ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಗ್ಯಾಸ್‌ ಪೈಪ್‌ಲೈನ್ ಯೋಜನೆ; ಬಿಜೆಪಿ ನಾಯಕರ ನಡುವೆ ತಿಕ್ಕಾಟ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 25; ಮೈಸೂರಿನಲ್ಲಿ ನಡೆಯುತ್ತಿರುವ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಯೋಜನೆಗೆ ಇಬ್ಬರು ಸ್ಥಳೀಯ ಬಿಜೆಪಿ ನಾಯಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ‌ ಈ ಮಹತ್ವದ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಸದರಿ ಯೋಜನೆಗೆ ಅನುಮತಿ ನೀಡದಂತೆ ಶಾಸಕ ಎಸ್. ಎ. ರಾಮದಾಸ್ ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಪ್ರತಿ ಮನೆಗೂ ಅಡುಗೆ ಅನಿಲ ಪೂರೈಸುವ ನಿಟ್ಟಿನಲ್ಲಿ, ದ್ರವ ರೂಪದ ನೈಸರ್ಗಿಕ ಅನಿಲವನ್ನು ಮನೆ ಮನೆಗೆ ಪೂರೈಸುವ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿರುವ ಈ ಕಾಮಗಾರಿಯ ಈಗಾಗಲೇ ಭರದಿಂದ‌ ಸಾಗುತ್ತಿದೆ.

ಸಿಹಿಸುದ್ದಿ: ಮನೆಯಲ್ಲಿ ಕುಳಿತುಕೊಂಡೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಸುಲಭ ವಿಧಾನ ಸಿಹಿಸುದ್ದಿ: ಮನೆಯಲ್ಲಿ ಕುಳಿತುಕೊಂಡೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಸುಲಭ ವಿಧಾನ

ಸದರಿ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ 56.8 ಕೆ. ಎಲ್. ಸಾಮರ್ಥ್ಯದ ಎರಡು ಟ್ಯಾಂಕ್​ಗಳನ್ನು ಅಳವಡಿಸಲಾಗಿದೆ. ಬಿಡದಿಯಿಂದ ಮೈಸೂರಿನವರೆಗೆ 130 ಕಿ. ಮೀ. ಮುಖ್ಯಪೈಪ್ ಲೈನ್ ಮೂಲಕ ಅನಿಲ ಪೂರೈಕೆ ಮಾಡುವ ಯೋಜನೆ ರೂಪಿಸಲಾಗಿದೆ.

SA Ramdas And Prathap Simha Fight On Gas Pipeline Project

ಇದಕ್ಕಾಗಿ ಹೆಬ್ಬಾಳು ಮತ್ತು ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಎಲ್​ಎನ್​ಜಿ ಟ್ಯಾಂಕ್‌ಗಳಲ್ಲಿ ಅಡುಗೆ ಅನಿಲ ಸಂಗ್ರಹಿಸಿ, ಪೈಪ್ ಲೈನ್ ಮೂಲಕ ಮನೆಮನೆಗೆ ಅನಿಲ ಪೂರೈಕೆ ಮಾಡಲಾಗುವುದು. ಮೇ ಅಂತ್ಯದಲ್ಲಿ ಯೋಜನೆ ಮುಕ್ತಾಯಗೊಳ್ಳುವ ನಿರೀಕ್ಷೆ ಹೊಂದಿದ್ದು, ಈ ಮೂಲಕ 3.75 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಮೈಸೂರು; ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ! ಮೈಸೂರು; ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ!

ನಿರೀಕ್ಷೆಯಂತೆ ಈ‌ ಯೋಜನೆ ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ, ಮೈಸೂರಿನ ಪ್ರತಿ ಮನೆಮನೆಗೆ ಇನ್ನು ಮುಂದೆ ಪೈಪ್​ನಲ್ಲೇ ಅಡುಗೆ ಅನಿಲ ಪೂರೈಕೆ ಆಗಲಿದ್ದು, ಸಾರ್ವಜನಿಕರು ಮನೆಯಲ್ಲಿ ಟ್ಯಾಪ್ ತಿರುಗಿಸಿದರೆ ಅಡುಗೆ ಅನಿಲ ಲಭ್ಯವಾಗಲಿದೆ. ಅಲ್ಲದೆ‌ ಪ್ರಮುಖವಾಗಿ ಸಾರ್ವಜನಿಕರು ಗ್ಯಾಸ್ ಬುಕ್ ಮಾಡುವ ಅಥವಾ ಗ್ಯಾಸ್ ಸಿಲಿಂಡರ್ ಬರುವವರೆಗೂ ಕಾಯಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಳಸಿದಷ್ಟು ಗ್ಯಾಸ್​ಗೆ ಮಾತ್ರ ಬಿಲ್ ಕಟ್ಟಬೇಕಾಗುತ್ತದೆ.

ಗ್ಯಾಸ್, ಅಡುಗೆ ಎಣ್ಣೆ ಇಳಿಸದಿದ್ದರೆ 2023ರ ಚುನಾವಣೆಯಲ್ಲಿ ಇದೇ ಉತ್ತರ; ಡಿಕೆಶಿಗ್ಯಾಸ್, ಅಡುಗೆ ಎಣ್ಣೆ ಇಳಿಸದಿದ್ದರೆ 2023ರ ಚುನಾವಣೆಯಲ್ಲಿ ಇದೇ ಉತ್ತರ; ಡಿಕೆಶಿ

ಬಿಜೆಪಿ ಶಾಸಕರಿಂದಲೇ ವಿರೋಧ; ಆದರೆ ಕೇಂದ್ರ ಸರ್ಕಾರದ ಗ್ಯಾಸ್ ಪೈಪ್ ಲೈನ್ ಮತ್ತು ಕೇಬಲ್ ಅಳವಡಿಕೆಗೆ ಬಿಜೆಪಿ ಶಾಸಕರಿಂದಲೇ ವಿರೋಧ ಕೇಳಿ ಬಂದಿದೆ. ಸದರಿ ಯೋಜನೆಯ ಕಾಮಗಾರಿ ಮೈಸೂರಿನಲ್ಲಿ ನಡೆಯುತ್ತಿದ್ದರೂ, ಅನಿಲ ಪೈಪ್ ಲೈನ್ ಅಳವಡಿಕೆಗೆ ಅನುಮತಿ ಕೊಡದಂತೆ ಕೆ. ಆರ್. ಕ್ಷೇತ್ರದ‌ ಬಿಜೆಪಿ ಶಾಸಕ ಎಸ್. ಎ. ರಾಮದಾಸ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪ್ರಮುಖವಾಗಿ ತಮ್ಮ ಕ್ಷೇತ್ರದಲ್ಲಿ ಈ ಯೋಜನೆಗೆ ಅವಕಾಶ ನೀಡದಂತೆ ಕೋರಿರುವ ಅವರು, ಕೆ. ಆರ್. ಕ್ಷೇತ್ರದಲ್ಲಿ ಉತ್ತಮವಾದ ರಸ್ತೆ ಮಾಡಿದ್ದೇವೆ‌. ಈಗ ಅದನ್ನು ಅಗೆದು ಅನಿಲ ಪೈಪ್ ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಅನಿಲ ಪೈಪ್ ಲೈನ್ ಅಳವಡಿಕೆಗೆ ಅನುಮತಿ ಕೊಡಬಾರದೆಂದು ಪತ್ರ ಬರೆದಿದ್ದಾರೆ. ಆ ಮೂಲಕ ಮೈಸೂರು ನಗರದ ಕೆ. ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಅನಿಲ ಪೈಪ್ ಲೈನ್ ಅಳವಡಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಯೋಜನೆಗೆ ಬಿಜೆಪಿ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇರ್‌ ಮಾಡೋದಿಲ್ಲ; ಈ ನಡುವೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಕಾಮಗಾರಿಗೆ ಅನುಮತಿ ನೀಡದಂತೆ ಶಾಸಕ ರಾಮದಾಸ್ ಪತ್ರ ಬರೆದಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, "ಪೈಪ್ ಲೈನ್ ಮೂಲಕ ಗ್ಯಾಸ್ ನೀಡುವ ಯೋಜನೆಗೆ ಅನುಮತಿ ನೀಡದಂತೆ ಪತ್ರ ಬರೆದಿರುವ ರಾಮದಾಸ್, ನರೇಂದ್ರ ಮೋದಿಗಿಂತ ಸೀನಿಯರ್, ಅವರಿಗಿಂತ ಬುದ್ದಿವಂತರು ಜ್ಞಾನಿಗಳು. ಕೇವಲ ಬ್ಯಾನರ್ ಅಲ್ಲಿ ಮೋದಿ ಪೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗುವುದಿಲ್ಲ. ಮೋದಿ ಯೋಜನೆಗಳನ್ನು ವಿರೋಧಿಸಿದರೆ ಜನ ಪಾಠ ಕಲಿಸುತ್ತಾರೆ" ಎಂದು ಹೇಳಿದ್ದಾರೆ.‌

"ಸದರಿ ಯೋಜನೆಯನ್ನು ಕಾಂಗ್ರೆಸ್-ಜೆಡಿಎಸ್ ಶಾಸಕರು ವಿರೋಧಿಸಿಲ್ಲ. ನಮ್ಮದೇ ಪಕ್ಷದ ಶಾಸಕರು ವಿರೋಧಿಸಿದ್ದಾರೆ. ಅವರನ್ನು ತಾಯಿ ಚಾಮುಂಡೇಶ್ವರಿ ಹಾಗೂ ಮೈಸೂರಿನ ಜನ ನೋಡಿಕೊಳ್ಳುತ್ತಾರೆ. ಆದರೆ ಈ ರೀತಿ ಚಿಲ್ಲರೆ ರಾಜಕಾರಣ ಮಾಡಬೇಡಿ. ನಾನು ಇದ್ಯಾವುದಕ್ಕೂ ಕೇರ್ ಮಾಡುವುದಿಲ್ಲ, ಈ ಯೋಜನೆಯನ್ನು ಪೂರ್ತಿ ಮಾಡುತ್ತೇನೆ" ಎಂದು ಶಾಸಕ ರಾಮದಾಸ್‌ಗೆ ತಿರುಗೇಟು ನೀಡಿದ್ದಾರೆ.

ಪಾಲಿಕೆ ಕೌನ್ಸಿಲ್ ಸಭೆಯೂ ರದ್ದು; ಈ ನಡುವೆ ಅಡುಗೆ ಅನಿಲ ಪೂರೈಸುವ ಯೋಜನೆಗೆ ಸಂಬಂಧಿಸಿದಂತೆ ಗುರುವಾರ ಮಧ್ಯಾಹ್ನ ನಡೆಯಬೇಕಿದ್ದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಪಾಲಿಕೆ ಕೌನ್ಸಿಲ್ ಸಭೆಯನ್ನು ಕೋರಂ ಅಭಾವದ ಹಿನ್ನೆಲೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ ಏಕಾಏಕಿ ರದ್ದು ಮಾಡಿದ್ದಾರೆ.

ಇಂದಿನ ಕೌನ್ಸಿಲ್ ಸಭೆಗೆ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಗೈರಾಗಿದ್ದ ಹಿನ್ನೆಲೆಯಲ್ಲಿ ಸಭೆ ರದ್ದುಗೊಳಿಸಲಾಗಿದೆ. ಇಂದಿನ ಸಭೆಯಲ್ಲಿ ಅನಿಲ ಯೋಜನೆ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಸದರಿ ಯೋಜನೆಗೆ ಬಿಜೆಪಿ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದ್ದು, ಈ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆದರೆ ಗದ್ದಲ ಹೆಚ್ಚುವುದನ್ನು ಅರಿತು ಸಭೆಯನ್ನು ಕ್ಯಾನ್ಸಲ್ ಮಾಡಲಾಗಿದೆ ಎಂಬ ಮಾತು ಸಹ ಕೇಳಿಬಂದಿದ್ದು, ಕೌನ್ಸಿಲ್ ಸಭೆಗೆ ಹಾಜರಾಗದ ಪಾಲಿಕೆ ಸದಸ್ಯರ‌ ನಡೆ ಕುತೂಹಲ ಕೆರಳಿಸಿದೆ.

ಪ್ರತಾಪ್ ಸಿಂಹ ಕಿಡಿ; ಪಾಲಿಕೆ ಕೌನ್ಸಿಲ್ ಸಭೆ ದಿಢೀರ್‌ ರದ್ದಾಗಿದ್ದಕ್ಕೆ ಸಂಸದ ಪ್ರತಾಪ್‌ ಸಿಂಹ ಕೆಂಡಾಮಂಡಲರಾದರು. ಸಭೆ ರದ್ದಾದ ವಿಷಯದ ಕುರಿತು ಮೇಯರ್ ಸುನಂದಾ ಪಾಲನೇತ್ರರನ್ನು ತರಾಟೆಗೆ ತೆಗೆದುಕೊಂಡ‌ರು.

"ನಾವೂ ಕೆಲಸ ಕಾರ್ಯ ಬಿಟ್ಟು ಬಂದಿದ್ದೇವೆ, ಆದರೆ ನೀವು ಏಕಾಏಕಿ ಸಭೆ ರದ್ದು ಮಾಡಿದ್ದು ಏಕೆ?. ಕೋರಂ ಅಭಾವವಿದ್ದರೆ ಅರ್ಧ ಗಂಟೆ ಸಭೆಯನ್ನು ಮುಂದೂಡಬೇಕಿತ್ತು. ಅದನ್ನು ಬಿಟ್ಟು ಸಭೆ ಪ್ರಾರಂಭವಾದ 10 ನಿಮಿಷದಲ್ಲೇ ರದ್ದು ಮಾಡಬೇಕಿತ್ತಾ?. ನಾವು ಸಭೆಗೆ ಬರಬೇಕು ಎಂದು ಟೈಮ್ ಫಿಕ್ಸ್ ಮಾಡಿಕೊಂಡು ಬಂದಿರುತ್ತೇವೆ. ಹಲವು ವಿಷಯಗಳನ್ನ ಚರ್ಚಿಸಬೇಕು ಎಂದು ಭಾವಿಸಿ ಬಂದಿರುತ್ತೇವೆ. ಅರ್ಧ ಗಂಟೆ ಮುಂದೂಡಿ ಬಳಿಕ ಸಭೆ ನಡೆಸಬಹುದಿತ್ತು" ಎಂದು ಮೇಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

English summary
Mysuru Krishnaraja assembly seat BJP MLA S.A. Ramadas and Prathap Simha fight in the issue of gas pipeline project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X