ಸಂಭ್ರಮಾಚರಣೆಗೆ ಮೈಸೂರಿನಲ್ಲಿರುವ ಹೋಟೆಲ್‌ಗಳು ಭಾಗಶ: ಭರ್ತಿ
ಮೈಸೂರು,ಡಿ21: ಸಾಲು-ಸಾಲಾಗಿ ಆಗಮಿಸಿದ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆ ಎಲ್ಲಡೆ ಸಿದ್ದತೆಗಳು ಭರದಿಂದ ಸಾಗಿವೆ. ಈ ಸಂಭ್ರಮಾಚರಣೆಯ ಭಾಗವಾಗಿ ದೇಶ,ವಿದೇಶದ ನಾನಾ ಮೂಲೆಗಳಿಂದ ಪ್ರವಾಸಿಗರು ಮೈಸೂರಿನತ್ತ ದೌಡಾಯಿಸುತ್ತಿರುವುದು ಇಲ್ಲಿನ ಹೋಟೆಲ್ ಉದ್ಯಮಕ್ಕೆ ಬೂಸ್ಟರ್ ಸಿಕ್ಕಿದಂತಾಗಿದೆ.
ಪ್ರವಾಸೋದ್ಯಮದ ದೃಷ್ಠಿಯಿಂದ ಮೈಸೂರು ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ನಗರದಲ್ಲಿರುವ ಸುಮಾರು 415 ಹೊಟೇಲ್‌ಗಳಲ್ಲಿ 10,300 ರೂಂಗಳಿದ್ದು, ಒಂದು ತಿಂಗಳ ಹಿಂದೆಯಿಂದಲೇ ಹೋಟೆಲ್ ಕೊಠಡಿ,ಅತಿಥಿಗಳ ಗೃಹಗಳ ಬುಕಿಂಗ್ ಪ್ರಕ್ರಿಯೇ ಭರದಿಂದ ಸಾಗಿದೆ.
ಸಾಂಕ್ರಾಮಿಕ ರೋಗ ಹರಡುವ ಪೂರ್ವದಲ್ಲಿ ಅಂದರೇ 2019 ಕ್ಕೆ ಹೋಲಿಸಿದರೆ ಈ ಬಾರಿ ಮೈಸೂರಿಗೆ ಕನಿಷ್ಠ 10 ಪ್ರತಿಶತ ಹೆಚ್ಚುವರಿ ಪ್ರವಾಸಿಗರು ಆಗಮಿಸುವ ಸಾಧ್ಯತೆಗಳು ಹೆಚ್ಚಿವೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಹೋಟೆಲ್‌ಗಳಲ್ಲಿನ ಕೊಠಡಿಗಳು ಈಗಾಗಲೇ ಕಾಯ್ದಿರಿಸಲಾಗುತ್ತಿರುವುದರಿಂದ ಮೈಸೂರಿನ ಹೋಟೆಲ್ ಉದ್ಯಮಕ್ಕೆ ಪುಷ್ಟಿ ನೀಡಿದಂತಾಗಿದೆ.

ಈಗಾಗಲೇ ಪ್ರವಾಸಿಗರು ಡಿಸೆಂಬರ್ 23 ರಿಂದ ಜನವರಿ 2 ರವರೆಗೆ ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು,ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಕೊಠಡಿಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದು, ವಾರಾಂತ್ಯದೊಳಗೆ ಎಲ್ಲ ಕೊಠಡಿಗಳು ಬುಕ್ ಆಗುವ ಸಾಧ್ಯತೆಗಳಿವೆ ಹೆಚ್ಚಿವೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ತಿಳಿಸಿದ್ದಾರೆ.
ಟ್ರಾವೆಲ್ ಟೂರಿಸಂ ಸಹ ಬುಕ್ !
ಕಳೆದ 10 ದಿನಗಳಿಂದ ಶೇ 80 ರಷ್ಟು ವಾಹನಗಳನ್ನು ಸಹ ಬುಕ್ಕಿಂಗ್ ಮಾಡಲಾಗುತ್ತಿದೆ. ಡಿಸೆಂಬರ್ 22 ರಿಂದ ಜನವರಿ 15 ರವರೆಗೆ ಟ್ರಾವೆಲ್ಸ್ ಬುಕ್ಕಿಂಗ್‌ಗಳು ಸಹ ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದು ಮೈಸೂರು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ ಎ ಜಯಕುಮಾರ್ ತಿಳಿಸಿದ್ದಾರೆ.
ಕ್ರಿಸ್‌ಮಸ್ ಹಬ್ಬಕ್ಕೆ ತಯಾರಿ
ನಗರದಲ್ಲಿ ಸುಮಾರು 10ಕ್ಕೂ ಅಧಿಕ ಚರ್ಚಗಳಿವೆ.ಅವುಗಳಲ್ಲಿ ಸೆಂಟ್ ಫಿಲೋಮಿನಾ ಚರ್ಚ್, ಸೆಂಟ್ ಆಂಥೋನಿ ಶೆರಿನ್ ಚರ್ಚ್, ಇನ್ಫಾಂಟ್ ಜೇಸಸ್ ಚರ್ಚ್, ಸೆಂಟ್ ಬಾರ್ತಲೋಮಿ ಕ್ಯಾಥೆರಲ್ ಚರ್ಚ್, ವೆಸ್ಲೆ ಕ್ಯಾಥರಲ್ ಚರ್ಚ್ ಹೆಚ್ಚು ಜನಪ್ರೀಯವಾಗಿವೆ. ಈಗಾಗಲೇ ಈ ಚರ್ಚಗಳಲ್ಲಿ ಕ್ರಿಸ್‌ಮಸ್ ಆಚರಣೆಯ ಅಂಗವಾಗಿ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗುತ್ತಿದೆ.

ಫಲ ಪುಷ್ಪ ಪ್ರದರ್ಶನಕ್ಕೆ ಸಿದ್ಧತೆ
ಅರಮನೆ ಆವರಣದಲ್ಲಿ ಡಿಸೆಂಬರ್ 24ರಿಂದ ಜನವರಿ 2ರವರೆಗೆ ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಗೊಂಬೆ ಪ್ರದರ್ಶನ ಆಯೋಜಿಸಲು ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಯೋಜನೆಗಳನ್ನು ಸಹ ರೂಪಿಸಲಾಗುತ್ತಿದೆ.
ಜಿಲ್ಲಾಡಳಿತ ಮುಂಬರುವ ದಿನಗಳಲ್ಲಿ ಚಳಿಗಾಲದ ಉತ್ಸವವನ್ನು ಆಯೋಜಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವತ್ತ ಗಮನಹರಿಸಬೇಕಿದೆ.ಇದರಿಂದ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಗಳ ಚೇತರಿಗೆ ಸಹಾಯಕಾರಿಯಾಗಲಿದೆ.












Click it and Unblock the Notifications