ಮೈಸೂರಿನಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪರ- ವಿರುದ್ಧ ಪ್ರತಿಭಟನೆ
ಮೈಸೂರು, ಡಿಸೆಂಬರ್ 28: ಅದು ಸಾಂಸ್ಕೃತಿಕ ಮೈಸೂರಿನ ಹಿರಿಮೆ, ಆಕರ್ಷಣೆ ಹೆಚ್ಚಿಸಿದ ತಾಣ. ನಾಟಕ, ನೃತ್ಯ, ಸಂಗೀತ ಹೀಗೆ ಒಂದಿಲ್ಲೊಂದು ರಂಗಭೂಮಿ ಚಟುವಟಿಕೆಗಳಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದ ಮೈಸೂರಿನ ಪ್ರತಿಷ್ಠಿತ ರೆಪರ್ಟರಿ ರಂಗಾಯಣ ಇದೀಗ, ತನ್ನ ರಂಪಾಟದಿಂದ ಸದ್ದು ಮಾಡುತ್ತಿದ್ದು, ರಂಗಾಯಣ ನಿರ್ದೇಶಕರ ವಿರುದ್ಧ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪರನ್ನು ವಜಾಗೊಳಿಸುವಂತೆ ಆಗ್ರಹಿಸಿ ಮೈಸೂರಿನ ರಂಗಕರ್ಮಿಗಳು, ಸಂಘಟನೆಗಳ ಸದಸ್ಯರು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೇರಿದೆ. ಒಂದೆಡೆ ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತಿಭಟನೆ ನಡೆದರೆ, ಇನ್ನೊಂದೆಡೆ ರಂಗಾಯಣದ ನಿರ್ದೇಶಕರ ಪರವಾದ ಪ್ರತಿಭಟನೆ ಸಹ ನಡೆದಿದೆ. ಆ ಮೂಲಕ ರಂಗಾಯಣದ ನಿರ್ದೇಶಕರ ವಿರುದ್ಧ ಪರ- ವಿರೋಧದ ಹೋರಾಟ ನಡೆಯುತ್ತಿರುವುದು, ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ಕಾರ್ಯಪ್ಪ ವಜಾಕ್ಕೆ ಆಗ್ರಹ
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಪ್ರತಿಭಟನೆ ಮುಂದುವರಿದಿದ್ದು, ಮಂಗಳವಾರ ನಡೆಸಿದ ರಂಗಾಯಣ ಉಳಿಸಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನಾ ಜಾಥಾ ನಡೆಸಿದರು. ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ನಗರದ ಕುಕ್ಕರಹಳ್ಳಿ ಕೆರೆ ಜಂಕ್ಷನ್ ಬಳಿಯಿಂದ ರಂಗಾಯಣದವರೆಗೆ ಪ್ರತಿಭಟನಾ ಜಾಥಾ ನಡೆಸಿದ ಪ್ರತಿಭಟನಾಕಾರರು, ಅಡ್ಡಂಡ ಕಾರ್ಯಪ್ಪ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಡ್ಡಂಡ ಕಾರ್ಯಪ್ಪರನ್ನು ರಂಗಾಯಣದಿಂದ ವಜಾಗೊಳಿಸುವಂತೆ ಒತ್ತಾಯ ಮಾಡಿದರು. ಪ್ರತಿಭಟನೆಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕೂಡ ಬೆಂಬಲ ನೀಡಿದರು.

ರಂಗಾಯಣಕ್ಕೆ ರಕ್ಷಣೆ ಕೊಡಿ
ಇನ್ನು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪರನ್ನು ಬೆಂಬಲಿಸಿ ಕೊಡವ ಸಮಾಜ ಹಾಗೂ ಮೈಸೂರು ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶ್ರೀರಾಮ ಹಾಗೂ ದುರ್ಯೋಧನ ವೇಷಧಾರಿಗಳೊಂದಿಗೆ ಜಮಾಯಿಸಿದ ಪ್ರತಿಭಟನಾಕಾರರು, ರಂಗಾಯಣ ನಿರ್ದೇಶಕರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ ಎಂದು ಘೋಷಣೆ ಕೂಗಿದರಲ್ಲದೆ, ನಾಟಕ ನೋಡಲು ಬಂದವರಿಗೆ ಪ್ರಗತಿಪರರಿಂದ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಮಾಳವಿಕಾ ಅವಿನಾಶ್ ಹಾಗೂ ಚಕ್ರವರ್ತಿ ಸೂಲಿಬೆಲೆ ಆಹ್ವಾನಕ್ಕೆ ಕೊಡವ ಸಮಾಜ ಸ್ವಾಗತಿಸಲಿದೆ, ರಂಗಾಯಣದ ಬಹುರೂಪಿ ಯಾರ ಸ್ವತ್ತೂ ಅಲ್ಲ. ಆದರೂ ಪ್ರಗತಿಪರರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ರಂಗಾಯಣಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹೋಟೆಲ್ ಮಾಲೀಕರ ಬೆಂಬಲ
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ, ಕಾರ್ಯಪ್ಪರನ್ನು ಬೆಂಬಲಿಸಿತು. ಈ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಗೆ ಸಾಥ್ ನೀಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ ಸಂಘದ ಜಿಲ್ಲಾಧ್ಯಕ್ಷ ಸಿ. ನಾರಾಯಣಗೌಡ, ನಾಟಕ ಪ್ರದರ್ಶನಕ್ಕೆ ಅಡ್ಡಿ ಆಗಬಾರದು. ಹೋರಾಟಗಾರರು ಎಂದು ಹೇಳಿ ಕಾರ್ಯಪ್ಪ ವಿರುದ್ಧ ಹೋರಾಟ ಮಾಡುತ್ತಿರುವುದು ಸರಿಯಲ್ಲ. ರಂಗಾಯಣದಲ್ಲಿ ಕಲಾವಿದರಿಗೆ ಆಗುತ್ತಿದ್ದ ಅನ್ಯಾಯವನ್ನು ಕಾರ್ಯಪ್ಪ ತಡೆಗಟ್ಟಿದ್ದಾರೆ ಎಂದು ಬೆಂಬಲ ಸೂಚಿಸಿದರು.

ಅಡ್ಡಂಡ ಕಾರ್ಯಪ್ಪ ವಿರುದ್ಧ ನಡೆದ ಪರ- ವಿರೋಧದ ಪ್ರತಿಭಟನೆ ಹಿನ್ನೆಲೆಯಲ್ಲಿ ರಂಗಾಯಣದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.












Click it and Unblock the Notifications