ಮೈಸೂರಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ರೊಬೋಟ್; ವಿಶೇಷತೆಗಳು
ಮೈಸೂರು, ಜನವರಿ 29: ಇಂದಿಗೂ ಮಹಾನಗರಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದೇ ನಗರ ಪಾಲಿಕೆಗಳಿಗೆ ದೊಡ್ಡ ಸವಾಲಾಗಿದೆ. ಅದರಲ್ಲೂ ಮ್ಯಾನ್ ಹೋಲ್ ಗಳನ್ನು ಸ್ವಚ್ಛಗೊಳಿಸುವಾಗಲೇ ಹಲವಾರು ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ.
ಆದರೆ, ಇನ್ನು ಮುಂದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೌರ ಕಾರ್ಮಿಕರು ಅಪಾಯದ ನಡುವೆ ಸ್ವಚ್ಛತಾ ಕಾರ್ಯ ಮಾಡಬೇಕಾಗಿಲ್ಲ. ಇದೀಗ ನಗರದ ಒಳ ಚರಂಡಿಗಳನ್ನು ಸ್ವಚ್ಛಗೊಳಿಸಲು ರೊಬೋಟ್ ಯಂತ್ರ ಬಂದಿದೆ. ಈ ಯಂತ್ರವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಬಳಸುತ್ತಿದೆ ಎಂಬುದು ಹೆಗ್ಗಳಿಕೆ.
ದೇಶದಲ್ಲೇ ಸ್ವಚ್ಛ ನಗರಿ ಎಂಬ ಖ್ಯಾತಿ ಪಡೆದಿರುವ ಮೈಸೂರು ಈ ಹಿಂದೆ ಅನೇಕ ಬಾರಿ ಸ್ವಚ್ಛ ಭಾರತ ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಈ ಬಾರಿ ಇನ್ನೂ ಹೆಚ್ಚಿನ ಪ್ರಶಸ್ತಿ ಗಳಿಸುವ ಗುರಿಯನ್ನೂ ಹೊಂದಿದೆ.

ಈ ಕುರಿತು ಒನ್ ಇಂಡಿಯಾ ಕನ್ನಡದ ಜೊತೆ ಪಾಲಿಕೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಶಿವಯ್ಯ ಮಾತನಾಡಿದ್ದಾರೆ. "ಒಳಚರಂಡಿ ಸ್ವಚ್ಛಗೊಳಿಸಲು ನಮ್ಮಲ್ಲಿ ಈಗಾಗಲೇ ಯಂತ್ರಗಳಿವೆ. ಆದರೆ, ಕಳೆದ ಶತಮಾನದಲ್ಲೇ ಅಳವಡಿಸಲಾಗಿರುವ ಒಳಚರಂಡಿ ಪೈಪುಗಳು ಇರುವ ಸ್ಥಳಗಳಲ್ಲಿ ರಸ್ತೆಗಳು ತೀರಾ ಕಿರಿದಾಗಿದ್ದು ಇಲ್ಲಿಗೆ ವಾಹನಗಳು ಹೋಗಿ ಶುಚಿ ಮಾಡಲು ಆಗುತ್ತಿಲ್ಲ" ಎಂದಿದ್ದಾರೆ.
"ಪಾಲಿಕೆಯು ಪೌರ ಕಾರ್ಮಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರೊಬೋಟ್ ಅನ್ನು ಖರೀದಿಸಿದೆ. ಈ ರೊಬೋಟ್ ಕಿರಿದಾದ ರಸ್ತೆಗಳಲ್ಲೂ ಕಾರ್ಯ ನಿರ್ವಹಿಸಲಿದೆ. ಇನ್ನು ಕಿರಿದಾದ ರಸ್ತೆಗಳಲ್ಲಿ ಒಳ ಚರಂಡಿ ಸ್ವಚ್ಛತೆಗೆ ಕಾರ್ಮಿಕರನ್ನು ಬಳಸುವುದಿಲ್ಲ" ಎಂದು ಹೇಳಿದರು.
ಇದಲ್ಲದೆ ಕೇಂದ್ರ ಸರ್ಕಾರ ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್ ಎನ್ನುವ ಸ್ಪರ್ಧೆಯನ್ನು ದೇಶಾದ್ಯಂತ ನಡೆಸುತ್ತಿದ್ದು ಇದಕ್ಕೆ ಪೌರ ಕಾರ್ಮಿಕರ ಸುರಕ್ಷತೆಗಾಗಿ ದೇಶದ ಪಾಲಿಕೆಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿ ಅಂಕಗಳನ್ನು ನೀಡುತ್ತದೆ.

ಮುಂದಿನ ಏಪ್ರಿಲ್‌ನಲ್ಲಿ ಅಂಕಗಳನ್ನು ನೀಡಲಿದ್ದು ಇದಕ್ಕೆ ಮೊದಲ ಬಹುಮಾನ 10 ಕೋಟಿ ರೂಪಾಯಿ ಇದೆ. ಪಾಲಿಕೆಯು ಈ ಬಹುಮಾನ ಗಳಿಸುವ ಗುರಿಯನ್ನು ಹೊಂದಿದ್ದು, ಈಗಾಗಲೇ ಪೌರ ಕಾರ್ಮಿಕರಿಗೆ ಸ್ವಚ್ಛತೆಗಾಗಿ ವಿಶಿಷ್ಟ ಯೂನಿಫಾರ್ಮ್ ಅನ್ನೂ ವಿತರಿಸಲಾಗಿದೆ.
ಒಳ ಚರಂಡಿ ಸ್ವಚ್ಛ ಮಾಡಲೆಂದೇ ಪುಣೆಯಿಂದ ಬ್ಯಾಂಡಿಕೂಟ್ ರೋಬೋಟ್ ಖರೀದಿ ಮಾಡಿದ್ದು ಇದರ ಬಳಕೆ ಬಗ್ಗೆ ಇಲ್ಲಿನ ಪೌರಕಾರ್ಮಿಕರಿಗೆ ತರಬೇತಿ ನೀಡಲು ಕಂಪನಿಯೇ ತಜ್ಞರನ್ನು ಕಳಿಸಿಕೊಡುತ್ತಿದೆ. ಈ ರೊಬೋಟ್ ಯಂತ್ರಕ್ಕೆ 37 ಲಕ್ಷ ರೂಪಾಯಿ ವೆಚ್ಚವಾಗಿದೆ.
ಈ ಯಂತ್ರವನ್ನು ನಗರಾಭಿವೃದ್ದಿ ಸಚಿವರು ಶೀಘ್ರದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಒಳ ಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸುವರ ಜೊತೆಗೆ ಇಂತಹ ಆಧುನಿಕ ಯಂತ್ರ ಬಳಕೆಗೆ ನಗರಪಾಲಿಕೆಗೆ ಬಹುಮಾನ ಬರಲಿದೆಯೇ? ಎಂಬುದನ್ನು ತಿಳಿಯಲು ಏಪ್ರಿಲ್ ತನಕ ಕಾಯಬೇಕಿದೆ.












Click it and Unblock the Notifications