ವೇದಿಕೆ ಹಂಚಿಕೊಂಡ ಕುರುಬ ಸಮುದಾಯದ ಪ್ರಭಾವಿ ನಾಯಕರು
ಮೈಸೂರು, ಜನವರಿ 19: ಅವರು ಮೂವರು ಕುರುಬ ಸಮುದಾಯದ ಪ್ರಭಾವಿ ನಾಯಕರು. ರಾಜಕೀಯದ ವಿಚಾರ ಬಂದಾಗ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡವರು. ರಾಜಕೀಯ ಮರೆತರೆ ಎಲ್ಲರೂ ಸ್ನೇಹಿತರು. ಒಂದೇ ಸಮುದಾಯದವರು.
ಕರ್ನಾಟಕದ ರಾಜಕೀಯ ಹಲವು ದಿನಗಳ ಬಳಿಕ ವಿಶೇಷವಾದ ಕ್ಷಣಕ್ಕೆ ಭಾನುವಾರ ಸಾಕ್ಷಿಯಾಯಿತು. ಮೈಸೂರಿನಲ್ಲಿ ಸಮಾರಂಭದಲ್ಲಿವೊಂದರಲ್ಲಿ ಕುರುಬ ಸಮುದಾಯದ ಮೂವರು ಪ್ರಭಾವಿ ನಾಯಕರು ವೇದಿಕೆ ಹಂಚಿಕೊಂಡರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಕೆ. ಎಸ್. ಈಶ್ವರಪ್ಪ, ಮಾಜಿ ಸಚಿವ ಎಚ್. ವಿಶ್ವನಾಥ್ ಒಂದೇ ವೇದಿಕೆ ಹಂಚಿಕೊಂಡರು. ಅಕ್ಕ-ಪಕ್ಕದಲ್ಲೇ ಕುಳಿತು ಆತ್ಮೀಯವಾಗಿ ಮಾತುಕತೆ ನಡೆಸಿದರು. ಸಮುದಾಯದ ನಾಯಕರನ್ನು ಒಟ್ಟಿಗೆ ನೋಡಿ ಜನರು ಸಹ ಸಂತಸಪಟ್ಟರು.
ಮೈಸೂರಿನ ಕೆ. ಆರ್. ನಗರ ತಾಲೂಕಿನಲ್ಲಿ ನಡೆದ ಸಮಾವೇಶದಲ್ಲಿ ಮೂವರು ನಾಯಕರು ಒಟ್ಟಾಗಿದ್ದರು. ಹಳೆಯ ನೆನೆಪುಗಳನ್ನು ಹಂಚಿಕೊಂಡರು. ಹಸಿವಾದಾಗ ಸಿದ್ದರಾಮಯ್ಯ ಬಿಸ್ಕೆಟ್ ತೆಗೆದು ಈಶ್ವರಪ್ಪ, ಎಚ್. ವಿಶ್ವನಾಥ್‌ಗೆ ನೀಡಿ ತಾವು ಸವಿದರು.

ವೇದಿಕೆ ಹಂಚಿಕೊಂಡ ನಾಯಕರು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸೇನೆ ಮೈಸೂರಿನ ಕೆ. ಆರ್. ನಗರ ತಾಲೂಕಿನ ದೊಡ್ಡಕೊಪ್ಪಲುವಿನಲ್ಲಿ ಬೃಹತ್ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಮತ್ತು ಸಮಾವೇಶ ಆಯೋಜನೆ ಮಾಡಿತ್ತು. ಸಿದ್ದರಾಮಯ್ಯ, ಕೆ. ಎಸ್. ಈಶ್ವರಪ್ಪ ಮತ್ತು ಎಚ್. ವಿಶ್ವನಾಥ್ ಪಾಲ್ಗೊಂಡಿದ್ದರು.

ಮಾತನಾಡುತ್ತಾ ಕಾಲ ಕಳೆದರು
ಪ್ರತಿಮೆ ಲೋಕಾರ್ಪಣೆ ಬಳಿಕ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತ ಸಿದ್ದರಾಮಯ್ಯ, ಕೆ. ಎಸ್. ಈಶ್ವರಪ್ಪ ಪರಸ್ಪರ ಮಾತನಾಡುತ್ತಾ ಕಾಲ ಕಳೆದರು. ಕಾರ್ಯಕ್ರಮ ಮುಗಿದ ಬಳಿಕ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು.

ನನಗೆ ಹೆಚ್ಚು ಬೈದಿದ್ದಾರೆ
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಎಸ್. ಈಶ್ವರಪ್ಪ, "ನಾವು ಒಂದೇ ವೇದಿಕೆಯಲ್ಲಿ ಸೇರಿರುವುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಬೇರೆ ಎಲ್ಲರಿಗಿಂತ ನನಗೆ ಹೆಚ್ಚು ಬೈದಿದ್ದಾರೆ. ನಾನೂ ಬಂಡ, ನಾನೂ ಕೂಡಾ ಅವರಿಗೆ ಬೇರೆತವರಿಗಿಂತ ಹೆಚ್ಚು ಬೈದಿದ್ದೇನೆ" ಎಂದು ಹೇಳಿದರು.

ನಾವಿಬ್ಬರು ಸಸ್ಯಹಾರಿಗಳು
"ನಾವಿಬ್ಬರು ಸಸ್ಯಹಾರಿಗಳು. ಸಿದ್ದರಾಮಯ್ಯ ಮಾಂಸಾಹಾರಿ. ನಮ್ಮಲ್ಲಿ ದ್ವೇಷದ ರಾಜಕಾರಣ ಇಲ್ಲ. ಅಧಿಕಾರದಲ್ಲಿ ಇರುವಾಗಲೆಲ್ಲ ಪರಸ್ಪರ ಕೆಲಸ ಮಾಡಿಕೊಟ್ಟಿದ್ದೇವೆ" ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.












Click it and Unblock the Notifications