ಚಾಮುಂಡಿ ಬೆಟ್ಟದ ಸುತ್ತ ನಿಷೇಧಾಜ್ಞೆ: ಮಹಿಷ ದಸರಾ ಆಚರಣೆಗೆ ಪೊಲೀಸರ ನಿರ್ಬಂಧಗಳೇನು..?
ಮೈಸೂರು, ಅಕ್ಟೋಬರ್ 12: ದಿನಕ್ಕೊಂದು ಸ್ವರೂಪ ಪಡೆದುಕೊಂಡಿದ್ದ ಮಹಿಷಾ ಆಚರಣೆಗೆ ಕೊನೆಗೂ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಅ.13ರಂದು ಹಮ್ಮಿಕೊಂಡಿರುವ ಮಹಿಷ ದಸರಾ ಆಚರಣೆಗೆ ಪರ-ವಿರೋಧ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಬಿ ಅವರು ಚಾಮುಂಡಿಬೆಟ್ಟದ ಸುತ್ತಮುತ್ತ ಕಲಂ 144 ಸಿಆರ್‌ಪಿಸಿ ರೀತಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಎರಡು ವಾರದಿಂದ ಮಹಿಷಾ ದಸರಾ ಆಚರಣೆ ಸಂಬಂಧ ಮೈಸೂರು ನಗರದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿತ್ತು. ಬಿಜೆಪಿ ಸಂಸದ ಪ್ರತಾಪಸಿಂಹ, ಮೇರ್ಯ ಶಿವಕುಮಾರ್ ಹಾಗೂ ಶಾಸಕ ಟಿ.ಎಸ್.ಶ್ರೀವತ್ಸ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮಹಿಷಾ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು.

''ನಾವು ಸಂಷರ್ಷಕ್ಕೂ ಸಿದ್ದರಿದ್ದೇವೆ. ಮಹಿಷಾ ದಸರಾ ಆಚರಿಸಲು ಬಿಡುವುದಿಲ್ಲ,'' ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದ್ದರು. ಜೊತೆಗೆ ಅ.13ರಂದು ಚಲೋ ಚಾಮುಂಡಿಬೆಟ್ಟ ನಡೆಸುವ ನಿರ್ಧಾರ ಪ್ರಕಟಿಸಿದ್ದರು. ಇತ್ತ ಮಹಿಷ ದಸರಾ ಆಚರಣೆ ಸಮಿತಿ ಇದು ನಮ್ಮ ಪೂರ್ವಿಕರ ಹಬ್ಬ. ಮಹಿಷನ ಪ್ರತಿಮೆಗೆ ಪುರ್ಷಾಚಣೆ ಮಾಡುತ್ತೇವೆ ಎಂದಿದ್ದರು. ಇದೀಗ ಪೊಲೀಸ್ ಇಲಾಖೆ ನಗರದ ಪುರಭವನದಲ್ಲಿ ಮಹಿಷ ದಸರಾ ಆಚರಿಸಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ.
ಮಹಿಷ ದಸರಾ:ವಿಚಾರಣೆ 27ಕ್ಕೆ ಮುಂದೂಡಿಕೆ
ಮಹಿಷ ದಸರಾ ಆಚರಣೆಗೆ ತಡೆಯಾಜ್ಞೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಮೈಸೂರಿನ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅ.27ಕ್ಕೆ ಮುಂದೂಡಿದೆ. ವಿಚಾರಣೆಗೆ ಹಾಜರಾದ ಪುರುಷೋತ್ತಮ್ ಅವರು ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿದ್ದರಿಂದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದರು ಎಂದು ಸ್ನೇಹಮಯಿ ಕೃಷ್ಣ ಮಾಹಿತಿ ನೀಡಿದ್ದಾರೆ.
''ನಮ್ಮ ಉದ್ದೇಶ ಈಡೇರಿದೆ. ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಮಾಡಬಾರದೆಂದು ಮನವಿ ಮಾಡಿದ್ದೇವು. ಇದೀಗ ಜಿಲ್ಲಾಡಳಿತ ಪುರಭವನದಲ್ಲಿ ಮಾತ್ರ ಮಹಿಷ ದಸರಾ ಆಚರಣೆ ಅವಕಾಶ ನೀಡಿದೆ. ಜೊತೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಮಹಿಷ ದಸರಾ ಎಂಬುದರ ಬದಲು ಉತ್ಸವ ಎಂದು ಆಚರಿಸಲಿ. ಆಚರಣೆ ವೇಳೆ ಚಾಮುಂಡೇಶ್ವರಿಗೆ ನಿಂದಿಸಿದರೆ ಉದ್ಘಾಟನೆ ದಿನ ಪ್ರತಿಭಟನೆ ನಡೆಸುತ್ತೇನೆ" ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.

ಮಹಿಷಾ ದಸರಾ ಆಚರಣೆಗೆ ನಿರ್ಬಂಧಗಳು
1. ಯಾವುದೇ ಮೆರವಣಿಗೆ, ಪ್ರತಿಭಟನೆ, ರ್ಯಾಲಿ, ಬೈಕ್ ರ್ಯಾಲಿ ನಡೆಸುವಂತಿಲ್ಲ
2. ಪರ-ವಿರೋಧ ಘೋಷಣೆ ಕೂಗುವಂತಿಲ್ಲ
3. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವಂತಿಲ್ಲ
4. 5 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ
5. ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ
6. ಯಾವುದೇ ಸಾರ್ವಜನಿಕ ಪ್ರಚಾರ, ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್‌ಘಿ, ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು, ಮೂರ್ತಿ ಮೆರವಣಿಗೆ ಮಾಡುವುದು.
ಏನಿದು ವಿವಾದ..?
2015 ರಿಂದ ದಲಿತ ಪರ ಸಂಘಟನೆಗಳು, ಪ್ರಗತಿಪರರು ಮೈಸೂರಿನಲ್ಲಿ ಮಹಿಷಾ ದಸರಾ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಷಾ ದಸರಾಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ನೂತನ ಸರ್ಕಾರ ಬಂದ ಮೇಲೆ ಮತ್ತೆ ಮಹಿಷಾ ದಸರಾ ಆಚರಣೆ ಮುನ್ನಲೆಗೆ ಬಂದಿದೆ.
ಪೋಸ್ಟರ್ ಬಿಡುಗಡೆ..?
2015ರಲ್ಲಿ ಆರಂಭವಾದ ಮಹಿಷ ದಸರಾ ಆಚರಣೆಗೆ ದಿಢೀರ್ 50 ವರ್ಷದ ಇತಿಹಾಸ ಸೃಷ್ಟಿಯಾಗಿದೆ. ಈ ಬಾರಿ 50ನೇ ವರ್ಷದ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ ಎಂದು ಮಹಿಷ ದಸರಾ ಆಚರಣೆ ಸಮಿತಿಯಿಂದ ಪೋರ್ಸ್ಟ ಬಿಡುಗಡೆ ಮಾಡಲಾಗಿತ್ತುಘಿ. ಅ.13ರಂದು ಮಹಿಷ ದಸರಾ ಆಚರಣೆ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಮಹಿಷ ದಸರಾ ಆಚರಿಸಲು ನಿರ್ಧರಿಸಿತ್ತು. ಆಹ್ವಾನ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಚಾಮುಂಡಿ ಬೆಟ್ಟಕ್ಕೆ ಮಹಿಷ ಬೆಟ್ಟ ಅಂತಾ ನಮೂದು ಮಾಡಲಾಗಿದೆ. ಹಾಗಾಗಿ ಈ ಬಾರಿ ಮಹಿಷಾ ದಸರಾ ವಿವಾದದ ಸ್ವರೂಪ ಪಡೆದುಕೊಂಡಿತ್ತು.












Click it and Unblock the Notifications