ನೀವೇ ರಕ್ಷಿಸಿ, ಇಲ್ಲ ನಮಗಾದರೂ ಬಿಡಿ; ಜೋಡಿ ನಂದಿ ವಿಗ್ರಹ ಸಂರಕ್ಷಣೆಗೆ ಗ್ರಾಮಸ್ಥರ ಒತ್ತಾಯ
ಮೈಸೂರು, ಜುಲೈ 17: ನಿನ್ನೆ ಮೊನ್ನೆಯಷ್ಟೆ ಮೈಸೂರಿನ ಸಮೀಪದ ಅರಸಿನಕೆರೆಯಲ್ಲಿ ಜೋಡಿ ನಂದಿ ವಿಗ್ರಹ ಪತ್ತೆಯಾಗಿದ್ದವು. ಇದೀಗ ಈ ವಿಗ್ರಹಗಳನ್ನು ಜತನದಿಂದ ಕಾಪಾಡಲು ಪುರಾತತ್ವ ಇಲಾಖೆ ಮುಂದಾಗಿದೆ. ಪುರಾತತ್ವ ಶಾಸ್ತ್ರಜ್ಞರಾದ ಎನ್.ಎಲ್.ಗೌಡ ಹಾಗೂ ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಿವಿಗ್ರಹದ ಕಲ್ಲುಗಳನ್ನು ಸೂಕ್ಷ್ಮವಾಗಿ ಗಮನಿಸಿ ವರದಿ ಸಲ್ಲಿಸಲು ಸಜ್ಜಾಗಿದ್ದಾರೆ.
ಆದರೆ ನಂದಿ ವಿಗ್ರಹಗಳು ಕೆರೆ ಜಾಗದಲ್ಲಿ ಪತ್ತೆಯಾಗಿರುವ ಕಾರಣ ಆದಷ್ಟು ಬೇಗ ಅವುಗಳನ್ನು ಸಂರಕ್ಷಿಸಿ, ಇಲ್ಲವೇ ನಮಗಾದರೂ ಸಂರಕ್ಷಿಸಲು ಬಿಡಿ ಎಂದು ಗ್ರಾಮಸ್ತರು ಒತ್ತಾಯಿಸಿದ್ದಾರೆ.
ಈ ವಿಗ್ರಹಗಳ ಇತಿಹಾಸವನ್ನು ಅಂದಾಜಿಸುವ ಕೆಲಸವೂ ನಡೆಯುತ್ತಿದೆ. ಎರಡು ಪ್ರತ್ಯೇಕ ಬಂಡೆಗಳಲ್ಲಿ ವಿಗ್ರಹಗಳನ್ನು ಕೆತ್ತಲಾಗಿದೆ. ಮುಖಾಮುಖಿಯಾಗಿ ಪತ್ತೆಯಾಗಿರುವುದನ್ನು ನೋಡಿದರೆ ಬೇರೆಡೆಗೆ ಕೊಂಡೊಯ್ಯಲು ಇಲ್ಲಿ ಕೆತ್ತನೆ ಮಾಡಿರಬಹುದು. ಕಾರಣಾಂತರದಿಂದ ಪೂರ್ಣಗೊಳಿಸದೇ ಇರುವ ಸಾಧ್ಯತೆ ಇದೆ. ಬಳಸಿರುವ ಕಲ್ಲು ಹಾಗೂ ಕೆತ್ತನೆ ಶೈಲಿ ಆಧಾರದಲ್ಲಿ ಈ ವಿಗ್ರಹಗಳು ವಿಜಯನಗರ ಕಾಲದ್ದಾಗಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರದಿ ಪರಿಶೀಲನೆ ನಡೆಸಿದ ಬಳಿಕ ಇಲಾಖೆಯ ಹಿರಿಯ ಅಧಿಕಾರಿಗಳು ಚರ್ಚಿಸಿ ನಂದಿಯ ವಿಗ್ರಹಗಳನ್ನು ಹೊರತೆಗೆದು ಸ್ಮಾರಕ ಮಾಡಬೇಕೇ ಅಥವಾ ನಂದಿ ಮೂರ್ತಿಗಳು ಖಾಸಗಿ ಜಮೀನಿನಲ್ಲಿ ಇರುವ ಕಾರಣ ಈ ಜಾಗವನ್ನು ಇಲಾಖೆ ಕೊಂಡು ಸಂರಕ್ಷಣೆ ಮಾಡಬೇಕೇ ಎಂಬುದರ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
ಈ ಎಲ್ಲಾ ಪ್ರಕ್ರಿಯೆಗೆ ಅಂದಾಜು ಎರಡು ತಿಂಗಳಾದರೂ ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ಗ್ರಾಮಸ್ಥರೇ ಟ್ರಸ್ಟ್ ಮಾಡಿಕೊಂಡು ಆ ಜಾಗವನ್ನು ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳ ಸಲಹೆಯನ್ನು ಕೂಡ ಕೇಳಿದ್ದಾರೆ.
ಎಷ್ಟೋ ವರ್ಷಗಳಿಂದ ಅರೆಬರೆ ಕಾಣಿಸಿಕೊಂಡಿದ್ದ ಈ ವಿಗ್ರಹವನ್ನು ಸಂಪೂರ್ಣ ಹೊರತೆಗೆದು ನೋಡಬೇಕು. ಅದಕ್ಕೆ ವಿಜೃಂಭಣೆಯಿಂದ ಪೂಜೆ ಸಲ್ಲಿಸಬೇಕು, ಹಬ್ಬ ಸಹ ಮಾಡಬೇಕು ಎಂದು ಗ್ರಾಮಸ್ಥರು ಚಂದಾ ವಸೂಲಿ ಕಾರ್ಯಕ್ಕೆ ಸಹ ಮುಂದಾಗಿದ್ದರು. ಆದರೆ ಇಲಾಖೆ ಅನುಮತಿ ಇಲ್ಲದೆ ಇದ್ಯಾವುದು ಸಾಧ್ಯವಾಗಲಿಲ್ಲ.
ಇದು ಕೆರೆಯ ಜಾಗವಾದ ಕಾರಣ ಮಳೆ ಹೆಚ್ಚಾಗಿ ಕೆರೆಯಲ್ಲಿ ನೀರು ಬಂದರೆ ಈ ವಿಗ್ರಹ ನೀರಿನಲ್ಲಿ ಮುಳುಗುತ್ತದೆ. ಹಾಗಾಗುವುದಕ್ಕೂ ಮುನ್ನವೇ ಪುರಾತತ್ವ ಇಲಾಖೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ವಿಗ್ರಹವನ್ನು ಹೊರತೆಗೆದು ದೇವಾಲಯ ನಿರ್ಮಾಣ ಮಾಡಿ ಗೌರವ ಸಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸುದ್ದಿ ಎಲ್ಲೆಲ್ಲೂ ಹರಡುತ್ತಿದ್ದಂತೆ ಸಾಕಷ್ಟು ಜನರು ಈ ನಂದಿ ವಿಗ್ರಹಗಳನ್ನು ನೋಡಲು ಅರಸಿನಕೆರೆ ಗ್ರಾಮಕ್ಕೆ ಬರುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.












Click it and Unblock the Notifications