ಮೈಸೂರು ಮಲ್ಲಿಕಾರ್ಜುನ ಜಾತ್ರೆ : ಸೂಕ್ತ ಸಿದ್ಧತೆಗೆ ಸೂಚನೆ
ಮೈಸೂರು, ಜ. 13: ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಮಹೋತ್ಸವ ಜ. 23ರಿಂದ ಫೆಬ್ರವರಿ 8ರ ವರೆಗೆ ನಡೆಯಲಿದೆ. ಇದಕ್ಕಾಗಿ ಸೂಕ್ತ ಸಿದ್ಧತೆ ಕೈಗೊಳ್ಳುವಂತೆ ಮೈಸೂರು ಉಪ ವಿಭಾಗಾಧಿಕಾರಿ ಸೈಯಿದಾ ಅಯಿಷಾ ವಿವಿಧ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಾತ್ರೆಗೆ ನಡೆಸಬೇಕಾದ ಸಿದ್ಧತೆ ಕುರಿತು ಟಿ. ನರಸೀಪುರ ತಾಲೂಕಿನ ತಲಕಾಡು ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಲೋಪವಾಗದಂತೆ ಅಧಿಕಾರಿಗಳು ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಜಾನುವಾರು ಜಾತ್ರೆ : ಬ್ರಹ್ಮರಥೋತ್ಸವ, ತೆಪ್ಪೋತ್ಸವ, ಪರ್ವತ ಪರಿಷೆ ಮುಂತಾದ ಉತ್ಸವಗಳನ್ನು ಈ ಅವಧಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಜಾನುವಾರುಗಳ ಜಾತ್ರೆ ಮುಖ್ಯ ಆಕರ್ಷಣೆಗಳಲ್ಲಿ ಒಂದು. ಮೈಸೂರು ಸೇರಿದಂತೆ ಮಂಡ್ಯ, ಚಾಮರಾಜನಗರ ಹಾಗೂ ಮಡಿಕೇರಿಗಳಿಂದ ಜಾನುವಾರುಗಳು ಬರಲಿವೆ. ಅವುಗಳಿಗೆ ಬೆಳಕು, ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು. ಪಶುಪಾಲನೆ ಇಲಾಖೆಯಿಂದ ರಾಸುಗಳ ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚಿಸಿದರು. [ಮಕರ ಸಂಕ್ರಾಂತಿ ದಿನದಿಂದ ಕದ್ರಿ ಮಂಜುನಾಥ ಜಾತ್ರೆ]

ಜಾತ್ರೆಯ ಭದ್ರತೆ ಹಾಗೂ ವಾಹನ ಸಂಚಾರ ಮತ್ತು ಪಾರ್ಕಿಂಗ್ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಜಾತ್ರೆ ಸ್ಥಳದಲ್ಲಿ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಮಳಿಗೆ ತೆರೆಯಬೇಕು. ವೈದ್ಯರು ಹಾಗೂ ಸಹಾಯ ಸಿಬ್ಬಂದಿ ನೇಮಿಸಬೇಕು. ಜಾತ್ರೆಯ ಸ್ವಚ್ಛತಾ ಕಾರ್ಯದ ಸಂಪೂರ್ಣ ಉಸ್ತುವಾರಿ ಜವಾಬ್ದಾರಿಯು ಆರೋಗ್ಯ ಇಲಾಖೆ ಮೇಲಿದೆ. ಕುಡಿಯುವ ನೀರಿನ ತೊಂಬೆಯ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ತಾಲೂಕು ಪಂಚಾಯಿತಿ ಹಾಗೂ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಮತ್ತು ಸಮೂಹ ದೇವಾಲಯಗಳ ಆಡಳಿತ ಮಂಡಳಿ ವಹಿಸಲಿದೆ ಎಂದು ತಿಳಿಸಿದರು.
ವಿದ್ಯುತ್ ಪೂರೈಕೆ : ಜಾತ್ರೆ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಹೆಚ್ಚುವರಿಯಾಗಿ 6 ಕೆ.ವಿ. ವಿದ್ಯುತ್ ಸರಬರಾಜು ಮಾಡಬೇಕು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಭಕ್ತರಿಗೆ ತಾತ್ಕಾಲಿಕ ಶೌಚಾಲಯ ಹಾಗೂ ಉಡುಗೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯಾಗಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಜಾತ್ರೆ ನಡೆಯುವ ಸ್ಥಳದಲ್ಲಿ ಬೀದಿ ದೀಪ ನಿರ್ವಹಿಸಬೇಕು ಎಂದು ತಿಳಿಸಿದರು.
ಜಾತ್ರೆ ಸಮಯದಲ್ಲಿ ಹೆಚ್ಚಿನ ಜನ ಸೇರುವುದಿಂದ ವಸ್ತು ಪ್ರದರ್ಶನಕ್ಕೆ ಅವಕಾಶವಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಮೀನುಗಾರಿಕೆ ಹಾಗೂ ಇತರೆ ಸರ್ಕಾರಿ ಇಲಾಖೆಗಳಿಂದ ವಸ್ತು ಪ್ರದರ್ಶನ ಕ್ರಮ ಕೈಗೊಳ್ಳಬೇಕು. ವಸ್ತು ಪ್ರದರ್ಶನವು ಜನವರಿ 23ರಿಂದ ಫೆಬ್ರವರಿ 8ರ ವರೆಗೆ ಜನರಿಗೆ ಮುಕ್ತವಿರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಜಾತ್ರೆ ಸಮಯದಲ್ಲಿ ವಾಹನ ಶುಲ್ಕ ರದ್ದು ಮಾಡಬೇಕೆಂದು ಕೋರಿದರು. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು.
ತಹಸೀಲ್ದಾರ್ ಶೂಲಗಯ, ಶ್ರೀ ವೈದ್ಯನಾಥೇಶ್ವರ ಸ್ವಾಮಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಮೂರ್ತಿ, ತಾಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಪಶುಪಾಲನ ಇಲಾಖೆ ಅಧಿಕಾರಿ ಚಿನ್ನಸ್ವಾಮಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications