ಹೊಸ ರೂಪದೊಂದಿಗೆ ಮೈಸೂರು ರೈಲ್ವೇ ಮ್ಯೂಸಿಯಂ; ನೀವೂ ಹೋಗಿ ಬನ್ನಿ
ಮೈಸೂರು, ಮಾರ್ಚ್ 14: ಭಾರತೀಯ ರೈಲ್ವೆ ಇತಿಹಾಸವನ್ನು ಸಾರುವ ಮೈಸೂರಿನ ರೈಲ್ವೆ ಮ್ಯೂಸಿಯಂ ಅನ್ನು ಇಂದು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಯಿತು.
ಇಲ್ಲಿನ ಕೆಆರ್ ಎಸ್ ರಸ್ತೆಯ ಸಿಎಫ್ ಟಿಆರ್ ಐ ಮುಖ್ಯ ದ್ವಾರದ ಎದುರು ಇರುವ ಈ ಮ್ಯೂಸಿಯಂ ಅನ್ನು ಹೊಸ ಆಕರ್ಷಣೆಗಳೊಂದಿಗೆ ಪುನರ್ ನಿರ್ಮಿಸಲಾಗಿದೆ. ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಅವರು ಉದ್ಘಾಟನೆ ಮಾಡಿದರು. ಪ್ರವಾಸೋದ್ಯಮವನ್ನು ಉತ್ತೇಜಿಸಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ದೇಶದ ಅತ್ಯಂತ ಹಳೆಯ ರೈಲ್ವೆ ಮ್ಯೂಸಿಯಂ ಅನ್ನು ಇನ್ನಷ್ಟು ಸುಂದರಗೊಳಿಸಿದ್ದು, ಇಡೀ ದೇಶದ ರೈಲ್ವೆ ಇಲಾಖೆಯ ಪಯಣದ ಹಾದಿಯನ್ನು ಈ ಮ್ಯೂಸಿಯಂ ನೆನಪಿಸಿಕೊಡಲಿದೆ.
50 ವರ್ಷ ಹಳೆಯ, ರೈಲ್ವೆ ಕಾರ್ಯಾಚರಣೆಗೆ ಸಂಬಂಧಿಸಿದ ಅಪರೂಪದ ವಸ್ತುಗಳ ದೊಡ್ಡ ಸಂಗ್ರಹವೇ ಈ ರೈಲು ಮ್ಯೂಸಿಯಂನಲ್ಲಿದೆ. ನವೀಕರಣ ಹಿನ್ನೆಲೆಯಲ್ಲಿ 2019ರ ಮಾರ್ಚ್ ನಿಂದ ಸಾರ್ವಜನಿಕರ ವೀಕ್ಷಣೆಗೆ ಇಲ್ಲಿ ಅವಕಾಶವಿರಲಿಲ್ಲ.

ರೈಲ್ವೆ ಮಾರ್ಗದ ನಿರ್ಮಾಣ, ಸುಂದರ ಪ್ರವೇಶ ದ್ವಾರ, ಕೆಫಿಟೇರಿಯಾ, ಆಡಿಯೋ -ವಿಡಿಯೋ ದೃಶ್ಯ ಕೇಂದ್ರ, ಮಕ್ಕಳ ಆಟದ ಉದ್ಯಾನವನ್ನು ಮ್ಯೂಸಿಯಂ ಒಳಗೊಂಡಿದ್ದು, ಆರಂಭದ ದಿನಗಳ ಉಗಿಬಂಡಿಗಳು, ವಿಶೇಷ ಉದ್ದೇಶದ ವಾಹನಗಳು, ವ್ಯಾಗನ್, ದೂರ ಸಂಪರ್ಕ ಉಪಕರಣ ಮತ್ತಿತರ ಹಳೆ ಕಾಲದ ವಸ್ತುಗಳನ್ನು ಪ್ರವಾಸಿಗರು ಇಲ್ಲಿ ವೀಕ್ಷಿಸಬಹುದಾಗಿದೆ.

ಮೈಸೂರಿನ ರಾಜರಿಗೆ ಸೇರಿದ ಮೊದಲ ತಲೆಮಾರಿನ ಉಗಿಬಂಡಿ ಮತ್ತು ರೈಲುಗಾಡಿಗಳು, ಮಹಾರಾಣಿಯರ ವಿಶೇಷ ಬೋಗಿ, ಹಳೆಯ ಸಿಗ್ನಲ್ ದೀಪಗಳು, ಟಿಕೆಟಿಂಗ್ ಯಂತ್ರಗಳು ಹೊಸ ರಂಗು ಪಡೆದು ಕಂಗೊಳಿಸುತ್ತಿದ್ದು, ಬ್ಯಾಟರಿಯಲ್ಲಿ ಚಲಿಸುವ ಮಿನಿ ಟಾಯ್ ರೈಲು, ಹಳೆಯ ಕಾಲದ ರೈಲು ಇಂಜಿನ್ ಗಳು, ಬೋಗಿಗಳು, ಕ್ರೇನ್, ಸ್ಟೀಮ್ ಪಂಪ್, 1910-20ರಲ್ಲಿ ಬಳಸಲಾಗುತ್ತಿದ್ದ ಡಬಲ್ ವೈರ್ ಕೇಸ್ ಪ್ಲೇಟ್ ಗಳು, 1927ರ ನ್ಯಾರೋ ಗೇಜ್ ಕೋಚ್ ಗಳು, ಜಾಯ್ ರೈಡ್, ಹಳೆಯ ಸ್ಟೀಮ್ ಇಂಜಿನ್ ರೈಲ್ವೆ ಮ್ಯೂಸಿಯಂನಲ್ಲಿದೆ. ಇಂದು ಜನರ ಪ್ರವೇಶಕ್ಕೆ ಅವಕಾಶ ನೀಡುತಿದ್ದಂತೆ ಚಿಣ್ಣರು ಮತ್ತು ಹಿರಿಯರು ಹಳೆ ಬಂಡಿಗಳನ್ನೇರಿ ಸಂಭ್ರಮಿಸಿದರು.












Click it and Unblock the Notifications