Varuna Constituency: ಬಿಎಸ್‌ವೈ-ಸಿದ್ದರಾಮಯ್ಯ ಒಳ ಒಪ್ಪಂದದ ಬಗ್ಗೆ ವಿಜಯೇಂದ್ರ ಹೇಳಿದ್ದೇನು?
ಮೈಸೂರು, ಏಪ್ರಿಲ್ 23: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ವಿ. ಸೋಮಣ್ಣ ತೊಡೆತಟ್ಟಿದ್ದಾರೆ. ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ಶತ ಪ್ರಯತ್ನ ನಡೆಸುತ್ತಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಒಳ ಒಪ್ಪಂದ ಆಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದ್ದಾರೆ.

ವರಣಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಬಿ.ವೈ ವಿಜಯೇಂದ್ರ, ಯಡಿಯೂರಪ್ಪ ಅವರು ಸತತವಾಗಿ ಪ್ರತಿನಿಧಿಸುತ್ತಾ ಬಂದಿದ್ದ ಶಿಕಾರಿಪುರದಲ್ಲಿ ಪ್ರತಿನಿಧಿಸಬೇಕಾಗಿರುವುದರಿಂದ ವರುಣದಿಂದ ಸ್ಪರ್ಧಿಸಲಾಗಿಲ್ಲ. ವರುಣದಿಂದಲೇ ರಾಜ್ಯದ ಜನರು ನನ್ನನ್ನು ಗುರುತಿಸಿದರು. ಹೀಗಾಗಿ ವರುಣ ಮೇಲೆ ನನಗೆ ಅಪಾರ ಪ್ರೀತಿಯಿದೆ ಎಂದು ನಾನು ಮತ್ತೊಮ್ಮೆ ವರುಣಕ್ಕೆ ಬಂದು ಸೋಮಣ್ಣನವರ ಪರ ಪ್ರಚಾರ ನಡೆಸುತ್ತೇನೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಅಸಮಾಧಾನಗೊಂಡು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವ ಬಗ್ಗೆ ಮಾತನಾಡಿದ ಬಿ.ವೈ ವಿಜಯೇಂದ್ರ, ಕಾಂಗ್ರೆಸ್‌ಗೆ ಹೋಗಿದ್ದು ದೊಡ್ಡ ದುರಂತ. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದ ಕಾಂಗ್ರೆಸ್ ಪಕ್ಷ ಸೇರಿದ್ದು ಬೇಸರ ತರಿಸಿದೆ ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬಹುದಿತ್ತು. ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತು. ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಸೋಲಲಿದ್ದು, ಅವರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನುವ ಭರವಸೆಯನ್ನು ಬಿ.ವೈ ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರಿಸಿದ ಬಿ.ವೈ ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಕೇಂದ್ರದ ಅನೇಕ ಯೋಜನೆಗಳು ಜನರನ್ನು ತಲುಪಲಿದೆ. ಕಾಂಗ್ರೆಸ್‌ನವರ ಅತಿರೇಕದ ವರ್ತನೆಗೆ ಮೇ 13ಕ್ಕೆ ಉತ್ತರ ಸಿಗಲಿದೆ. ಕಾಂಗ್ರೆಸ್ ಜೆಡಿಎಸ್‌ಗೆ ಖಂಡಿತವಾಗಿ ಬೆಂಬಲ ಸಿಗಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ. 130ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications