Mysuru: ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ನೈಋತ್ಯ ರೈಲ್ವೆ
ಮೈಸೂರಿನಿಂದ ವಿವಿಧ ಭಾಗಗಳಿಗೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ಮುಂದೆ ಟಿಕೆಟ್ ಖರೀದಿ ಮಾಡುವಾಗ ಕ್ಯಾಶ್ ಇಟ್ಟುಕೊಳ್ಳುವ ಅಗತ್ಯವಿಲ್ಲ, ನಿಮ್ಮ ಯುಪಿಐ, ಆನ್‌ಲೈನ್ ಬ್ಯಾಂಕಿಂಗ್ ಬಳಸಿ ಟಿಕೆಟ್ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕ್ಯೂಆರ್ ಕೋಡ್ ಆಧರಿತ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ಚಿಲ್ಲರೆ ಸಮಸ್ಯೆ, ಕ್ಯಾಶ್ ಸಮಸ್ಯೆಗೆ ಕಡಿವಾಣ ಹಾಕಿದೆ.
ಇದೀಗ ಎಲ್ಲಾ ಕಡೆ ಕ್ಯೂಆರ್ ಕೋಡ್ ಜನಪ್ರಿಯತೆ ಪಡೆದುಕೊಂಡಿದೆ. ಕ್ಯಾಶ್‌ಲೆಶ್ ಸಿಸ್ಟಂಗೆ ಸಾರ್ವಜನಿಕರು ಹೊಂದಿಕೊಂಡಿದ್ದಾರೆ. ಇದನ್ನು ಮನಗಂಡು ರೈಲ್ವೆ ಇಲಾಖೆ ಪ್ರಯಾಣಿಕರು ಸಾಮಾನ್ಯ ವರ್ಗದ ಟಿಕೆಟ್‌ಗಳನ್ನು ಮತ್ತು ಪ್ಲಾಟ್‌ಫಾರಂ ಟಿಕೆಟ್‌ಗಳನ್ನು ಖರೀದಿಸುವ ಪದ್ಧತಿಯಲ್ಲಿ ಬದಲಾವಣೆ ತಂದಿದೆ. ಈ ಕ್ಯೂರ್ ಕೋಡ್ ಸೌಲಭ್ಯವು ಈಗ 81 ನಿಲ್ದಾಣಗಳ 94 ಅನ್ ರಿಸರ್ವ್ ಟಿಕೆಟ್ ಸಿಸ್ಟಂ (ಯುಟಿಎಸ್) ಕೌಂಟರ್‌ಗಳಲ್ಲಿ ಸಿಗಲಿದೆ.

ಇನ್ನು ಮುಂದೆ ರೈಲು ಪ್ರಯಾಣಿಕರು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ಮೊಬೈಲ್ ವಾಲೆಟ್ ಅಥವಾ ಯುಪಿಐ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಸಲೀಸಾಗಿ ಟಿಕೆಟ್ ಖರೀದಿ ಮಾಡಬಹುದಾಗಿದೆ. ಇದರಿಂದ ಪ್ರತಿ ಬಾರಿ ಕ್ಯಾಶ್ ಇಟ್ಟುಕೊಂಡು ಟಿಕೆಟ್ ಖರೀದಿ ಮಾಡುವ ಕಿರಿಕಿರಿ ತಪ್ಪಿದಂತಾಗಿದೆ.
ಕಾಯ್ದಿರಿಸದ ಟಿಕೆಟ್ ಖರೀದಿಗೆ ಅವಕಾಶ
ಕ್ಯೂಆರ್ ಕೋಡ್ ಪಾವತಿ ಸೌಲಭ್ಯವು ಈಗ ರೈಲು ನಿಲ್ದಾಣದ ವಿಭಾಗೀಯ ಅಂಗಡಿಗಳು, ಆಹಾರ ಪ್ಲಾಜಾಗಳು, ಶೌಚಗೃಹ ಬಳಕೆಗೆ ಪಾವತಿ ಮಾಡಲು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚು ಉಪಯೋಗಕರವಾಗಿದೆ. ಇದಲ್ಲದೇ 25 ಸ್ವಯಂ ಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು (ಎಟಿವಿಎಂ) 12 ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಪ್ರಯಾಣಿಕರು ಕಾಯ್ದಿರಿಸದ ಪ್ರಯಾಣದ ಟಿಕೆಟ್‌ಗಳು ಮತ್ತು ಪ್ಲಾಟ್‌ಫಾರಂ ಟಿಕೆಟ್‌ಗಳನ್ನು ಇಲ್ಲಿ ಸುಲಭವಾಗಿ ಖರೀದಿ ಮಾಡಬಹುದಾಗಿದೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಮಾತನಾಡಿ, ಪ್ರಯಾಣಿಕ ಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಕ್ಯೂಆರ್ ಕೋಡ್ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್ ಪಾವತಿ ಮಾಡಿ ಟಿಕೆಟ್ ಖರೀದಿಸಲು ಅವಕಾಶ ನೀಡಲಾಗಿದೆ. ಇದು ಪ್ರಯಾಣಿಕರಿಗೆ ಯುಪಿಐ ಅಪ್ಲಿಕೇಷನ್‌ಗಳ ಮೂಲಕ ಪಾವತಿ ಮಾಡಲು ಮತ್ತು ಪಾವತಿ ದೃಢೀಕರಣದ ನಂತರ ಟಿಕೆಟ್‌ಗಳನ್ನು ಸ್ವೀಕರಿಸಲು, ಪ್ರಕ್ರಿಯೆಯನ್ನು ಸುಲಭವಾಗಿಸಲಿದೆ. ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ವಹಿವಾಟು ಉತ್ತೇಜಿಸಲು ರೈಲ್ವೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯು ಕ್ಯುಆರ್ ಕೋಡ್ ಪಾವತಿ ಸೌಲಭ್ಯ ಪರಿಚಯಿಸಿರುವುದಕ್ಕೆ ರೈಲು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಕ್ಯಾಶ್, ಚಿಲ್ಲರೆಗಾಗಿ ಪರದಾಡುವುದು ತಪ್ಪಿದಂತಾಗಿದ್ದು, ಟಿಕೆಟ್ ಖರೀದಿ ಮಾಡುವುದು ಸುಲಭವಾಗಿದೆ ಎಂದಿದ್ದಾರೆ.












Click it and Unblock the Notifications