ರಾಘವೇಶ್ವರ ಶ್ರೀ ಪ್ರಕರಣ, ಮೈಸೂರಿನಲ್ಲಿ ಸಿಐಡಿ ವಿಚಾರಣೆ
ಮೈಸೂರು, ಜುಲೈ 21 : ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. 2012ರಲ್ಲಿ ಮೈಸೂರಿನಲ್ಲಿ ರಾಮಕಥಾ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಸಿಐಡಿ ಅಧಿಕಾರಿಗಳ ತಂಡ ಸೋಮವಾರ ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಹೇಳಿಕೆಯನ್ನು ಪಡೆದರು. ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರೀ ದಂಪತಿಗಳನ್ನು ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲು ಮಾಡಿಕೊಂಡರು. [ಶ್ರೀಗಳ ಜಾಮೀನು ರದ್ದುಗೊಳಿಸಲು ಸಾಧ್ಯವಿಲ್ಲ]

2012ರಲ್ಲಿ ಮೈಸೂರಿನಲ್ಲಿ ರಾಮಕಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಚ್.ವಿ.ರಾಜೀವ್ ಅವರು ಕಾರ್ಯಕ್ರಮ ಸಂಘಟಿಸುವ ಉಸ್ತುವಾರಿ ವಹಿಸಿಕೊಂಡಿದ್ದರು ಮತ್ತು ರಾಘವೇಶ್ವರ ಶ್ರೀಗಳು ರಾಜೀವ್ ಅವರ ಮನೆಯಲ್ಲಿಯೇ ವಾಸ್ತವ್ಯ ಹೂಡಿದ್ದರು. ಆದ್ದರಿಂದ, ರಾಜೀವ್ ಅವರ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ. [ತನಿಖೆ ರದ್ದು ಕೋರಿ ಸುಪ್ರೀಂಗೆ ರಾಘವೇಶ್ವರ ಶ್ರೀ ಅರ್ಜಿ]
'ಮೈಸೂರಿನಲ್ಲಿ ರಾಮಕಥಾ ಕಾರ್ಯಕ್ರಮ ನಡೆದಾಗ ಸ್ವಾಮೀಜಿಗಳು ನಮ್ಮ ಮನೆಯಲ್ಲಿ ಉಳಿದ್ದಿದ್ದರು. ಪ್ರೇಮಲತಾ ಅವರು ಇಲ್ಲಿಗೆ ಬಂದು ಹೋಗುತ್ತಿದ್ದರು. ಆದರೆ, ಅವರು ನಮ್ಮ ಮನೆಯಲ್ಲಿ ಒಂದು ದಿನವೂ ವಾಸ್ತವ್ಯ ಹೂಡಿರಲಿಲ್ಲ. ಗಂಗೋತ್ರಿಯಲ್ಲಿರುವ ಅವರ ಅತ್ತಿಗೆ ಮನೆಗೆ ತೆರಳುತ್ತಿದ್ದರು' ಎಂದು ರಾಜೀವ್ ಸಿಐಡಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. [ಪುತ್ತೂರಿಗೆ ಸಿಐಡಿ ತಂಡ ಭೇಟಿ]
ನ್ಯಾಯ ಸಿಗುವ ವಿಶ್ವಾಸವಿದೆ : ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಗಾಯಕಿ ಪ್ರೇಮಲತಾ ದಿವಾಕರ್ ಅವರು, 'ದೂರಿನ ಅನ್ವಯ ಸಿಐಡಿ ತನಿಖೆ ನಡೆಯುತ್ತಿದೆ. ವಿಚಾರಣೆಗೆ ಹೋದಾಗ ಪ್ರಭಾವಿಗಳು ನಡೆದುಕೊಳ್ಳುವ ರೀತಿ ಬೇಸರ ಮೂಡಿಸುತ್ತಿದೆ. ಸಾಕ್ಷಿ ನಾಶವಾಗಬಹುದು ಎಂಬ ಭಯವೂ ಇದೆ. ಆದರೆ, ನಮಗೆ ನ್ಯಾಯ ಸಿಗುವ ಭರವಸೆ ಇದೆ' ಎಂದು ಹೇಳಿದ್ದಾರೆ.
ಅಂದಹಾಗೆ ಸಿಐಡಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದ ತಂಡ ಕೆಲವು ದಿನಗಳ ಹಿಂದೆ ಪುತ್ತೂರಿಗೆ ಭೇಟಿ ನೀಡಿತ್ತು. ಪೆರಾಜೆಯಲ್ಲಿರುವ ರಾಮಚಂದ್ರಾಪುರ ಶಾಖಾ ಮಠಕ್ಕೂ ಭೇಟಿ ನೀಡಿದ್ದ ಅಧಿಕಾರಿಗಳು ಮಾಹಿತಿ ಸಂಗ್ರಹಣೆ ಮಾಡಿದ್ದರು. ಪುತ್ತೂರಿನಲ್ಲಿ ಎರಡು ವರ್ಷಗಳ ಹಿಂದೆ ರಾಘವೇಶ್ವರ ಶ್ರೀಗಳು ರಾಮಕಥಾ ಕಾರ್ಯಕ್ರಮವನ್ನು ನಡೆಸಿದ್ದರು.












Click it and Unblock the Notifications