Mysuru: ಹಸಿರು ಪಟಾಕಿಗೆ ಮಾತ್ರ ಅವಕಾಶ: ಮಾರಾಟಗಾರರಿಗೆ ಅಧಿಕಾರಿಗಳಿಂದ ಸೂಚನೆ
ದೀಪಾವಳಿ ಸಮೀಪವಾಗುತ್ತಿದ್ದು ಎಲ್ಲೆಡೆ ಈಗಲೇ ಸಂಭ್ರಮ ಮನೆ ಮಾಡಿದೆ. ಮಳೆಯ ನಡುವೆಯೂ ಚಿಣ್ಣರು ಪಟಾಕಿ ಸಿಡಿಸಲು ಶುರು ಮಾಡಿದ್ದಾರೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಈ ಬಾರಿ ಮೈಸೂರಿನಲ್ಲಿ ಅಧಿಕಾರಿಗಳು ಸಾಂಪ್ರದಾಯಿಕ ಪಟಾಕಿಗಳ ಅಬ್ಬರಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದು, ಪಟಾಕಿ ಮಾರಾಟಗಾರರ ಮೇಲೆ ನಿಗಾ ವಹಿಸಲಿದ್ದಾರೆ.
ದೀಪಾವಳಿಗೆ ಇನ್ನು 9 ದಿನ ಮಾತ್ರ ಬಾಕಿ ಇದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹಸಿರು ಪಟಾಕಿ ಹೊರತುಪಡಿಸಿ ಉಳಿದ ಯಾವುದೇ ರೀತಿಯ ಪಟಾಕಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಆದೇಶ ಕಟ್ಟು ನಿಟ್ಟಾಗಿ ಪಾಲಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಕೇವಲ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಿದೆ.

ಜಿಲ್ಲಾಡಳಿತ ಈಗಾಗಲೇ ಪಟಾಕಿ ಮಾರಾಟಗಾರರಿಗೆ ಆದೇಶ ಹೊರಡಿಸಿದ್ದು, ಹಸಿರು ಪಟಾಕಿ ಬಿಟ್ಟು ಉಳಿದ ಯಾವುದೆ ಪಟಾಕಿ ಮಾರಾಟ ಮಾಡದಂತೆ ಸೂಚನೆ ಕೊಟ್ಟಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ, ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿ ಚಿಹ್ನೆಯಿದ್ದು ಕ್ಯೂರ್ಆ ಕೋಡ್ ಇರುವ ಪಟಾಕಿ ಉಪಯೋಗಿಸುವಂತೆ ಹೇಳಿದೆ.
ಪಟಾಕಿ ಮಾರಾಟಕ್ಕೆ ಅನುಮತಿ ನೀಡುವ ಸ್ಥಳೀಯ ಸಂಸ್ಥೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಗೆ ಈಗಾಗಲೇ ಪತ್ರ ಬರೆದು ಕೇವಲ ಹಸಿರು ಪಟಾಕಿ ಮಾರಾಟ ಮಾಡುವವರಿಗೆ ಮಾತ್ರವೇ ಲೈಸೆನ್ಸ್ ನೀಡುವಂತೆ ಮನವಿ ಮಾಡಲಾಗಿದೆ ಎಂದು ಪರಿಸರ ಅಧಿಕಾರಿ ವಿ.ಎಸ್.ಕುಮಾರ್ ತಿಳಿಸಿದ್ದಾರೆ.
ಪಟಾಕಿ ಸಿಡಿಸಲು ಸಮಯ ನಿಗದಿ
ದೀಪಾವಳಿ ಹಬ್ಬದ ವೇಳೆ, ರಾತ್ರಿ 8 ರಿಂದ ರಾತ್ರಿ 10 ಗಂಟೆ ತನಕ ಮಾತ್ರ ಪಟಾಕಿಗಳ ಸಿಡಿಸಲು ಅವಕಾಶ ನೀಡಲಾಗಿದೆ. 125 ಡೆಸಿಬಲ್ ಮೇಲ್ಪಟ್ಟ ಪಟಾಕಿ ಸಿಡಿಸುವುದನ್ನ ನಿಷೇಧ ಮಾಡಲಾಗಿದೆ. 100 ಡೆಸಿಬಲ್ ಮೀರಿದ್ದರೆ ಅವುಗಳು ಹಸಿರು ಪಟಾಕಿ ಎನಿಸಿಕೊಳ್ಳಲ್ಲ. ಅದನ್ನ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ನಿಯಂತ್ರಣ ಏಕೆ?
ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ಲೋಹಯುಕ್ತ ಪಟಾಕಿ ಬಳಸದಿರುವುದು ಸೂಕ್ತ. ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಬಿದ್ದು ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ. ಪಟಾಕಿ ಸಿಡಿಸಲೇಬೇಕು ಎಂದಾದರೆ ಪರಿಸರಕ್ಕೆ ಕಡಿಮೆ ಹಾನಿ ಉಂಟು ಮಾಡುವ ಹಸಿರು ಪಟಾಕಿ ಮಾತ್ರವೇ ಸಿಡಿಸಬೇಕು.












Click it and Unblock the Notifications