MUDA Scam: ಮೂಡಾ ಹಗರಣ, ಅಧಿವೇಶನಕ್ಕೆ ಮೊದಲು ಸರ್ಕಾರದ ದಿಟ್ಟ ಹೆಜ್ಜೆ
ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಮೂಡಾ ಹಗರಣ ಭಾರೀ ಚರ್ಚೆಗೆ ಕಾರಣವಾಗಿದೆ. ಸೋಮವಾರದಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಇದಕ್ಕೂ ಮೊದಲು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪಿ. ಎನ್. ದೇಸಾಯಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ. ಈ ಮೂಲಕ ಅಧಿವೇಶನ ಆರಂಭಕ್ಕೂ ಮೊದಲು ಸರ್ಕಾರ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ಕೊಟ್ಟಿದೆ.

ಈ ಕುರಿತು ಭಾನುವಾರ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರಾಜು ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಆದೇಶ ಹೊರಡಿಸಿದ್ದಾರೆ.
ಆದೇಶದ ವಿವರಗಳು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೆ, ಈ ಕುರಿತು ದಿನ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission of Inquiry Act, 1952ರ ನಿಯಮ 3 ರ ಉಪನಿಯಮ (1) ರನ್ವಯ ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ.
ಈ ಹಿನ್ನಲೆಯಲ್ಲಿ, ಆರೋಪಗಳ ಬಗ್ಗೆ ವಿಚಾರಣೆಯನ್ನು ನಡೆಸಲು Commission of Inquiry Act, 1952ರ ನಿಯಮ 3ರ ಉಪನಿಯಮ (1)ರನ್ವಯ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಪಿ. ಎನ್. ದೇಸಾಯಿ, ರವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ.
ಸದರಿ ವಿಚಾರಣಾ ಆಯೋಗವು Commissions of Inquiry Act, 1952 ore Code of Civl Procedure ರಲ್ಲಿನ ಅವಕಾಶದಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರವನ್ನು ಹೊಂದಿರುತ್ತದೆ ಹಾಗೂ ತನಿಖೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸತಕ್ಕದ್ದೆಂದು ಸರ್ಕಾರವು ಅಪೇಕ್ಷಿಸುತ್ತದೆ. ವಿಚಾರಣಾ ಆಯೋಗದ Terms of Reference ಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ/ ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸತಕ್ಕದ್ದು ಎಂದು ಆದೇಶ ಹೇಳಿದೆ.
ವಿಚಾರಣೆ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ ದಾಖಲಾತಿಗಳು/ ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು ಎಂದು ತಿಳಿಸಿದೆ.
ತನಿಖೆಗೆ ಆದೇಶಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಮುಡಾ ನಿವೇಶನ ಹಂಚಿಕೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಶಯದೊಂದಿಗೆ ರಾಜ್ಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಪಿ. ಎನ್. ದೇಸಾಯಿ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ತನಿಖೆಗೆ ವಹಿಸಿದೆ. ಪ್ರಕರಣದ ಕೂಲಂಕಷವಾದ ವಿಚಾರಣೆ ನಡೆದು, ಸತ್ಯಾಸತ್ಯತೆ ಹೊರಬರಲಿ ಎಂದು ಆಶಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಮೂಡಾ ಹಗರಣದ ವಿಚಾರದಲ್ಲಿ ಹೋರಾಟವನ್ನು ಮಾಡುತ್ತಿವೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಮುಂಗಾರು ಅಧಿವೇಶನದಲ್ಲಿಯೂ ಈ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇತ್ತು. ಇದಕ್ಕೂ ಮೊದಲು ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಲಾಗಿದೆ.












Click it and Unblock the Notifications