ಬರಿದಾಗುತ್ತಿದೆ KRS ಜಲಾಶಯ: 20 ದಿನದಲ್ಲಿ ಮಳೆ ಬಾರದಿದ್ದರೆ ಮೈಸೂರು ಜಿಲ್ಲೆಯಲ್ಲಿ ಜಲಕ್ಷಾಮ
ಮೈಸೂರು, ಜೂನ್, 29: ಈ ಬಾರಿ ರಾಜ್ಯದ ಹಲವೆಡೆ ಮಾತ್ರ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದೆ. ಮತ್ತೊಂದೆಡೆ ನೋಡುವುದಾದರೆ ಕರಾವಳಿ ಜಿಲ್ಲೆಗಳು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯೇ ಇಲ್ಲದಂತಾಗಿದೆ. ಮಳೆ ಕೊರತೆಯಿಂದ ಜಲಾಶಯಗಳು ಕೂಡ ಬರಿದಾಗುತ್ತಿದ್ದು, ಇದರಿಂದ ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗೆಯೇ ಮಂಡ್ಯ, ಮೈಸೂರು, ಬೆಂಗಳೂರು, ಮಡಿಕೇರಿಗೆ ಆಧಾರವಾಗಿರುವ ಕೆಆರ್‌ಎಸ್ ಅಣೆಕಟ್ಟಿನಲ್ಲೂ ಸಹ ನೀರು ಬತ್ತಿಹೋಗುತ್ತಲೇ ಇದೆ.
ವಾಡಿಕೆಯಂತೆ ಮಳೆಯಾಗದ ಪರಿಣಾಮ ಮಳೆಗಾಲದ ಆರಂಭದಲ್ಲೇ ನೀರಿನ ಅಭಾವ ಎದುರಾಗಿದೆ. ಸಾಮಾನ್ಯವಾಗಿ ಬೇಸಿಗೆ ಬಂದರೆ ಸಾಕು ಜಲಕ್ಷಾಮ ಎಲ್ಲೆಡೆ ಕಂಡು ಬರುತ್ತದೆ. ಆದರೆ, ಕಳೆದ ಬಾರಿ ಉತ್ತಮ ಮಳೆಯಾದ ಪರಿಣಾಮ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಆದರೆ, ಈ ಬಾರಿ ಮೈಸೂರು ನಗರದಲ್ಲಿ ಮಳೆಗಾಲ ಆರಂಭದಲ್ಲಿಯೇ ಜೀವಜಲಕ್ಕೆ ಸಂಕಷ್ಟ ಶುರುವಾಗಿದೆ. ಇನ್ನು ಮೂರು ವಾರದಲ್ಲಿ ಮಳೆಯಾಗಿ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗದೇ ಇದ್ದರೆ ಜಲಕ್ಷಾಮ ಕಟ್ಟಿಟ್ಟ ಬುತ್ತಿ.

ಕುಸಿದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ
ಸಾಮಾನ್ಯವಾಗಿ ಮೈಸೂರು, ಮಂಡ್ಯ, ಬೆಂಗಳೂರಿಗೆ ಕಾವೇರಿ ಅಣೆಕಟ್ಟು ನೀರೇ ಪ್ರಮುಖ ಕುಡಿಯುವ ನೀರಿನ ಮೂಲವಾಗಿದೆ. ಬೆಳೆಗಳಿಗೂ ಇಲ್ಲಿಂದಲೇ ಕಾಲುವೆಗಳ ಮೂಲಕ ನೀರು ಹರಿಸಬೇಕು. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಪ್ರಸ್ತುತ 77.90 ಅಡಿ ಇದ್ದು, ಇನ್ನೂ 7 ಅಡಿವರೆಗೆ ಮಾತ್ರ ಡೆಡ್ ಸ್ಟೋರೇಜ್‌ನಿಂದ ನೀರು ಪಡೆಯಲು ಸಾಧ್ಯವಾಗಲಿದೆ.
ಜಲಾಶಯದಲ್ಲಿ 70 ಅಡಿಗೆ ಕುಸಿಯುತ್ತಿದ್ದಂತೆ ಹೊಂಗಳ್ಳಿ ಘಟಕದಿಂದ ಬರುವ 115 ಎಎಂಎಲ್‌ಡಿ ನೀರು ಪೂರೈಕೆ ಸಂಪೂರ್ಣ ಸ್ಥಗಿತ ಆಗಲಿದೆ. ಇದು ಪಾಲಿಕೆ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಮೈಸೂರಿಗೆ ನಿತ್ಯ 300 ಎಂಎಲ್‌ಡಿ ನೀರು ಅಗತ್ಯವಾಗಿ ಬೇಕು. ಸದ್ಯ ಕಬಿನಿಯಲ್ಲಿ 2250 ಅಡಿ ನೀರಿದೆ. ಮೈಸೂರು ನಗರಕ್ಕೆ ಕಾವೇರಿ ಮತ್ತು ಕಬಿನಿಯಿಂದ ನೀರು ಪೂರೈಕೆ ಆಗುತ್ತಿದೆ. ಆದರೆ ಈಗ ಸಂಗ್ರಹವಾಗಿರುವ ನೀರಿನ ಪ್ರಮಾಣದಿಂದ ಇನ್ನೂ 20 ದಿನಗಳ ಕಾಲ ನೀರು ಪೂರೈಕೆಗೆ ಮಾತ್ರ ಅವಕಾಶವಿದೆ. ಅಷ್ಟರಲ್ಲಿ ಮಳೆ ಬಿದ್ದು ಜಲಾಶಯಗಳು ಭರ್ತಿಯಾದರೆ ಯಾವುದೇ ಸಮಸ್ಯೆಯಿಲ್ಲ. ಒಂದು ವೇಳೆ ಮಳೆ ಬಾರದಿದ್ದರೆ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎನ್ನುವ ಆತಂಕ ಎದುರಾಗಿದೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಆತಂಕ ಸಾಮಾನ್ಯ. ಆದರೆ ಇದೀಗ ವರುಣ ಕೃಪೆ ತೋರಿ ಕನ್ನಂಬಾಡಿ ಭರ್ತಿಯಾಗದೇ ಇದ್ದರೆ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಭಾರೀ ವ್ಯತ್ಯ ಆವಾಗಲಿದ್ದು, ನಗರದಲ್ಲಿ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ವರುಣ ಅವಕೃಪೆ ತೋರಿದರೆ ಜಲಕ್ಷಾಮ ತಲೆ ದೋರಲಿದೆ ಎಂಬ ಆತಂಕ ಮೈಸೂರು ಮಹಾನಗರ ಪಾಲಿಕೆಯನ್ನು ಕಂಗೆಡುವಂತೆ ಮಾಡಿದೆ.
ಮೈಸೂರು ನಗರಕ್ಕೆ ಕಾವೇರಿ ನದಿ ಪಾತ್ರದ ಮೂರು ಘಟಕಗಳಾದ ಮೇಳಾಪುರ, ಹೊಂಗಳ್ಳಿ ಮತ್ತು ಬೆಳಗೋಳ ಘಟಕದಿಂದ ಮತ್ತು ಕಬಿನಿಯಿಂದ ನಿತ್ಯ 315 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಇದರಿಂದ ಕಬಿನಿ ಪಾತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ, ಕಾವೇರಿ ನೀರು ಪೂರೈಕೆಯಲ್ಲಿಯೇ ಇದೀಗ ಸಮಸ್ಯೆ ಆಗಿದೆ.
ನಗರ ಪಾಲಿಕೆಗೆ ಆತಂಕ
ನೀರು ಪೂರೈಕೆಯ ಈ ಸಂದಿಗ್ಧ ಸಮಸ್ಯೆಯನ್ನು ನಿಭಾಯಿಸಲು ಪಾಲಿಕೆ ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಅಧಿಕಾರಿಗಳು, ನದಿ ಪಾತ್ರದಲ್ಲಿಯೇ 350 ಎಚ್‌ಪಿ ಎರಡು ಪಂಪ್‌ಸೆಟ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಡೆಡ್ ಸ್ಟೋರೇಜ್‌ನಿಂದ ನೀರು ಪೂರೈಕೆ ಸ್ಥಗಿತ ಆಗುತ್ತಿದ್ದಂತೆ ಪಂಪ್‌ಸೆಟ್‌ನಿಂದ ನದಿ ಪಾತ್ರದಲ್ಲಿಯೇ ನೀರನ್ನು ಪಂಪ್ ಮಾಡಿ ನಗರಕ್ಕೆ ಪೂರೈಕೆ ಮಾಡಿದರೂ ಸಿಗುವುದು ನಿತ್ಯ 55 ಎಂಎಲ್‌ಡಿ ಮಾತ್ರ.
ಉಳಿದ ಕೊರತೆಯಾಗಲಿರುವ ನೀರಿನ ಪ್ರಮಾಣವನ್ನು ಡೆಡ್ ಸ್ಟೋರೇಜ್‌ನಿಂದಲೇ ಪಡೆಯುವ ಪ್ರಯತ್ನವನ್ನು ಮಾಡಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದ್ದು, ಅದು ಕೂಡ 10 ದಿನಗಳಿಗೆ ಮಾತ್ರ ಸಿಗಲಿದೆ ಎನ್ನಲಾಗುತ್ತಿದೆ.












Click it and Unblock the Notifications