ದೊಡ್ಡಪ್ಪನ ಹೇಳಿಕೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ನಿಖಿಲ್
ಮಂಡ್ಯ, ಮಾರ್ಚ್ 9: ಸುಮಲತಾ ಅವರ ವಿಚಾರವಾಗಿ ಲೋಕೋಪಯೋಗಿ ಸಚಿವ ರೇವಣ್ಣರ ಕೊಟ್ಟಿರುವ ಹೇಳಿಕೆ ಕುರಿತು ಮಂಡ್ಯ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿಯಲ್ಲಿ ಮಾತನಾಡಿದ ನಿಖಿಲ್ ಅವರು, ಯಾವ ವಿಚಾರದಲ್ಲಿ ಮತ್ತು ಅರ್ಥದಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ನನಗೆ ಅಪ್ಪ, ಅಮ್ಮ, ಕುಟುಂಬ ಒಳ್ಳೆಯ ನಡತೆಯನ್ನು ಹೇಳಿಕೊಟ್ಟಿದೆ. ಮಹಿಳೆಯರಿಗೆ ಗೌರವ ಕೊಡುವುದನ್ನು ಹೇಳಿಕೊಟ್ಟಿದೆ. ಆದರೆ ಅವರ ಹೇಳಿಕೆಯ ಅರ್ಥವೇನು? ಎಂದು ದೊಡ್ಡಪ್ಪ ರೇವಣ್ಣರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಜನರು ಯಾವ ತೀರ್ಪು ಕೊಡುತ್ತಾರೋ ಅದನ್ನು ಕಾದು ನೋಡಬೇಕಿದೆ. ರಾಜಕಾರಣದಲ್ಲಿ ಸಂಬಂಧಗಳನ್ನು ಹಾಳು ಮಾಡಲು ಬಿಡುವುದಿಲ್ಲ. ರಾಜಕಾರಣದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಎಲ್ಲರ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ. ಈಗಾಗಲೇ ನನ್ನ ಸ್ಪರ್ಧೆಗೆ ಎಲ್ಲರೂ ಕೂಡ ಬೆಂಬಲ ನೀಡಿದ್ದಾರೆ ಎಂದರು.

ವರಿಷ್ಠರು, ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ಕಾರ್ಯಕರ್ತರು ಹಾಗೂ ಜಿಲ್ಲೆಯ ಜನತೆಯ ಒತ್ತಾಯದಿಂದ ನನಗೆ ಟಿಕೆಟ್ ನೀಡಿದ್ದಾರೆ. ಜೆಡಿಎಸ್ ಪಕ್ಷ ಟಿಕೆಟ್ ಕೊಟ್ಟಿರುವುದರಿಂದ ನಮ್ಮ ತಂದೆ ಮೇಲೆ ಜಿಲ್ಲೆಯ ಜನರು ಇಟ್ಟಿರುವ ನಿರೀಕ್ಷೆ ಉಳಿಸಿಕೊಳ್ಳುತ್ತೇನೆ ಎಂದು ನಿಖಿಲ್ ಭರವಸೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಬರುವ ಚರ್ಚೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅಂತಿಮ ತೀರ್ಪು ಮಂಡ್ಯ ಜನತೆ ನೀಡುತ್ತಾರೆ.ಅಂಬರೀಶಣ್ಣ ಅವರನ್ನು ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದರು. ಯಾರೇ ಚುನಾವಣೆಗೆ ನಿಂತರೂ ಸ್ವಾಗತಿಸೋಣ. ಅಂತಿಮ ತೀರ್ಪು ದೇವರಾದ ನೀವು ಕೊಡಬೇಕು. ನೀವು ಕೊಟ್ಟ ತೀರ್ಪಿಗೆ ನಾವೆಲ್ಲ ತಲೆಬಾಗುತ್ತೇವೆ ಎಂದು ನಿಖಿಲ್ ಹೇಳಿದರು.
ನಾನು ಬಾಡಿಗೆ ಮನೆ ಮಾಡಲು ಬಂದಿಲ್ಲ. ಸ್ವಂತ ತೋಟ, ಮನೆ ಮಾಡಿ ನಿಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯಲು ಬಂದಿದ್ದೇನೆ. ಕುಮಾರಣ್ಣನಿಗೆ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ. ಮರುಜನ್ಮ ಕೊಟ್ಟಿದ್ದು ಮಂಡ್ಯ ಜಿಲ್ಲೆ. ಹಾಗಾಗಿ ಋಣ ಮರೆಯಲು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಒಂದು ಬಾರಿ ಅವಕಾಶ ಮಾಡಿಕೊಡಿ ಎಂದು ನಿಖಿಲ್ ಕೋರಿದರು.












Click it and Unblock the Notifications