ಸುಮಲತಾ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದ ಶಿವರಾಜ್ ಕುಮಾರ್
ಮೈಸೂರು, ಮಾರ್ಚ್ 25:ನಾನು ನಟಿ ಸುಮಲತಾ ಪರ ಪ್ರಚಾರಕ್ಕೆ ಹೋಗುವುದಿಲ್ಲ. ನನಗೆ ಅವರು ಬೆಂಬಲ ನೀಡಿ ಎಂದು ಕೇಳಿಲ್ಲ. ಅವರು ಬನ್ನಿ ಎಂದು ಆಹ್ವಾನ ನೀಡಿದರೂ ನಾನು ಹಿಂದೆ ಸರಿಯುತ್ತೇನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದೇವರು ಬಡವ ನೀನು ಮಡಗಿದ ಹಾಗೆ ಇರು ಅಂತ ಹೇಳಿದ್ದಾನೆ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು. ನಾನು ಅಷ್ಟು ಬುದ್ಧಿ ವಂತ ಅಲ್ಲ. ಸ್ವಲ್ಪ ಬುದ್ಧಿ ಬಂದಿದೆ. ಅದನ್ನು ಕಾಪಾಡಿಕೊಳ್ಳುತ್ತೇನೆ. ರಾಜಕೀಯ ದಯವಿಟ್ಟು ಬೇಡ ಸಾರ್. ಕಾವೇರಿ ಗಲಾಟೆಯಲ್ಲೂ ಜನ ನಟರು ಬರಲಿಲ್ಲ ಎಂದು ಕೇಳುತ್ತಾರೆ. ಆದರೆ ಅಲ್ಲಿ ಬಂದು ಏನು ಮಾಡೋಣ ಹೇಳಿ ಎಂದು ಪ್ರಶ್ನಿಸಿದರು.
ಹೋರಾಟ ನಡೆಯುವಾಗಲೆಲ್ಲಾ ನಾವು ಅಲ್ಲಿ ಬಂದೆವೆಂದರೆ, ಜನ ಸೆಲ್ಫಿಗೆ ಮುಗಿ ಬೀಳುತ್ತಾರೆ. ಕೆಲವು ಬಾರಿ ಎಷ್ಟು ಬೈದರೂ, ಕೋಪ ಮಾಡಿಕೊಂಡರೂ ಅದು ನಿಲ್ಲಲ್ಲ. ನಮಗೆ ಅದು ಬೇಸರ ತರಿಸುತ್ತದೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.

ಶಿವಮೊಗ್ಗಕ್ಕೂ ಪ್ರಚಾರಕ್ಕೆ ಹೋಗುವುದಿಲ್ಲ. ಅಂದು ನನ್ನ ಪತ್ನಿಗಾಗಿ ಪ್ರಚಾರಕ್ಕೆ ಹೋಗಿದ್ದೆ. ಈಗ ಮಧು ಅವರ ಪರವಾಗಿ ಗೀತಾ ಪ್ರಚಾರಕ್ಕೆ ಹೋಗಬಹುದು ಎಂದು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದರು.
ಮಂಡ್ಯದಲ್ಲಿ ಸುಮಲತಾಗೆ ಸಪೋರ್ಟ್ ಮಾಡ್ತಾರ ಶಿವಣ್ಣ?
ಇನ್ನು ನಟಿ ವಿಜಯಲಕ್ಷ್ಮಿ ಅವರು ಸಹಾಯ ಮಾಡುವಂತೆ ವಿಡಿಯೋದಲ್ಲಿ ತಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ವಿಜಯಲಕ್ಷ್ಮಿ ಒಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಸಾಧ್ಯವಿಲ್ಲ. ಎಲ್ಲರಿಗೂ ಸಹಾಯ ಮಾಡುತ್ತಿರುತ್ತೇನೆ. ಒಂದು ಕೈಯ್ಯಲ್ಲಿ ಮಾಡಿದ ಸಹಾಯ ಮತ್ತೊಂದು ಕೈಗೆ ಗೊತ್ತಾಗದ ರೀತಿ ಇರಬೇಕು. ಅವರಿಗೆ ಸಹಾಯ ಮಾಡುವ ಅಗತ್ಯ ಇಲ್ಲ. ಅವರ ಮನಸ್ಸಿಗೆ ಏನೇನು ಬರುತ್ತೋ ಮಾತಾಡಲಿ, ಅವರು ಕೇಳಿರುವುದರಲ್ಲಿ ನ್ಯಾಯ ಇದೆಯೋ ಇಲ್ಲವೋ ನೋಡಬೇಕು. ನಾವು ಸರಿನೋ, ಅವರು ಸರಿನೋ ದೇವರೇ ನೋಡಬೇಕು. ಎಲ್ಲರಿಗೂ ಕಷ್ಟ ಬರುತ್ತೆ.ಎಲ್ಲಾ ಇದ್ದು ಬೇಡೋದು ಸರಿಯಲ್ಲ ಎಂದು ಶಿವರಾಜ್ ಕುಮಾರ್ ಹೇಳಿದರು.











Click it and Unblock the Notifications