Dasara Exhibition: ಈ ಬಾರಿ ಪ್ಲಾಸ್ಟಿಕ್ ಮುಕ್ತ ದಸರಾ ವಸ್ತುಪ್ರದರ್ಶನ; ಅಕ್ಟೋಬರ್ 3ರಂದು ಉದ್ಘಾಟನೆ
ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಸರಾ ಅಂಗವಾಗಿ ಯುವ ದಸರಾ, ದಸರಾ ವಸ್ತುಪ್ರದರ್ಶನಗಳು ಕೂಡ ನಡೆಯಲಿದ್ದು ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಈ ಬಾರಿ ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿ ದಸರಾ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಯೋಜಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ದಸರಾ ವಸ್ತುಪ್ರದರ್ಶನಕ್ಕೆ ಸ್ಪಂದಿಸಬೇಕು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಮನವಿ ಮಾಡಿದ್ದಾರೆ.
ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕರ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ವಸ್ತು ಪ್ರದರ್ಶನವನ್ನು ನೋಡಲು ಮತ್ತು ಉತ್ಪನ್ನವನ್ನು ಖರೀದಿ ಮಾಡಲು ಬರುವ ಸಾರ್ವಜನಿಕರು, ಪ್ಲಾಸ್ಟಿಕ್ ಬ್ಯಾಗ್ ಬದಲಾಗಿ ಬಟ್ಟೆ ಚೀಲಗಳನ್ನು ತರುವ ಮೂಲಕ ಪ್ಲಾಸ್ಟಿಕ್ ಮುಕ್ತ ದಸರಾ ಪ್ರದರ್ಶನಕ್ಕೆ ಸಹಕಾರ ನೀಡಬೇಕು ಎಂದು ಕೇಳಿದರು.

ಉಚಿತ ಬಟ್ಟೆ ಚೀಲ ವಿತರಣೆ
ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು, ವಸ್ತು ಪ್ರದರ್ಶನ ಪ್ರಾಧಿಕಾರದ ಮುಂಭಾಗ ಸಾರ್ವಜನಿಕರಿಗೆ ಉಚಿತವಾಗಿ ಬಟ್ಟೆ ಚೀಲಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಅಗತ್ಯವಿರುವ ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ಹೋಟೆಲ್ ಮತ್ತು ಸ್ಟಾಲ್‌ಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚನೆ ಕೊಡಲಾಗಿದೆ ಎಂದರು.
ಅಕ್ಟೋಬರ್ 3ರಂದು ಉದ್ಘಾಟನೆ
ಈ ಬಾರಿ ದಸರಾ ವಸ್ತುಪ್ರದರ್ಶನ ಅಕ್ಟೋಬರ್ 3ರಂದು ಸಂಜೆ 8 ಗಂಟೆಗೆ ಉದ್ಘಾಟನೆಯಾಗಲಿದೆ. ವಸ್ತುಪ್ರದರ್ಶನದಲ್ಲಿ ಸರ್ಕಾರದ ವಿವಿಧ ಇಲಾಖೆಗಳ 30 ಸ್ಟಾಲ್‌ಗಳು ಮತ್ತು 153 ಖಾಸಗಿ ಸ್ಟಾಲ್‌ಗಳು ಉದ್ಘಾಟನೆಯಾಗಲಿವೆ. ದಸರಾ ವಸ್ತು ಪ್ರದರ್ಶನ ನೋಡಲು ಮಕ್ಕಳಿಗೆ 20 ರೂಪಾಯಿ ಪ್ರವೇಶ ದರವನ್ನು ನಿಗದಿ ಮಾಡಿದ್ದು, ವಯಸ್ಕರಿಗೆ 35 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ವಸ್ತುಪ್ರದರ್ಶನ ವಿಶೇಷವಾಗಿರಲಿದೆ. 90 ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಉತ್ಪನ್ನಗಳ ವೀಕ್ಷಣೆ, ಮಾರಾಟ ಮತ್ತು ತಯಾರಿಕೆ ಪ್ರಕ್ರಿಯೆಯನ್ನು ಸಾರ್ವಜನಿಕರು ವೀಕ್ಷಣೆ ಮಾಡಬಹುದು. ಮಕ್ಕಳಿಗೆ ಮನರಂಜನೆ ನೀಡಲು ಇಂಟರಕ್ಟಿವ್ ಪಾರ್ಕ್ ಹಾಗೂ 3ಡಿ ತಂತ್ರಜ್ಞಾನವನ್ನು ಒಳಗೊಂಡಿರುವ ವರ್ಚುವಲ್ ಪಾರ್ಕ್ ಗಳನ್ನು ನಿರ್ಮಿಸಲಾಗಿದೆ.
ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ 10 ರಿಂದ 15 ಕಡೆ ವಿಮಾನ ನಿಲ್ದಾಣ ಮಾದರಿಯಲ್ಲಿ ವಾಟರ್ ಕೌಂಟಿಂಗ್ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ನೀಡಲಾಗಿದೆ. ವಸ್ತು ಪ್ರದರ್ಶನವು 90 ದಿನಗಳ ಕಾಲ ನಡೆಯಲಿದ್ದು, ಪ್ರತಿ ಭಾನುವಾರ ಸಿನಿಮಾ ಕಲಾವಿದರಿಂದ ಮನರಂಜನಾತ್ಮಕ ಕಾರ್ಯಕ್ರಮಗಳು ನಡೆಯಲಿವೆ.
80 ಎಕರೆ ಮೈದಾನದಲ್ಲಿ ನಡೆಯುವ ವಸ್ತು ಪ್ರದರ್ಶನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ಅನುಕೂಲವಾಗಲು ರಿಯಾಯಿತಿ ದರದಲ್ಲಿ 3 ಎಲೆಕ್ಟ್ರಾನಿಕ್ ಎಕೋ ವಾಹನಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.











Click it and Unblock the Notifications