ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸದೇ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ಎಚ್.ಸಿ.ಮಹದೇವಪ್ಪ ಸೂಚನೆ
ಮೈಸೂರು, ಸೆಪ್ಟೆಂಬರ್, 25: ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸದೇ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಜನರಿಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ತುರ್ತಾಗಿ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೈಸೂರಿನಲ್ಲಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನರು ತಾಲೂಕು ಕಚೇರಿಗೆ, ಪೊಲೀಸ್ ಠಾಣೆಗೆ, ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಅನೇಕ ಕೆಲಸಗಳಿಗಾಗಿ ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ತಿಂಗಳಪೂರ್ತಿ ಅಲೆಯಬಾರದು. ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಜನರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವಲ್ಲಿ ತುರ್ತಾಗಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಬಡಜನರು ತಮ್ಮ ತಾಳಿ, ಓಲೆಗಳನ್ನು ಅಡವಿಟ್ಟು ಸರ್ಕಾರದ ಸೌಲಭ್ಯ ಪಡೆಯುಂತಹ ಉದಾಹರಣೆಯನ್ನು ಕಂಡಿದ್ದೇವೆ. ಇದ್ಯಾವುದಕ್ಕೂ ಅವಕಾಶ ನೀಡದೆ ನಮ್ಮ ಆಡಳಿತವನ್ನು ನೇರವಾಗಿ ಜನರ ಬಳಿಗೆ ಕರೆದೊಯ್ಯುವುದು ನಮ್ಮ ಸರ್ಕಾರದ ಉದ್ದೇಶ ಮತ್ತು ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರೊಂದಿಗೆ ಸಂವಾದ ಮಾಡದಿದ್ದರೆ, ಅವರ ಕಷ್ಟ, ಕಾರ್ಪಣ್ಯ ಅರಿವಾಗುವುದಿಲ್ಲ. ಕಡ್ಡಾಯವಾಗಿ ತಿಂಗಳಲ್ಲಿ ಎಂಟು ದಿನ ಪ್ರವಾಸ ಕೈಗೊಳ್ಳಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಿದರೆ ನಿಮ್ಮ ಕೆಲಸಕ್ಕೆ ಸಾರ್ಥಕತೆ ದೊರಕುತ್ತದೆ. ಜನರ ಕಷ್ಟಗಳನ್ನು ಸಕಾಲಕ್ಕೆ ಬಗೆಹರಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಇದನ್ನು ಗಮನದಲ್ಲಿರಿಸಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ರೇಷನ್ ಕಾರ್ಡ್ ಬೇಕಿದೆ, ಖಾತೆ ಬದಲಾವಣೆ ಆಗಬೇಕು, ವಾಸಕ್ಕಾಗಿ ಮನೆ ಅಗತ್ಯವಿದೆ, ವಿದ್ಯುತ್ ಕಂಬ ಅಳವಡಿಸಿಕೊಡಿ, ವ್ಯವಸಾಯಕ್ಕೆ ಕೊಳವೆ ಬಾವಿ ಕೊಡಿಸಿ, ಸಣ್ಣಪುಟ್ಟ ಕೆಲಸ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಾರೆ. ಹೀಗೆ ವಿವಿಧ ಸಮಸ್ಯೆಗಳನ್ನು ಹೊತ್ತುಬಂದ ಜನರ ಕುಂದು ಕೊರತೆಗಳನ್ನು ಆಲಿಸಿದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ತುರ್ತಾಗಿ ಪರಿಹಾರ ಕಲ್ಪಿಸಬೇಕೆಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.
ನಿವೃತ್ತ ಸೈನಿಕ ಸಿದ್ದಣ್ಣಯ್ಯ ಅವರು ಸರ್ಕಾರದಿಂದ ತಮಗೆ ಬರಬೇಕಾದ ನಿವೇಶನದ ಬಗ್ಗೆ ಮನವಿ ಮಾಡಿಕೊಂಡರು. ಸೈನಿಕರು ತಮ್ಮ ಸಂಸಾರವನ್ನು ತೊರೆದು ದೇಶದ ಗಡಿಯಲ್ಲಿ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿರುತ್ತಾರೆ. ಮೊದಲು ಅವರನ್ನು ಗೌರವಿಸಬೇಕು. ಅವರಿಗೆ ಕಾನೂನಿಕ ಪ್ರಕಾರ ಸಿಗಬೇಕಾದ ಸೌಲಭ್ಯವನ್ನು ಯಾವುದೇ ಕಾರಣಕ್ಕೂ ತಡಮಾಡದೆ ದೊರಕಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವೃದ್ಧರಾದ ವೆಂಕಟಮ್ಮ (83) ಅವರು ತಮ್ಮ ಗಂಡುಮಕ್ಕಳಿಂದ ಜೀವನ ನಿರ್ವಹಣೆಗಾಗಿ ಪರಿಹಾರ ಕೊಡಿಸಬೇಕೆಂದು ಸಚಿವರಲ್ಲಿ ಅವಲತ್ತುಕೊಂಡರು. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಜೀವನ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ವೆಚ್ಚವನ್ನು ನ್ಯಾಯಾಲಯದ ತೀರ್ಮಾನದಂತೆ ಕೊಡಿಸಲಾಗುವುದು ಎಂದು ಭರವಸೆ ನೀಡಿ, ಬಳಿಕ ಸ್ಥಳದಲ್ಲೇ ಸೂಕ್ತ ಕ್ರಮವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅನ್ವರ್ ಎಂಬುವರು ಮಾತನಾಡಿ, ನಮ್ಮ ಕುಟುಂಬಕ್ಕೆ ರೇಷನ್ ಕಾರ್ಡ್ ಬೇಕಿದೆ. ಆಹಾರ ಧಾನ್ಯ ಪಡೆಯಲು ಇಲ್ಲದಿದ್ದರೂ, ಆರೋಗ್ಯ ತಪಾಸಣೆಗೆ ನಮಗೆ ಅಗತ್ಯವಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಈ ವಿಷಯ ಕುರಿತು ಆಹಾರ ಇಲಾಖೆಯಲ್ಲಿ ಅಧಿಕಾರಿಯನ್ನು ಕೇಳಿದಾಗ, ಇವರು ರೇಷಾನ್ ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications