ವಿಡಿಯೋ; ನೈಟ್ ಕರ್ಪ್ಯೂ ಜಾರಿ ಆದೇಶ ಪುನರ್ ಪರಿಶೀಲನೆ ಇಲ್ಲ
ಮೈಸೂರು, ಡಿಸೆಂಬರ್ 26; "ನೈಟ್ ಕರ್ಪ್ಯೂ ಜಾರಿ ಆದೇಶ ಪುನರ್ ಪರಿಶೀಲನೆ ಇಲ್ಲ. ಅಕ್ಕ ಪಕ್ಕದ ರಾಜ್ಯಗಳ ಕೊರೊನಾ ಪರಿಸ್ಥಿತಿ ನೋಡಿ ಕರ್ಪ್ಯೂ ಜೊತೆಗೆ ಹಲವು ಕಠಿಣ ನಿಯಮ ಜಾರಿ ಮಾಡಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಮೈಸೂರಿಗೆ ರಾಜ್ಯ ಮಟ್ಟದ ರೈತರ ಸಮಾವೇಶದ ಉದ್ಘಾಟನೆಗಾಗಿ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮುಖ್ಯಮಂತ್ರಿಗಳು ಮಾತನಾಡಿದರು. "ದೇಶಾದ್ಯಂತ ಓಮಿಕ್ರಾನ್ ಬಗ್ಗೆ ಕಟ್ಟೆಚ್ಚರಿಕೆ ವಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ರೋಗ ಹರಡದಂತೆ ಮುನ್ನೆಚ್ಚೆರಿಕೆ ವಹಿಸಲಾಗುತ್ತಿದೆ" ಎಂದರು.
"ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ. ಇದರ ಜೊತೆಗೆ ಹಲವು ಕಠಿಣ ನಿಯಮ ಜಾರಿ ಗೊಳಿಸಲಾಗಿದೆ. ಇದರಿಂದ ಉದ್ಯಮಿಗಳಿಗೆ ನಷ್ಟವಾಗುತ್ತದೆ ಅನ್ನೋದು ಗಮನಕ್ಕೆ ಬಂದಿದೆ. ಆದರೆ ಆರೋಗ್ಯದ ಹಿತದೃಷ್ಟಿಯಿಂದ ಬದಲಾವಣೆ ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.

"2022ರ ಫೆಬ್ರವರಿಯಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಹೆಚ್ಚಲಿದೆ ಅನ್ನೋದು ಅಂದಾಜು ಮಾತ್ರ. ಆದರೆ ಅದಕ್ಕೆ ಯಾವುದೇ ಪುರಾವೆ ಇಲ್ಲ. ಆದರೂ ದೇಶಾದ್ಯಂತ ಓಮಿಕ್ರಾನ್ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೃಷಿ ದಿನಾಚರಣೆ ಹಿನ್ನೆಲೆ ಆಯೋಜನೆಗೊಂಡಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು. ನಗರದ ಕಲಾಮಂದಿರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ರೈತರ ಸಮಾವೇಶದಲ್ಲಿ ಸುತ್ತೂರು ಶ್ರೀಗಳು, ಕೃಷಿ ಕ್ಷೇತ್ರದ ತಜ್ಞರು, ಮುಖಂಡರುಗಳು, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಇದೇ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬುರು ಶಾಂತಕುಮಾರ್‌ಗೆ 'ರೈತ ರತ್ನ' ಗೌರವ ನೀಡಲಾಯಿತು. ಕುರುಬೂರು ಶಾಂತಕುಮಾರ್ ಅವರ 40 ವರ್ಷದ ರೈತ ಹೋರಾಟದ ಸೇವೆಯನ್ನ ಪರಿಗಣಿಸಿ ಬಸವರಾಜ ಬೊಮ್ಮಾಯಿ ರೈತ ರತ್ನ ಬಿರುದು ನೀಡಿ ಸನ್ಮಾನಿಸಿದರು.
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಅಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್, ಬಾರ್‌ಗಳಲ್ಲಿ ಶೇ 50ರಷ್ಟು ಜನರು ಮಾತ್ರ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.
ದಿಢೀರ್ ಎಂದು ನೈಟ್ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಉದ್ಯಮಕ್ಕೆ ಹೊಡೆತ ಬೀಳಲಿದೆ. ವರ್ಷಾಂತ್ಯದ 10 ದಿನಗಳ ಕಾಲ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೆವು. ಆದರೆ ಸರ್ಕಾರದ ಆದೇಶದಿಂದ ತೊಂದರೆಯಾಗಿದೆ ಎಂದು ಕ್ಲಬ್, ಪಬ್ ಮಾಲೀಕರು ಹೇಳಿದ್ದಾರೆ.












Click it and Unblock the Notifications