ಮೈಸೂರು ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ, ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳೇನು?, ಇಲ್ಲಿದೆ ವಿವರ
ಮೈಸೂರು, ಜೂನ್, 07: ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಲೇ ಇದೆ. ಪ್ಲಾಸ್ಟಿಕ್ ಹಾವಳಿ ತಡೆಗೆ ಸರ್ಕಾರದಿಂದಲೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ. ಆದರೂ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇದೀಗ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ತೀರ್ಮಾನಿಸಲಾಗಿದೆ.
ಚಾಮುಂಡಿಬೆಟ್ಟ ಪ್ರಮುಖ ಧಾರ್ಮಿಕ ಕೇಂದ್ರ ಹೇಗೋ ಪ್ರವಾಸಿತಾಣವೂ ಹೌದು. ನಿತ್ಯ ಸಾವಿರಾರು ಜನ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯುತ್ತಾರೆ. ಹೀಗಾಗಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಿದೆ.

ಇನ್ನು ಮುಂದಿನ ವಾರದಿಂದ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇದೆ. ಹೀಗಾಗಿ ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಾನಾ ಸಂಘ ಸಂಸ್ಥೆಗಳು, ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಪರಿಸರ ದಿನಾಚರಣೆ ಮೊನ್ನೆಯಷ್ಟೇ ಮುಗಿದಿದೆ. ಕೇವಲ ಪರಿಸರದ ದಿನ ಭಾಷಣ, ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ ಎಂಬ ಆರೋಪವೂ ಇದೆ. ಪ್ಲಾಸ್ಟಿಕ್ ಇಂದು ಪರಿಸರ ಹಾಗೂ ಮನುಷ್ಯ ಇಬ್ಬರಿಗೂ ಮಾರಕವಾಗಿ ಪರಿಣಮಿಸಿದೆ. ಜಾನುವಾರುಗಳಿಂದ ಹಿಡಿದು ಹಕ್ಕಿಪಕ್ಷಿಗಳವರೆಗೆ ಪ್ಲಾಸ್ಟಿಕ್ ತನ್ನ ಕಬಂಧ ಬಾಹುಗಳಿಂದ ಆಕ್ರಮಿಸಿಕೊಂಡಿದೆ.
ಪ್ಲಾಸ್ಟಿಕ್ ಬಳಸಿದರೆ ದಂಡ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕೆಂಬ ಕೂಗು ಕೂಡ ಎಲ್ಲೆಡೆ ಕೇಳಿ ಬಂದಿದೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್ ಬಳಸುವಂತೆಯೂ ಸಲಹೆಗಳು ಕೇಳಿ ಬಂದಿದೆ. ಈಗಾಗಲೇ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಾಗಿದೆ. ಆದರೆ, ಅದರ ಅನುಷ್ಠಾನ ಸಂಪೂರ್ಣ ವಿಫಲವಾಗಿದೆ. ಈ ನಡುವೆಯೂ ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿಯು ಜೂನ್ 14ರಿಂದ ಚಾಮುಂಡಿ ಬೆಟ್ಟದಲ್ಲಿ ವರ್ತಕರು, ಭಕ್ತರು ಪ್ಲಾಸ್ಟಿಕ್ ಬಳಸಿದರೆ ದಂಡ ವಿಧಿಸಲು ನಿರ್ಧರಿಸಿದೆ.
ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್. ರೂಪೇಶ್ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಸಂಪೂರ್ಣವಾಗಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಹೀಗಾಗಿ ವರ್ತಕರು ಕೂಡಲೇ ಸದ್ಯ ತಮ್ಮ ಬಳಿ ಇರುವ ಈ ಮಾದರಿಯ ಪ್ಲಾಸ್ಟಿಕ್ ಅನ್ನು ಮುಂದಿನ 7 ದಿನಗಳಲ್ಲಿ ತೆರವುಗೊಳಿಸಬೇಕು ಎಂದರು.
ಹಾಗೆಯೇ ಅದೇ ರೀತಿ ಬೆಟ್ಟಕ್ಕೆ ಬರುವ ಭಕ್ತರು ಪೂಜಾ ಸಾಮಗ್ರಿ ಹಾಗೂ ಇನ್ನಿತರ ಯಾವುದೇ ವಸ್ತುಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ನೀಡಿರುವ ಕಾಲಾವಕಾಶದ ನಂತರವೂ ಪ್ಲಾಸ್ಟಿಕ್ ಕಂಡುಬಂದಲ್ಲಿ 200 ರೂಪಾಯಿ ದಂಡ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚಾಮುಂಡಿಬೆಟ್ಟದ ದೇವಸ್ಥಾನ ಸಮಿತಿ ಇಒ ಗೋವಿಂದರಾಜು, ತಾಲೂ ಪಂಚಾಯತ್ ಇಒ ಗಿರೀಶ್, ಕ್ಲೀನ್ ಮೈಸೂರು, ಯೂತ್ ಹಾಸ್ಟೆಲ್, ಕ್ಲೀನ್ ಸಿಟಿ ಸಂಘಟನೆ, ಸ್ನೇಹ ಸಂಸ್ಥೆ, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು.
ಪ್ಲಾಸ್ಟಿಕ್ ಆರೋಗ್ಯಕ್ಕೆ ಮಾರಕ ಅಂತ ಗೊತ್ತಿದ್ದರೂ ಕೂಡ ಹಲವೆಡೆ ಈಗಲೂ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಬರೀ ಪರಿಸರದ ಮೇಲೆ ಅಷ್ಟೇ ಅಲ್ಲದೆ ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಇದನ್ನು ಅರಿತುಕೊಂಡು ಜನರೇ ಪ್ಲಾಸ್ಟಿಕ್ ತ್ಯಜಿಸಿ ಜಾಗೃತಿ ಮೂಡಿಸುವುದರಿಂದ ಮುಂದೆ ಆಗುವ ಅನಾಹುತಗನ್ನು ತಡೆಯಬಹುದಾಗಿದೆ.












Click it and Unblock the Notifications