ರೈತರಿಗೆ ರಾಜ್ಯ ಸರಕಾರದಿಂದ ಮಹಾಮೋಸ : ಮೈಸೂರಿನಲ್ಲಿ ಎಚ್ಡಿಕೆ
ಮೈಸೂರು,ಜೂನ್ .9:- ರಾಜ್ಯ ಸರಕಾರದ ಸಾಧನೆ ಶೂನ್ಯ, ಸುಖಾಸುಮ್ಮನೇ ಸಾಧನಾ ಸಮಾವೇಶದಲ್ಲಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದರೆ ಅವರು ನಂಬುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹುಣ್ಣಿಮೆಯ ಪ್ರಯುಕ್ತ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಧನೆಯನ್ನು ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಿಳಿಸಲಿದ್ದಾರೆ.
ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಪದೇ ಪದೇ ವಿವಾದಕ್ಕೀಡಾಗುತ್ತಿವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿದ್ದರೆ ಈಗಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದರು.

ಮಾಜಿ ಸಂಸದ ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಕುರಿತು ರಂಜಾನ್ ನಂತರ ನಿರ್ಧಾರ ಕೈಗೊಳ್ಳಲಾಗುವುದು. ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ಪ್ರತಿಪಕ್ಷಗಳು ಕೈಗೊಳ್ಳುವ ತೀರ್ಮಾನ ನೋಡಿಕೊಂಡು ಜೆಡಿಎಸ್ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು. ಮ್ಯಾನ್ ಹೋಲ್ ಗೆ ಪೌರಕಾರ್ಮಿಕನನ್ನು ಇಳಿಸಿದ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರದ ಬೇಜವಾಬ್ದಾರಿ ತನದಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದರು.
ರೈತರಿಗೆ ಒಂದು ರೂಪಾಯಿ ಬರ ಪರಿಹಾರ ನೀಡಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ಅದು ಸರ್ಕಾರ ರೈತರಿಗೆ ಮಾಡಿದ ಅಪಮಾನ, ಮೊದಲು ಸರ್ಕಾರ ರೈತರ ಸಾಲ ಮನ್ನಾ ಮಾಡಲಿ. ನಂತರ ಕೇಂದ್ರದ ಕಡೆ ಕೈತೋರಿಸಲಿ. ಜನರ ತೆರಿಗೆ ಹಣದಲ್ಲಿ ರೈತರ ಸಾಲ ಮನ್ನಾ ಮಾಡಬಹುದು ಎಂದರು. ವಿದ್ಯುತ್ ಖರೀದಿಯಲ್ಲಿ ಸಾವಿರಾರು ಕೋಟಿ ಹಗರಣ ಆಗಿದೆ. ಇದರ ಬಗ್ಗೆ ದಾಖಲೆಗಳಿದ್ದು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ ಎಂದರು.












Click it and Unblock the Notifications