ಮನೋರಂಜನ್ ಮನೆಗೆ ಗುಪ್ತಚರ ಇಲಾಖೆ ಅಧಿಕಾರಿಗಳ ತಂಡ ಭೇಟಿ
ಮೈಸೂರು, ಡಿಸೆಂಬರ್ 16: ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ ಯುವಕ ಮನೋರಂಜನ್ ಮನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಗುಪ್ತ ಚರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಶೋಧ ಕಾರ್ಯ ನಡೆಸಿದರು.
ಬೆಳಗ್ಗೆ ಮನೋರಂಜನ್ ಮನೆಗೆ ಭೇಟಿ ನೀಡಿದ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳು ಆತನ ರೂಂನಲ್ಲಿದ್ದ ಕೆಲವು ಸಾಕ್ಷ್ಯಾಧಾರ ಕಲೆ ಹಾಕಿದರು. ಬಳಿಕ ಕೋಣೆಯನ್ನು ಸೀಜ್ ಮಾಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಯನಗರ ಠಾಣೆ ಪೊಲೀಸರು ಮನೋರಂಜನ್ ಮನೆಗೆ ಬಂದೋಬಸ್ತ್ ಮುಂದುವರಿಸಿದ್ದಾರೆ.

ಬ್ಯಾಂಕ್ ಖಾತೆ ಪರಿಶೀಲನೆ:
ಮನೋರಂಜನ್‌ಗೆ ಸಂಬಂಧಿಸಿದ ಇಂಚಿಂಚು ಮಾಹಿತಿಗಳನ್ನು ತನಿಖಾ ತಂಡದ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಮನೋರಂಜನ್ ತಂದೆಯ ಪ್ರಕಾರ ಆತ ಅವರ ಬಳಿ ಹೆಚ್ಚಾಗಿ ಹಣ ಪಡೆಯು ತ್ತಿರಲಿಲ್ಲ. ಕೆಲಸ ಕೂಡ ಮಾಡುತ್ತಿರಲಿಲ್ಲ. ಆದರೂ ಆತನಿಗೆ ಹೊರ ರಾಜ್ಯದ ಇತರೆ ಆರೋಪಿಗಳ ಸಂಪರ್ಕವಾಗಿದ್ದು ಹೇಗೆ? ಮೈಸೂರಿನಿಂದ ಬೆಂಗಳೂರು, ದಿಲ್ಲಿಗೆ ವಿಮಾನದಲ್ಲಿ ಓಡಾಡಲು ಹಣ ಎಲ್ಲಿಂದ ಬರುತ್ತಿತ್ತು ಎಂಬುದು ಸೇರಿದಂತೆ ಎಲ್ಲ ಮಾಹಿತಿಗಳ ಬೆನ್ನತ್ತಿರುವ ತನಿಖಾಧಿಕಾರಿಗಳು, ಮನೋರಂಜನ್ ಬಳಸುತ್ತಿದ್ದ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ವಿಜಯ ನಗರ 2 ನೇ ಹಂತದಲ್ಲಿರುವ ಮನೆಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ದಾಂಧಲೆ ನಡೆಸಿದ ಯುವಕ ತಂದೆ ದೇವರಾಜೇಗೌಡ ಮತ್ತು ಶೈಲಜಾ ಅವರಿಂದ ಮಾಹಿತಿ ಪಡೆದುಕೊಂಡರು.
ನಾಲ್ಕೈದು ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿದ್ದ ಅಧಿಕಾರಿಗಳ ತಂಡ, ಪೋಷಕರಿಂದ ಮನೋರಂಜನ್‌ನ ಶೈಕ್ಷಣಿಕ ಹಿನ್ನಲೆ, ಯಾರೊಂದಿಗೆ ಒಡನಾಟ ಹೊಂದಿದ್ದ. ಮನೆಗೆ ಆತನೊಂದಿಗೆ ಯಾರು ಬಂದು ಹೋಗುತ್ತಿದ್ದರು ಹೀಗೆ ಹಲವು ವಿಷಯಗಳ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ಪಡೆದು ಕೊಂಡರು.
ಇದೇ ವೇಳೆ ಆತ ವಾಸವಿದ್ದ ಕೋಣೆಯ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು, ಕೋಣೆಯಲ್ಲಿದ್ದ ಪುಸ್ತಕಗಳು ಮತ್ತು ಇನ್ನಿತರ ವಸ್ತುಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಕೆಲ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಗುಪ್ತಚರ ಇಲಾಖೆಯ ಮೈಸೂರು ವಿಭಾಗದ ನಿರ್ದೇಶಕ ಪ್ರವೀಣ್ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ವಿಜಯ ನಗರ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಡಿ. ಸುರೇಶ್ ಕುಮಾರ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.












Click it and Unblock the Notifications