ಪೂಜೆ ಮಾಡುವೆನೆಂದು 21 ಲಕ್ಷ ರೂ ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದ ಪೂಜಾರಿ ಬಂಧನ
ಮೈಸೂರು, ನವೆಂಬರ್ 2: ಪೂಜೆ ಮಾಡಿಸುವೆನೆಂದು 21 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಪೂಜಾರಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಪೂಜಾರಿ ಮನು (28) ಬಂಧಿತ ಆರೋಪಿ. ತನ್ನ ಮನೆಯಲ್ಲಿ ಚಿನ್ನಾಭರಣ ಇಟ್ಟು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಕೆಲವರನ್ನು ನಂಬಿಸಿದ್ದ ಮನು, ಅಕ್ಟೋಬರ್ 25ರಂದು ಸಾತಿ ಗ್ರಾಮದ ನಿವಾಸಿಗಳಾದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶೀಲಾ, ದೀಪಾ ಹಾಗೂ ಸಂತೋಷ್ ಎಂಬುವರಿಂದ ಚಿನ್ನಾಭರಣಗಳನ್ನು ತರಿಸಿಕೊಂಡಿದ್ದ.
ಸುಮಾರು 456 ಗ್ರಾಂ ತೂಕದ ಈ ಚಿನ್ನದ ಒಡವೆಗಳನ್ನು ಇಟ್ಟು, ಪೂಜೆ ಮಾಡಿ, ಈ ಒಡವೆಗಳನ್ನು ಆಯುಧ ಪೂಜೆಯವರೆಗೂ ತೆಗೆಯಬಾರದು ಎಂದು ಹೇಳಿ ತನ್ನ ಮನೆಯ ಬೀರುವಿನಲ್ಲಿ ಇರಿಸಿಕೊಂಡಿದ್ದ.

ಆದರೆ ಅಂದೇ ರಾತ್ರಿ 456 ಗ್ರಾಂನ ಚಿನ್ನಾಭರಣವನ್ನು ಎತ್ತಿಕೊಂಡು ಪರಾರಿಯಾಗಿದ್ದ. ಮಾರನೇ ದಿನ ಚಿನ್ನ ದೋಚಿಕೊಂಡು ಪೂಜಾರಿ ಪರಾರಿಯಾದ ವಿಷಯ ತಿಳಿಯುತ್ತಿದ್ದಂತೆ ಚಿನ್ನವನ್ನು ಕೊಟ್ಟವರು ಈತನ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಕೆ.ಆರ್ ನಗರ ಬಸ್ ನಿಲ್ದಾಣದಲ್ಲಿ ಪೂಜಾರಿಯನ್ನು ಬಂಧಿಸಿ, ಆತನಿಂದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾರನ್ನೋ ನಂಬಿ ಒಡವೆ, ಹಣವನ್ನು ನೀಡಿ ಮೋಸ ಹೋಗುವವರಿಗೆ ಇದೊಂದು ಪಾಠ ಎಂದಿದ್ದಾರೆ.












Click it and Unblock the Notifications