Nandini vs Amul: ಬಿಜೆಪಿ ನಂದಿನಿಯನ್ನು ನಾಶ ಮಾಡಲು ಹೊರಟಿದೆ ಎಂದ ಪ್ರಿಯಾಂಕ ಗಾಂಧಿ
ಮೈಸೂರು, ಏಪ್ರಿಲ್ 25: ಕೇಂದ್ರ ಸರಕಾರ ಬಂದು ಎಷ್ಟು ಜನ ಯುವಜನರಿಗೆ ಉದ್ಯೋಗ ನೀಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಿ.ನರಸೀಪುರದ ಹೆಳವರಹುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ತಾರತಮ್ಯವನ್ನು ಅಳಿಸಿ ಹಾಕುತ್ತದೆ. ಕರ್ನಾಟಕ ರಾಜ್ಯದಲ್ಲಿ 2.5 ಲಕ್ಷ ಸರಕಾರಿ ಹುದ್ದೆಗಳನ್ನು ತುಂಬಲಾಗುವುದು. ಇದು ನಮ್ಮ ಸರಕಾರ ನೀಡುತ್ತಿರುವ ವಾಗ್ದಾನ ಎಂದು ಭರವಸೆ ನೀಡಿದರು.

ಬಿಜೆಪಿ ಜನರಿಗೆ ಅನ್ಯಾಯ ಮಾಡಿದೆ. ಸೌಲಭ್ಯಗಳನ್ನು ನೀಡದೆ ವಂಚಿಸಿದೆ. ಮೀಸಲಾತಿ ಹೆಸರಲ್ಲೂ ಜನರ ಕಣ್ಣಿಗೆ ಮಂಕು ಬೂದಿ ಎರಚಿದೆ. ಸಂವಿಧಾನಕ್ಕೆ ತಿದ್ದುಪಡಿ ತರದೇ ಕೇವಲ ಬಿಲ್ ಪಾಸ್ ಮಾಡಿದೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಎಲ್ಲಾಕ್ಕಿಂತ ಹೆಚ್ಚಾಗಿ ನಂದಿನಿ ಬ್ರ್ಯಾಂಡ್ ನಾಶ ಮಾಡಲು ಹೊರಟಿದೆ. ಅಮೂಲ್ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿತ್ತು. ರೈತರಿಗೂ ಸಬ್ಸಿಡಿ ನೀಡಿತ್ತು. ಹಲವು ಭಾಗ್ಯಗಳ ಮೂಲಕ 5 ವರ್ಷಗಳ ಉತ್ತಮ ಆಡಳಿತ ನೀಡಿತ್ತು. ಆದರೆ, ಬಿಜೆಪಿ ಹಾಲಿನ ವಿಷಯದಲ್ಲೀ ರಾಜಕೀಯ ಮಾಡುತ್ತಿದೆ. 90 ಲಕ್ಷ ಲೀಟರ್ ಹಾಲು ಉತ್ಪಾದನೆಯನ್ನು 70 ಲಕ್ಷಕ್ಕೆ ಇಳಿಸಿತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಜನರ ನೋವುಗಳಿಗೆ ಎಂದು ಸ್ಪಂದನೆ ನೀಡಲಿಲ್ಲ. ಜನಾದೇಶದ ವಿರುದ್ಧವಾಗಿ ಕೆಲಸ ಮಾಡಿತು. ಪ್ರತಿ ಹಂತದಲ್ಲೂ ಜನರನ್ನು ವಂಚಿಸುವ ಕೆಲಸವಾಯಿತು. ಖಜಾನೆಯನ್ನು ಲೂಟಿ ಹೊಡೆಯಿತು. ಗುತ್ತಿಗೆದಾರರು ಮೋದಿ ಅವರಿಗೆ ಬಿಜೆಪಿ ಸರ್ಕಾರ ಕಮಿಷನ್ ಸರ್ಕಾರವಾಗಿದೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರೂ, ಯಾವುದೇ ಕಟ್ಟುನಿಟ್ಟಿನ ಕ್ರಮ ಆಗಲಿಲ್ಲ. ಶಾಸಕರಿಗೆ ಹಣದ ಆಮಿಷವೊಡ್ಡಿ ಸರ್ಕಾರ ರಚನೆ ಆಯಿತು. ಇವರಿಂದ ಮತ್ತೇನೂ ನಿರೀಕ್ಷಿಸಲು ಸಾಧ್ಯ ಎಂದರು.

ಬಿಜೆಪಿ ಸರ್ಕಾರ ಕಾಪೋರೇಟ್ ಕಂಪನಿಗಳಿಗೆ ಸದಾ ರತ್ನಗಂಬಳಿಯನ್ನು ಹಾಸುತ್ತದೆ. ಅದಕ್ಕೆ ಉದಾಹರಣೆ ಅದಾನಿ ಉದ್ಯಮಕ್ಕೆ ನೀಡುತ್ತಿರುವ ಬೆಂಬಲವೇ ಸಾಕ್ಷಿ. ಕಬ್ಬಿಗೆ ಬೆಂಬಲ ಬೆಲೆ ಕೊಡಲು ಮೀನಾಮೇಷ ಎಣಿಸುವ ಮೋದಿ ಸರ್ಕಾರ ಅದಾನಿ ಕಂಪನಿ ಲಾಭ ಮಾಡಿಕೊಡಲು ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಮೋದಿ ಮತ ಹಾಕದಿದ್ದರೆ ಅವರ ಆಶೀರ್ವಾದ ಸಿಗುವುದಿಲ್ಲ ಎಂದು ನಡ್ಡಾ ಮಾತನಾಡುತ್ತಾರೆ ನಮಗೆ ಕುವೆಂಪು, ಬಸವಣ್ಣನವರ ಆಶೀರ್ವಾದ ಬೇಕಿದೆ ಎಂದರು.
ಇದೇ ವೇಳೆ ಪ್ರಿಯಾಂಕ ಗಾಂಧಿ ವಾದ್ರಾ ಅವರು ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಮಾತುಕತೆ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಎಂಎಲ್‌ಸಿ ಡಾ.ತಿಮ್ಮಯ್ಯ, ಹರೀಶ ಗೌಡ, ಮಾವಿನಹಳ್ಳಿ ಸಿದ್ದೇಗೌಡ, ವಿಜಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications