ಜನರು ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ: ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಕಿಡಿ
ಮೈಸೂರು, ಆಗಸ್ಟ್ 28: ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧಕ್ಕೆ, ನನ್ನ ಮನೆ ಬಾಗಿಲಿಗೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಬರಬೇಕಾ? ಹಾಗಾದರೆ ಸ್ಥಳೀಯ ಅಧಿಕಾರಿಗಳು ಇರುವುದು ಯಾಕೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜನರಿಗೆ ಅಧಿಕಾರಿಗಳು - ಕಚೇರಿ ಸಿಬ್ಬಂದಿ ಕೈಗೆ ಸಿಗಬೇಕು. ಖಾತೆ ಮಾಡಿಸಿಕೊಳ್ಳಲು, ಜಾತಿ ಪ್ರಮಾಣ ಪತ್ರಕ್ಕೆ ಜನ ವಿಧಾನಸೌಧಕ್ಕೆ ಬರಬೇಕಾ? ಜನರೇ ನಮ್ಮ ಮಾಲೀಕರು. ನಾವು ಜನಗಳ ಸೇವಕರು. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ. ಹೀಗಾಗಿ ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜನ ಸಣ್ಣ ಕೆಲಸಗಳಿಗೆ ವಿಧಾನಸೌಧಕ್ಕೆ ಬರುತ್ತಾರೆ ಎಂದರೆ, ನನ್ನನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಬರಿಗಾಲಿನಲ್ಲಿ ಬರುವವರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಕೊಡಬೇಕು. ಮೊದಲು ನನ್ನ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಚುರುಕಾಗಬೇಕು. ನಿಯಮಬದ್ಧವಾಗಿ, ಕಾಲ ಮಿತಿಯಲ್ಲಿ ಕೆಲಸ ಮಾಡದಿದ್ದರೆ ಅದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಯಾವ ನಿರೀಕ್ಷೆ ಇಟ್ಟುಕೊಂಡು ಸರ್ಕಾರವನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.
ಮಳೆಯ ಅಭಾವ ಇರುವುದರಿಂದ ಜನರು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು.
— CM of Karnataka (@CMofKarnataka) August 28, 2023
ಇನ್ಸ್‌ಪೆಕ್ಟರ್ ಗಳ ಅರಿವಿಗೆ ಬಾರದಂತೆ ಅವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ. ಈ ಬಗ್ಗೆ ಡಿಸಿಪಿ ಗಳು, ಎಸ್.ಪಿ ಗಳು ಎಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆ ಸಮಸ್ಯೆ…
ಮೈಸೂರು ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ 16ನೇ ಸ್ಥಾನದಲ್ಲಿದೆ ಎಂದರೆ ನಾಚಿಕೆಗೇಡು. ಇದನ್ನು ನಾನು ಸಹಿಸಲ್ಲ. ಶಿಕ್ಷಣ, ಆರೋಗ್ಯ ಸೂಚ್ಯಂಕ ಸೇರಿ ಎಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ಮಾದರಿ ಜಿಲ್ಲೆಯಾಗಲೇಬೇಕು. ಅಧಿಕಾರಿಗಳು ಆ ರೀತಿ ದಕ್ಷತೆ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಬೇಕು ಎಂದರು.
ಆರು ತಿಂಗಳ ಬಳಿಕ ಮತ್ತೆ ಕೆಡಿಪಿ ಸಭೆ ನಡೆಸುತ್ತೇನೆ. ಅಷ್ಟರೊಳಗೆ ಪರಿಸ್ಥಿತಿ ಸುಧಾರಿಸಬೇಕು. ಪ್ರಗತಿಯ ವೇಗ ಹೆಚ್ಚಾಗಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುತ್ತೇನೆ. ಪ್ರೀ ಮೆಚೂರ್ ಎನ್ನುವುದನ್ನೂ ನೋಡದೆ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಮಳೆಯ ಅಭಾವ ಇರುವುದರಿಂದ ಜನರು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಎಲ್ಲಾ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕು. ಇನ್ಸ್‌ಪೆಕ್ಟರ್ ಗಳ ಅರಿವಿಗೆ ಬಾರದಂತೆ ಅವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ. ಈ ಬಗ್ಗೆ ಡಿಸಿಪಿ ಗಳು, ಎಸ್.ಪಿ ಗಳು ಎಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications