ಪ್ರೇಮಕುಮಾರಿ ರಂಪರಾಮಾಯಣಕ್ಕೆ ಹೈರಾಣಾಗಿರುವ ರಾಮದಾಸ್
ಮೈಸೂರು, ಜುಲೈ 21 : ನನಗೆ ಅವರು ಬೇಕು, ನಾನು ಅವರ ಜೊತೆ ಬಾಳಬೇಕು, ನಾನೇನು ಕೀಳು ಜಾತಿಯವಳಲ್ಲ ಎಂದು ಬಿಜೆಪಿ ಶಾಸಕ ರಾಮದಾಸ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದ ಪ್ರೇಮಕುಮಾರಿ ಅವರು ಮತ್ತೆ ಶನಿವಾರ ರಂಪಾಟ ಮಾಡಿದ್ದಾರೆ.
ಇಂದು ಮಾಡಿರುವ ರಂಪಾಟ ಅಂಥಿಂಥ ರಂಪಾಟವಲ್ಲ. ನೆರೆದಿದ್ದ ಎಲ್ಲ ಜನರ ಮುಂದೆ ನೆಲದ ಮೇಲೆ ಬಿದ್ದು ಒದ್ದಾಡಿ, ಗೋಳಾಡಿ, ಹೆಗಲ ಮೇಲಿದ್ದ ವೇಲನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿ ರಾಮದಾಸ್ ಅವರಿಗೆ ಸಾಕುಬೇಕೆನ್ನುವಂತೆ ಮಾಡಿದ್ದಾರೆ.
ನಾನು ಸಾಯಬೇಕು, ಬಿಡಿ ನನ್ನ ಎಂದು ಮಹಿಳೆಯೊಬ್ಬರಿಂದ ವೇಲನ್ನು ಕಸಿದುಕೊಂಡು ಚೀರಾಡಿ ಅತ್ತುಕರೆದು ನೆರೆದವರಿಗೆಲ್ಲ ರಂಜನೆ ನೀಡಿದರು ಪ್ರೇಮಕುಮಾರಿ. ಇಲ್ಯಾಕೆ ಸಾಯ್ತಿಯಮ್ಮ, ಮನೆಗೆ ಹೋಗಿ ಸಾಯಿ ಎಂದು ಕೆಲವರು ಹೇಳಿದರೂ, ಇಲ್ಲ ಇಲ್ಲೇ ಸಾಯ್ತೀನಿ ಎಂದು ಹಠ ಹಿಡಿದರು ಪ್ರೇಮಕುಮಾರಿ.

ಚುನಾವಣೆ ಸಮಯದಲ್ಲಿ ನೀಡಿದ್ದ ಮಾತು ರಾಮದಾಸ್ ಅವರು ತಪ್ಪಿದ್ದಾರೆಂದು ಪ್ರೇಮಕುಮಾರಿ ಆರೋಪಿಸಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದ್ದರು ಎಂದು ಆರೋಪಗಳ ಸುರಿಮಳೆಗೈದರು.
ಪ್ರೇಮಕುಮಾರಿ ಅವರ ಈ ನಾಟಕ ಪ್ರತಿದಿನ ನಡೆಯುತ್ತಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಾಮದಾಸ್ ಅವರು ಹೈರಾಣಾಗಿ ಹೋಗಿದ್ದಾರೆ. ನಾನು ಸತ್ತರೂ ರಾಮದಾಸ್ ಅವನನ್ನು ಬಿಡುವುದಿಲ್ಲ, ಅವನ ಗ್ರಹಚಾರ ಬಿಡಿಸುತ್ತೇನೆ, ಅವನಿಗೆ ಮುಂದಿದೆ ಮಾರಿಹಬ್ಬ ಎಂದು ಪ್ರೇಮಕುಮಾರಿ ಗೋಳು ಹೊಯ್ದುಕೊಳ್ಳುತ್ತಿದ್ದಾರೆ.
ಪೊಲೀಸರು ಎಷ್ಟೇ ಮನವೊಲಿಸಲು ಯತ್ನಿಸಿದರೂ ಪ್ರೇಮಕುಮಾರಿ ಅವರು ಬಗ್ಗಲಿಲ್ಲ. ವಿದ್ಯಾರಣ್ಯಪುರಂ ಪೊಲೀಸರ ವಶದಲ್ಲಿ ಪ್ರೇಮಕುಮಾರಿ ಇದ್ದು, ಅವರ ವಿರುದ್ಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ರಾಮದಾಸ್ ಬೆಂಬಲಿಗರಿಂದ ದೂರು ದಾಖಲಾಗಿದೆ.












Click it and Unblock the Notifications