Karnataka Election: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ? ಯತೀಂದ್ರ ಹೇಳಿದ್ದೇನು?
ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಮುಗಿಯಲು ಕೆಲವೇ ಗಂಟೆಗಳಿವೆ. ಜಿದ್ದಾಜಿದ್ದಿನ ಪ್ರಚಾರ, ಆರೋಪ ಪ್ರತ್ಯಾರೋಪಗಳನ್ನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಮತದಾರ ಇಂದು ತನ್ನ ತೀರ್ಪು ನೀಡಲಿದ್ದಾನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವರುಣಾದಲ್ಲಿ ಮತದಾನ ಮಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರುಣಾದ ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಪರವಾದ ಅಲೆಯಿದೆ, ಬಹುತೇಕ ಸಮೀಕ್ಷೆಗಳು ಕೂಡ ಅದನ್ನೇ ಹೇಳಿವೆ ಎಂದು ಹೇಳಿದರು. ಎಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಿಖರವಾಗಿ ಹೇಳಲಾಗದು, ಆದರೆ, 120 ರಿಂದ 130 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ತಾರ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ಅದೆಲ್ಲ ಈಗಲೇ ಯೋಚನೆ ಮಾಡಲು ಹೋಗಿಲ್ಲ, ಮೊದಲು ಚುನಾವಣೆಯಲ್ಲಿ ಗೆಲ್ಲಬೇಕು, ಅದರತ್ತ ಮಾತ್ರ ಗಮನ ಹರಿಸಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಈ ಬಾರಿ ಗೆಲ್ಲುವುದು ಖಚಿತ, ಅಪಾರ ಜನ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು. 2 ತಿಂಗಳಿನಿಂದ ಬಿಡುವಿಲ್ಲದೆ ಪ್ರಚಾರ ಮಾಡಿದ್ದೇವೆ, ಇವತ್ತು ಸ್ವಲ್ಪ ನಿರಾಳ ಎನಿಸುತ್ತಿದೆ. ನಾನು ರಾಜ್ಯದಲ್ಲಿ ಬೇರೆ ಕಡೆ ಪ್ರಚಾರಕ್ಕೆ ಹೋಗಿಲ್ಲ ವರುಣಾದಲ್ಲೇ ಪ್ರಚಾರ ಮಾಡಿದ್ದೇನೆ, ಸ್ನೇಹಿತರು, ಮಾಧ್ಯಮಗಳು, ಸಮೀಕ್ಷೆಗಳು ಹೇಳುವ ಪ್ರಕಾರ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.












Click it and Unblock the Notifications