ಮೈಸೂರು ಉದಯಗಿರಿ ಗಲಾಟೆ: ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?
ಮೈಸೂರು, ಫೆಬ್ರವರಿ 11: ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಸಂಬಂಧಿಸಿಂದಂತೆ ಯುವಕನೊಬ್ಬ ಹಾಕಿದ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ದೊಡ್ಡ ಅವಾಂತರವೇ ಸೃಷ್ಟಿಯಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯ ಮೇಲೆ ತಡರಾತ್ರಿ ಕಲ್ಲು ತೂರಾಟ ನಡೆದಿದೆ. ಸದ್ಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಇದೀಗ ಈ ಗಲಾಟೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ.
ನಿನ್ನೆ ತಡರಾತ್ರಿ ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆ ಇಂದು ಬೆಳಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಉದಯಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಡಿಸಿಪಿ ಮುತ್ತುರಾಜ್ ಪೊಲೀಸ್ ಠಾಣೆಯಿಂದ ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಕೂಡ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಪೊಲೀಸ್ ಠಾಣೆಗೆ ಆಗಮಿಸಿ ವಾಪಸ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಪುಂಡರು ನಿನ್ನೆ ಅಕ್ರಮಣ ಮಾಡಿದ್ದಾರೆ. ಮೈಸೂರಿನಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಪೊಲೀಸರನ್ನೇ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ.
ಈಗಲೂ ಅದೇ ಮುಂದುವರಿದಿದೆ ಎಂದರು.
ಟಿಪ್ಪು ಸಂತತಿ ಅವರು ಮಾಡಿರುವ ಗಲಾಟೆ ಇದು. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಹೇಗಿದೆ ಎನ್ನುವುದಕ್ಕೆ ಇದು ಸಾಕ್ಷಿ. ಸಿದ್ದರಾಮಯ್ಯ ಅವರದು ಕನ್ನಡಿಗರ ಸರ್ಕಾರ ಅಲ್ಲ. ಇದು ತಾಲಿಬಾನಿ ಸರ್ಕಾರ. ಚುನಾವಣೆ ಸಂದರ್ಭದಲ್ಲೇ ಹೇಳಿದ್ದೇವು. ಇದು ತಾಲಿಬಾನಿ ಸರ್ಕಾರ ಆಗುತ್ತದೆ ಅಂತ. ಪೊಲೀಸರು ಆಳುವ ಸರ್ಕಾರದ ಅಣತಿಯಂತೆ ನಡೆಯುವುದು ಮೊದಲು ಬಿಡಬೇಕು ಎಂದು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಪುಂಡರನ್ನು ಸಿದ್ದರಾಮಯ್ಯ ಫ್ರೀಯಾಗಿ ಬಿಟ್ಟಿದ್ದಾರೆ. ಅದಕ್ಕೆ ಈ ರೀತಿ ಗಲಾಟೆ ನಡೆದಿದೆ. ಅರವಿಂದ್ ಕೇಜ್ರಿವಾಲ್ ಸೋತರೆ ಉದಯಗಿರಿ ಮುಸ್ಲಿಮರಿಗೆ ಯಾಕೆ ರೋಷ ಬರುತ್ತದೆ? ಅವರ ಮನೆಯಲ್ಲಿ ಯಾಕೆ ಸೂತಕ ಬರುತ್ತದೆ? ಪುಂಡ ಮುಸ್ಲಿಮರಿಗೆ ಬುದ್ದಿ ಕಲಿಸಬೇಕು. ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು ಕೂಬಿಂಗ್ ಮಾಡಬೇಕು. ಸಿದ್ದರಾಮಯ್ಯ ಅವರು ಎಷ್ಟು ದಿನ ಸಿಎಂ ಆಗಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಲಾದರರೂ ಖಡಕ್ ಆಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಎಷ್ಟು ಅಸಮರ್ಥ ಸಿಎಂ ಎಂಬುದಕ್ಕೆ ಅವರ ತವರೂರಿನಲ್ಲಿ ನಡೆದ ಈ ಘಟನೆ ಸಾಕ್ಷಿ ಆಗಿದೆ ಎಂದರು.












Click it and Unblock the Notifications