ಮೈಸೂರಿನಲ್ಲಿ ನರೇಗಾದಡಿ ಉದ್ಯೋಗ ಕ್ರಾಂತಿ: ಇಲ್ಲಿದೆ ವಿಶೇಷ ಸಾಧನೆಯ ವಿವರ
ಮೈಸೂರು, ಏಪ್ರಿಲ್ 01: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಮೂಲಕ ಉದ್ಯೋಗ ಕ್ರಾಂತಿ ನಡೆಸಲು ಮುಂದಾಗಿರುವ ಮೈಸೂರು ಜಿಲ್ಲಾ ಪಂಚಾಯಿತಿ ಮಾನವ ದಿನಗಳಲ್ಲಿ ಶೇ.100ರಷ್ಟು ಗುರಿ ಸಾಧಿಸುವ ಮೂಲಕ ಗಮನಸೆಳೆದಿದೆ. ಸದ್ಯ ಗ್ರಾಮೀಣ ಭಾಗದ ಜನರ ಜೀವನಕ್ಕೆ ಬಲವಾಗಿ ನಿಂತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು 2024-25ನೇ ಸಾಲಿನಲ್ಲಿ ಶೇ.101.83 ರಷ್ಟು ಗುರಿ ಸಾಧಿಸಿ ಮಾದರಿಯಾಗಿದೆ.
ಮೈಸೂರು ಜಿಲ್ಲೆಯಲ್ಲಿ 3,38,973 ಲಕ್ಷ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಇವುಗಳಲ್ಲಿ 1,46,368 ಕುಟುಂಬಗಳ ಜಾಬ್ ಕಾರ್ಡ್ಗಳು ಸಕ್ರಿಯವಾಗಿದ್ದು, 277379 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿರುವುದು ಸಾಧನೆ ಹಿಡಿದ ಕೈಕನ್ನಡಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2400000 (24 ಲಕ್ಷ) ಮಾನವ ದಿನಗಳ ಗುರಿ ನಿಗಧಿಯಾಗಿತ್ತು.

ಇದರಲ್ಲಿ ಜಿಲ್ಲೆ 2443834 ಗುರಿ ಸಾಧಿಸಿದ್ದು, ಶೇ.101.83 ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕು ಶೇ.119.59 ರಷ್ಟು ಗುರಿ ಸಾಧನೆ ಮಾಡಿದೆ. ನಿಗದಿತ ಗುರಿ ಮೀರಿದ ಸಾಧನೆ ಮಾಡಿ ಜನಮೆಚ್ಚುಗೆಯ ಪ್ರಶಂಸೆಗೆ ಪಾತ್ರವಾಗಿದೆ. ಈ ತಾಲೂಕಿನಲ್ಲಿ ಒಟ್ಟು 151084 ಮಾನವ ದಿನ ಸೃಜನೆ ಗುರಿ ಹೊಂದಲಾಗಿದ್ದು, ಇದರಲ್ಲಿ 180678 ಮಾನವ ದಿನಗಳನ್ನು ಪೂರ್ತಿಗೊಳಿಸಿ ದಾಖಲೆ ಬರೆದಿದೆ.
ಜಿಲ್ಲಾವಾರು ನೋಡುವುದಾದರೆ ತಿ.ನರಸೀಪುರ 356975 ಮಾನವ ದಿನ ಗುರಿಯಲ್ಲಿ 402286 ಪೂರೈಸಿ ಶೇ.112.69ರಷ್ಟು ಸಾಧನೆ ಮಾಡಿದೆ. ಸರಗೂರು ತಾಲ್ಲೂಕು 176261 ಮಾನವ ದಿನ ಗುರಿಯಲ್ಲಿ 194478 ಪೂರೈಸಿ ಶೇ.110.34 ಸಾಧಿಸಿದ್ದು, ಪಿರಿಯಾಪಟ್ಟಣ ತಾಲ್ಲೂಕು 314707 ಮಾನವ ದಿನ ಗುರಿಯಲ್ಲಿ 332733 ಮಾನವ ದಿನ ಸೃಷ್ಟಿಸಿ ಶೇ.105.73 ಸಾಧನೆ ಮಾಡಿದೆ. ಸಾಲಿಗ್ರಾಮ ತಾಲ್ಲೂಕು 155098 ಮಾನವ ದಿನ ಗುರಿಯಲ್ಲಿ 161140 ಮಾನವ ದಿನ ಸೃಷ್ಟಿಸಿ ಶೇ.103.90 ರಷ್ಟು ಸಾಧನೆ ಮಾಡಿದೆ. ಹಾಗೂ ಎಚ್.ಡಿ.ಕೋಟೆ ತಾಲ್ಲೂಕು 387119 ಮಾನವ ದಿನಗಳಿಗೆ 401055 ಮಾನವ ದಿನಗಳನ್ನು ಪೂರೈಸಿ ಶೇ.103.60 ಗುರಿ ಸಾಧಿಸಿದೆ.
ಇದರೊಂದಿಗೆ ಒಂಭತ್ತು ತಾಲ್ಲೂಕಿನಲ್ಲಿ ಆರು ತಾಲ್ಲೂಕು ಶೇ.100 ಗುರಿ ಮೀರಿದ ಸಾಧನೆ ತೋರಿ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕ್ರಾಂತಿ ಆರಂಭಿಸಿದೆ. ಆ ಮೂಲಕ ದುಡಿಯುವ ಕೈ ಕೂಲಿ, ತಾವಿರುವಲ್ಲೇ ಉದ್ಯೋಗ ನೀಡಿ ಜನರ ವಲಸೆ ತಪ್ಪಿಸಿ ಗ್ರಾಮೀಣ ಜನರ ಸಬಲೀಕರಣದ ಸಾಧನೆ ಮಾಡಿದೆ. ಅಂತರ್ಜಲ ಚೇತನ ಸಂರಕ್ಷಣೆ ಕಾಮಗಾರಿ, ರೈತರ ಕ್ರಿಯಾ ಯೋಜನೆ, ಹಸಿರೀಕರಣ ಕಾಮಗಾರಿ, ಶಾಲಾಭಿವೃದ್ಧಿ ಕಾಮಗಾರಿಗಳು, ಸಂಜೀವಿನಿ ಶೆಡ್ ನಿರ್ಮಾಣ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.
ಇನ್ನು ರಸ್ತೆ ಕಾಮಗಾರಿ, ಚರಂಡಿ ಹಾಗೂ ಇನ್ನಿತರ ಸಮುದಾಯ ಮತ್ತು ವೈಯುಕ್ತಿಕ ಕಾಮಗಾರಿಗಳನ್ನು ಸೇರಿಸಲಾಗಿದೆ. ಇದರಿಂದ ಜನರಿಗೆ, ರೈತರಿಗೆ ಹಾಗೂ ಕೆಲಸ ಮಾಡುವವರಿಗೆ ಪ್ರಯೋಜನ ಸಿಗುತ್ತಿದೆ. ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮ-ನರೇಗಾ ಯೋಜನೆ ಕೂಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರನ್ವಯ ಕರ್ನಾಟಕದಲ್ಲಿ 2024-25 ನೇ ಸಾಲಿನಲ್ಲಿ 349 ರೂ. ಗಳಿಂದ ಕೂಲಿಯನ್ನು 2025-26 ನೇ ಸಾಲಿನಲ್ಲಿ 370 ರೂ.ಗಳಿಗೆ ಕೂಲಿ ಹೆಚ್ಚಳ ಮಾಡಿದೆ. ಏಪ್ರಿಲ್ 1, 2025 ರಿಂದ 370 ರೂ.ಗಳ ಕೂಲಿ ಜಾರಿಯಲ್ಲಿರುತ್ತದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಗಳ ಮಾಹಿತಿಗಾಗಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಏಕೀಕೃತ ಸಹಾಯವಾಣಿ 8277506000 ಅನ್ನು ಸ್ಥಾಪಿಸಲಾಗಿರುತ್ತದೆ. ಯಾವುದೇ ಮಾಹಿತಿಗಾಗಿ ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ 8277506000 ಸಂಖ್ಯೆಗೆ ಕರೆ ಮಾಡಬಹುದು.
ಈ ಕುರಿತು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಮಾತನಾಡಿ, ಜಿಲ್ಲೆಯ 9 ತಾಲ್ಲೂಕಿನಲ್ಲಿ ಆರು ತಾಲ್ಲೂಕುಗಳು ನೂರರ ಗುರಿ ಸಾಧನೆ ಮೀರಿ ಜನರಿಗೆ ಉದ್ಯೋಗ ನೀಡಿರುವುದು ಸಂತಸ ತರಿಸಿದೆ. ಇದಕ್ಕೆ ಸರ್ಕಾರ ಮ-ನರೇಗಾದಡಿಯಲ್ಲಿ ಕೈಗೊಂಡ ಹಲವು ಯೋಜನೆಗಳು ಕಾರಣವಾಗಿದೆ. ಗ್ರಾಮೀಣ ಜನರ ಬದುಕಿಗೆ ಮ-ನರೇಗಾ ಎಂದೆಂದೂ ಊರುಗೋಲಾಗಿ ಕೆಲಸ ಮಾಡಲು ಸದಾ ಸಿದ್ಧವಿದೆ. ಗ್ರಾಮೀಣ ಭಾಗದ ಜನರು ಮತ್ತಷ್ಟು ಜಾಗೃತರಾಗಿ ಮ-ನರೇಗಾ ಯೋಜನೆ ಬಳಸಿಕೊಳ್ಳಬೇಕು ಎಂದಿದ್ದಾರೆ.
ವಾರ್ಷಿಕ ಪ್ರಗತಿ ಕಾರ್ಯ ಹೇಗಿದೆ?
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಮಾತನಾಡಿ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನ ಸೇರಿದಂತೆ ಅನೇಕ ಅರಿವು ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋದ ಪರಿಣಾಮ ಜಿಲ್ಲೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪುರುಷರು, ಮಹಿಳೆಯರು ಹಾಗೂ ಹಿರಿಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕೃಷಿಯಲ್ಲಿ ಅನೇಕರ ಬದಕನ್ನೇ ನರೇಗಾ ಬದಲಿಸಿರುವ ಅನೇಕ ಉದಾಹರಣೆಗಳಿವೆ ಎಂದಿದ್ದಾರೆ.












Click it and Unblock the Notifications