾತು ಕೇಳಿಸಿಕೊಳ್ಳಬೇಕು, ಫೀಲ್ಡ್ ವಿಸಿಟ್ ಮಾಡಿ, ಡೈರಿ ಬರೆಯುವುದನ್ನು ರೂಢಿಕೊಳ್ಳಬೇಕು ಎಂದು ತಿಳಿ ಹೇಳಿದರು.
ನೀರಿನ ಲಭ್ಯತೆಗೆ ಅನುಗುಣವಾಗಿ ಅಲ್ಪಾವಧಿ ಬೆಳೆ ಬೆಳೆಯಲು ರೈತರಿಗೆ ಸಲಹೆ ನೀಡಬೇಕು. ಅದಕ್ಕೆ ಬೇಕಾಗುವಷ್ಟು ನೀರು ನೀಡಲು ನೀರಾವರಿ ಇಲಾಖೆ ಸಿದ್ದತೆ ಮಾಡಿಕೊಳ್ಳಬೇಕು. ರೈತರಿಗೆ ಒಮ್ಮೆ ಬೀಜಗಳನ್ನು ಒದಗಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೃಷಿ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ತೀರ್ಮಾನ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು. ನಾನು ಕೆಡಿಪಿ ಸಭೆ ಕರೆದಾಗ ರಾಜ್ಯ ಮಟ್ಟದ ಅಧಿಕಾರಿಗಳೂ ಸಭೆಗೆ ಬರಬೇಕು. ಸಭೆಗೆ ಆಹ್ವಾನ ಹೋದರೂ ಬರದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚರ್ಚೆಯಾದ ವಿಷಯಗಳೇನು?
1. ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಅಧಿಕಾರಿಗಳು ಅವರಿಗೆ ಮಾನವೀಯವಾಗಿ ಸ್ಪಂದಿಸಬೇಕು.
2. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉದಾರವಾಗಿ ವರ್ತಿಸಿ. ಸರ್ಕಾರ ಹಣ ಕೊಡತ್ತದೆ. ತಡ ಮಾಡದೆ ಪರಿಹಾರ ಅವರಿಗೆ ತಲುಪಬೇಕು. ಅನಗತ್ಯ ತಡ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
3. ಬೆಳೆ ನಷ್ಟ ಮತ್ತು ರೈತರ ಆತ್ಮಹತ್ಯೆಗಳ ಕುರಿತಾಗಿ ವಾಸ್ತವ ಸಂಗತಿಗಳು ಮತ್ತು ಕಾರಣಗಳನ್ನು ಪತ್ತೆ ಹಚ್ಚಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆತ್ಮಹತ್ಯೆಗಳಾಗಿದ್ದರೆ ಅದನ್ನೂ ನಮೂದಿಸಬೇಕು. ಆತ್ಮಹತ್ಯೆ ಹಿಂದಿನ ನೈಜ ಸಂಗತಿಯನ್ನು ಸ್ಪಷ್ಟವಾಗಿ ಗುರುತಿಸಿ, ದಾಖಲಿಸಬೇಕು ಎನ್ನುವ ಸೂಚನೆ ನೀಡಲಾಯಿತು.
4. ನಮ್ಮ ರೈತರಿಗೆ ಅನ್ಯಾಯ ಮಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಕೊಡಬೇಕು ಎನ್ನುವ ಸೂಚನೆ ಯಾವ ಆದೇಶದಲ್ಲೂ ಇಲ್ಲ. ನಮ್ಮ ಬೆಳೆ ಮತ್ತು ಕುಡಿಯುವ ನೀರಿನ ರಕ್ಷಣೆ ಮಾಡಿಕೊಳ್ಳಬೇಕು. ಸಂಕಷ್ಟ ಪರಿಹಾರ ಸೂತ್ರ ಇನ್ನೂ ಸಿದ್ದಗೊಳ್ಳಬೇಕಿದೆ.
5. ಕುಡಿಯುವ ನೀರಿಗೆ ಮತ್ತು ಕೃಷಿಗೆ ಅಗತ್ಯವಾದ ನೀರಿನ ಪ್ರಮಾಣ ಎಷ್ಟು? ನಮ್ಮಲ್ಲಿ ಸಂಗ್ರಹದಲ್ಲಿರುವ ನೀರಿನ ಪ್ರಮಾಣ ಎಷ್ಟು ಎನ್ನುವ ಕುರಿತಾಗಿ ವೈಜ್ಞಾನಿಕ ತಿಳಿವಳಿಕೆ ಮತ್ತು ಮಾಹಿತಿ ಸಿದ್ದವಿಟ್ಟುಕೊಂಡು ನಮ್ಮ ರೈತರ ಹಿತ ಕಾಪಾಡುವುದನ್ನೇ ಮೊದಲ ಆಧ್ಯತೆಯನ್ನಾಗಿ ಕ್ರಮ ವಹಿಸಲು ಸೂಚಿಸಲಾಯಿತು.
6. ಕುರಿ ಮತ್ತು ಹಸು ಹಾಗೂ ಎತ್ತುಗಳು ಮೃತಪಟ್ಟಾಗ ಪರಿಹಾರ ಒದಗಿಸಬೇಕು. ಅಗತ್ಯ ಹಣವನ್ನು ಸರ್ಕಾರಕ್ಕೆ ಕೇಳಿ.
7. ರಾಸುಗಳಿಗೆ ಅಗತ್ಯ ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಸಂಭಾವ್ಯ ಕಾಯಿಲೆಗಳಿಗೆ ಔಷಧಿ ರೆಡಿ ಇಟ್ಟುಕೊಂಡಿರಬೇಕು.
8. ಪಶುಪಾಲಕರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ನಂದಿನಿ ಹಾಲಿನ ದರವನ್ನು 3 ರೂಪಾಯಿ ಹೆಚ್ಚಿಸಿದೆವು. ಈ 3 ರೂಪಾಯಿ ಪೂರ್ತಿಯಾಗಿ ನೇರ ರೈತರಿಗೆ ತಲುಪಬೇಕು. ರೈತರಿಗೆ 3 ರೂಪಾಯಿ ಹೆಚ್ಚುವರಿವಾಗಿ ಸಿಕ್ಕ ಮೇಲೆ ನಂದಿನಿಗೆ ಬರುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ಈಗ ಹಾಲು ಒಕ್ಕೂಟಗಳು ಲಾಭ ಮಾಡಿಕೊಳ್ಳಬೇಕು, ಆ ಲಾಭ ರೈತರಿಗೆ ಸೇರಬೇಕು ಎಂದು ಸೂಚಿಸಿದರು. ಹಾಗೆಯೇ ಹಾಲು ಒಕ್ಕೂಟಗಳಿಗೆ ಮನಸೋ ಇಚ್ಚೆ ನೇಮಕ ಮಾಡಿಕೊಳ್ಳಬಾರದು. ಹೊರ ಗುತ್ತಿಗೆ ಎನ್ನುವುದನ್ನು ದಂಧೆ ಮಾಡಿಕೊಳ್ಳಬಾರದು. ಮೀಸಲಾತಿ ಮಾನದಂಡದಲ್ಲಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.












Click it and Unblock the Notifications