Mysuru Flood: ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ಬೆಳೆನಾಶ: ಸಂಕಷ್ಟದಲ್ಲಿ ರೈತರು!

ಮೈಸೂರು, ಜುಲೈ 21: ಕೊಡಗಿನಲ್ಲಿ ಸುರಿದ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿದ ಪರಿಣಾಮ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ರೈತರು ಬೆಳೆದಿದ್ದ ಶುಂಠಿ, ತಂಬಾಕು, ಜೋಳ ಬೆಳೆಗಳು ನಾಶವಾಗಿವೆ. ಇದರಿಂದ ರೈತರು ಲಕ್ಷಾಂತರ ರೂಪಾಯಿಯನ್ನು ಕಳೆದುಕೊಳ್ಳುವಂತಾಗಿದ್ದು, ಸಂಕಷ್ಟಕ್ಕೆ ಬಿದ್ದಂತಾಗಿದೆ. ಅದರಲ್ಲೂ ತಮ್ಮ ಬದುಕನ್ನು ಹಸನು ಮಾಡುತ್ತದೆ ಎಂಬ ವಿಶ್ವಾಸದಲ್ಲಿ ಬೆಳೆದಿದ್ದ ಶುಂಠಿ ಬೆಳೆ ನೆಲಕಚ್ಚಿರುವುದು ಬೇಸರದ ಸಂಗತಿಯಾಗಿದೆ.

ಪ್ರತಿ ಮಳೆಗಾಲದಲ್ಲಿಯೂ ಇಂತಹ ಸಮಸ್ಯೆಗಳು ಎದುರಾಗುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಹೆಚ್ಚು ಮಳೆಯಾಗಿರಲಿಲ್ಲ. ಹೀಗಾಗಿ ಲಕ್ಷ್ಮಣತೀರ್ಥ ನದಿ ಉಕ್ಕಿಹರಿದಿರಲಿಲ್ಲ. ಹೀಗಾಗಿ ಯಾವುದೇ ಸಮಸ್ಯೆಗಳು ರೈತರಿಗೆ ಎದುರಾಗಿರಲಿಲ್ಲ. ಇದರಿಂದ ಬೆಳೆದ ಬೆಳೆ ಕೈಸೇರಿ ರೈತರು ನೆಮ್ಮದಿಯುಸಿರು ಬಿಡುವಂತಾಗಿತ್ತು. ಆದರೆ ಈ ಬಾರಿಯ ಪ್ರವಾಹ ರೈತರ ಬದುಕನ್ನೇ ಸಂಕಷ್ಟಕ್ಕೆ ನೂಕಿದೆ ಎಂದರೆ ತಪ್ಪಾಗಲಾರದು.

Rain Crop Destruction Due To Lakshmana Tirtha River Flood In Hunsur

ಈ ಬಾರಿ ಶುಂಠಿಗೆ ಉತ್ತಮ ಬೆಲೆ ಇದ್ದ ಕಾರಣ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ, ಮುಸುಕಿನ ಜೋಳ ಮತ್ತು ತಂಬಾಕು ಬೆಳೆದಿದ್ದರು. ಅದರಲ್ಲೂ ಹೆಚ್ಚಿನ ರೈತರು ಈ ಹಿಂದೆ ತಂಬಾಕು ಬೆಳೆಯುತ್ತಿದ್ದರಾದರೂ ಅದನ್ನು ಬಿಟ್ಟು ಶುಂಠಿ ಬೆಳೆಗೆ ಮಾರು ಹೋಗಿದ್ದರು. ಹೀಗಾಗಿ ಹೆಚ್ಚಿನ ಪ್ರದೇಶಗಳಲ್ಲಿ ಶುಂಠಿ ಬೆಳೆ ಬೆಳೆದಿರುವುದು ಕಂಡು ಬಂದಿತ್ತು. ಬೇಸಿಗೆಯಲ್ಲಿ ಮಳೆ ಸಕಾಲದಲ್ಲಿ ಬಾರದೆ ಹೋದರೂ ಪೂರ್ವ ಮುಂಗಾರು ಉತ್ತಮವಾಗಿಯೇ ಸುರಿದಿತ್ತು. ಹೀಗಾಗಿ ರೈತರು ಸಾಲಸೋಲ ಮಾಡಿ ಬೆಳೆಗಳನ್ನು ಬೆಳೆದಿದ್ದರು. ಅದರಲ್ಲೂ ಹೆಚ್ಚಿನವರು ಶುಂಠಿ ಕೃಷಿಗೆ ಒತ್ತು ನೀಡಿದ್ದರು.

ಬೆಳೆ ನಾಶದಿಂದ ರೈತರಿಗೆ ನಷ್ಟ

ಮುಂಗಾರು ಆರಂಭ ಉತ್ತಮವಾಗಿಯೇ ಇದ್ದುದರಿಂದ ಜೋಳ, ಶುಂಠಿ ಮತ್ತು ತಂಬಾಕು ಚೆನ್ನಾಗಿಯೇ ಬೆಳೆದಿತ್ತು. ಹುಣಸೂರು ತಾಲೂಕಿನ ಕೆಲವು ಪ್ರದೇಶಗಳಲ್ಲಿ ಲಕ್ಷ್ಮಣ ತೀರ್ಥ ನದಿ ಹರಿಯುತ್ತಿದ್ದು ಇದೀಗ ನದಿಯಲ್ಲಿ ಪ್ರವಾಹ ಬಂದಿರುವ ಕಾರಣ ನೀರು ಗ್ರಾಮೀಣ ಪ್ರದೇಶಗಳ ಜಮೀನಿಗೆ ನುಗ್ಗಿದೆ.

Rain Crop Destruction Due To Lakshmana Tirtha River Flood In Hunsur

ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಪ್ರವಾಹ ಪರಿಸ್ಥಿತಿಯೂ ಹೆಚ್ಚಾಗುತ್ತಲೇ ಸಾಗುತ್ತಿದೆ. ಹೀಗಾಗಿ ಜಮೀನು ಜಲಾವೃತವಾಗಿದ್ದು, ಅದರಲ್ಲಿ ಶುಂಠಿ ಬೆಳೆ ಮುಳುಗಿದೆ. ಒಂದು ವೇಳೆ ನೀರು ಇದೇ ರೀತಿ ಹೆಚ್ಚು ದಿನ ಹಾಗೆಯೇ ನಿಂತರೆ ಶುಂಠಿ ಕೊಳೆಯಲಾರಂಭಿಸಿದರೆ ಲಕ್ಷಾಂತರ ರೂ ಖರ್ಚು ಮಾಡಿದ ರೈತನಿಗೆ ಬೆಳೆಯೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ಸದ್ಯ ಶುಂಠಿ ಬೆಳೆ ಹುಲುಸಾಗಿ ಬೆಳೆದಿದೆ. ಜತೆಗೆ ಈಗಷ್ಟೇ ಗೆಡ್ಡೆ ಕಟ್ಟುತ್ತಿದೆ. ಆದರೆ ಇದೇ ಸಮಯದಲ್ಲಿ ನೀರು ಶುಂಠಿ ಬೆಳೆದ ಜಮೀನಿಗೆ ನುಗ್ಗಿಯಿರುವುದರಿಂದ ಮುಂದೇನು ಮಾಡುವುದೆಂಬ ಚಿಂತೆಯಲ್ಲಿ ಶುಂಠಿ ಬೆಳೆಗಾರರು ಇದ್ದಾರೆ. ಕೆಲವು ವರ್ಷಗಳ ಹಿಂದೆಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಕೆಲವು ರೈತರು ಜಲಾವೃತಗೊಂಡ ಪ್ರದೇಶದಿಂದ ಶುಂಠಿಯನ್ನು ಗಿಡ ಸಹಿತ ಕಿತ್ತು ಸುರಕ್ಷಿತ ಪ್ರದೇಶಗಳಲ್ಲಿ ಸಂಗ್ರಹಿಸುವ ಪ್ರಯತ್ನ ಮಾಡಿದ್ದರು. ಆದರೆ ಈ ಬಾರಿ ಆ ರೀತಿ ಮಾಡುವ ಸ್ಥಿತಿಯಲ್ಲಿ ರೈತರಿಲ್ಲ.

Rain Crop Destruction Due To Lakshmana Tirtha River Flood In Hunsur

ಭಯದಲ್ಲೇ ದಿನ ಕಳೆಯುತ್ತಿರುವ ರೈತರು

ಶುಂಠಿ ಸೇರಿದಂತೆ ಇತರೆ ಬೆಳೆಗಳಿರುವ ಪ್ರದೇಶದಲ್ಲಿ ನೀರು ಹೆಚ್ಚು ನಿಂತರೆ ಬೆಳೆಗಳೆಲ್ಲವೂ ಕೊಳೆತು ಹೋಗಲಿದ್ದು, ಸಂಪೂರ್ಣ ನಾಶವಾಗಲಿದೆ. ಇದರ ಜತೆಗೆ ರೈತರ ಶ್ರಮ ಮತ್ತು ಹಣ ಎಲ್ಲವೂ ನೀರಲ್ಲಿಯೇ ಕೊಚ್ಚಿಹೋಗಲಿದೆ. ಈ ಸಮಸ್ಯೆ ಪ್ರತಿವರ್ಷವೂ ಆಗುತ್ತದೆ. ಹಾಗೆಂದು ರೈತರು ಬೆಳೆ ಬೆಳೆಯದೆ ಇರುವಂತೆಯೂ ಇಲ್ಲ. ಮಳೆ ಅಬ್ಬರವಿಲ್ಲದೆ ಒಂದೇ ಸಮನೆ ಸುರಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಕೊಡಗಿನಲ್ಲಿ ಕುಂಭದ್ರೋಣ ಮಳೆ ಸುರಿದು ಪ್ರವಾಹೋಪಾದಿಯಲ್ಲಿ ಲಕ್ಷ್ಮಣತೀರ್ಥ ನದಿ ಹರಿದಾಗ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತವನ್ನು ಸೃಷ್ಟಿ ಮಾಡುತ್ತಿದೆ.

ಈಗಾಗಲೇ ಲಕ್ಷ್ಮಣ ತೀರ್ಥ ನದಿ ಪಾತ್ರದ ಬಹುತೇಕ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ನೀರು ಅಲ್ಲಿಯೇ ನಿಂತ ಪರಿಣಾಮ ಕೆರೆಯಂತೆ ಗೋಚರವಾಗುತ್ತಿದೆ. ಕೊಡಗಿನಲ್ಲಿ ಮಳೆಯ ಅಬ್ಬರ ತಗ್ಗಿ ಪ್ರವಾಹ ಪರಿಸ್ಥಿತಿ ಯಥಾ ಸ್ಥಿತಿಗೆ ಬಂದರೆ ರೈತರು ನೆಮ್ಮದಿಯುಸಿರು ಬಿಡಬಹುದು. ಆದರೆ ಈಗಾಗಲೇ ಲಕ್ಷ್ಮಣತೀರ್ಥ ನದಿ ಸೃಷ್ಟಿಸಿದ ಪ್ರವಾಹ ಭಯವನ್ನುಂಟು ಮಾಡಿದೆ. ಆದರೆ ಇದು ಇಲ್ಲಿಗೆ ಮುಗಿಯುವುದಿಲ್ಲ. ಕೊಡಗಿನಲ್ಲಿ ಮುಂದೆಯೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದರೆ ಪ್ರವಾಹ ಏರ್ಪಡುವುದು ಸಹಜ. ಹೀಗಾಗಿ ನದಿ ಪಾತ್ರದ ರೈತರಲ್ಲಿ ಭಯವಂತು ಇದ್ದೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+