Yash: ಯಶ್ ರಾಮಾಚಾರಿ ಸಿನಿಮಾ, ಮೈಸೂರು ಸಮಾವೇಶ, ಏನಿದು ಲಿಂಕ್?
ಮೈಸೂರು, ಆಗಸ್ಟ್ 10: ಎರಡು ದಿನಗಳಿಂದ ಮೈಸೂರು ರಾಜಕೀಯ ಪಕ್ಷಗಳ ಪಾದಯಾತ್ರೆ, ಸಮಾವೇಶಕ್ಕೆ ಸಾಕ್ಷಿಯಾಗಿದೆ. ಬಿಜೆಪಿ-ಜೆಡಿಎಸ್ ಪಕ್ಷಗಳ 'ಮೈಸೂರು ಚಲೋ' ಪಾದಯಾತ್ರೆ ಶನಿವಾರ ಮುಕ್ತಾಯಗೊಳ್ಳಲಿದ್ದು, ನಗರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಸಮಾವೇಶಗಳನ್ನು ನಟ ಯಶ್ ಅಭಿನಯದ ಸಿನಿಮಾಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ.
ಶನಿವಾರ ಬಿಜೆಪಿ-ಜೆಡಿಎಸ್ ಪಕ್ಷದ 'ಮೈಸೂರು ಚಲೋ' ಪಾದಯಾತ್ರೆ ಮೈಸೂರಿನಲ್ಲಿ ಮುಕ್ತಾಯಗೊಳ್ಳಲಿದೆ ಮತ್ತು ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಇದೇ ಜಾಗದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಜನಾಂದೋಲನ ಸಮಾವೇಶ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳ ವಿರುದ್ಧ ಟೀಕೆಗಳನ್ನು ಮಾಡಿದ್ದರು.

2014ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆದ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ. ನಟ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ದೃಶ್ಯವೊಂದು ಮಹಾರಾಜ ಕಾಲೇಜು ಮೈದಾನದ ಬೃಹತ್ ಸಮಾವೇಶಕ್ಕೆ ಲಿಂಕ್ ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗುತ್ತಿದೆ.
ಯಶ್ ಸಿನಿಮಾ, ಮೈಸೂರು ಸಮಾವೇಶ: 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಪ್ರೇಮಿಗಳು. ಆದರೆ ಮನೆಯವರ ವಿರೋಧದ ನಡುವೆ ಇಬ್ಬರು ಬೇರೆ ಬೇರೆಯವರನ್ನು ವಿವಾಹವಾಗಲು ಒಪ್ಪಿಕೊಂಡಿರುತ್ತಾರೆ. ಒಂದೇ ದಿನ, ಒಂದೇ ಊರಿನಲ್ಲಿ ವಿವಾಹ ನಿಗದಿಯಾಗಿರುತ್ತದೆ.
ನಟ ಸಾಧು ಕೋಕಿಲ ಈ ಎರಡೂ ಮದುವೆ ಮಾಡಿಸುವ ಗುತ್ತಿಗೆ ಪಡೆದಿರುತ್ತಾರೆ. ಇವರ ಮದ್ವೆನೂ ಚಿತ್ರದುರ್ಗ, ಅವರ ಮದ್ವೆನೂ ಚಿತ್ರದುರ್ಗ, ಒಂದೇ ದಿನ ಒಂದೇ ಜಾಗ ಹೇಗೂ ಸಾಧ್ಯ? ಎಂಬ ಡೈಲಾಗ್ ಚಿತ್ರದಲ್ಲಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬೇರೆ ತಿರುವು ಇದೆ. ಆದರೆ ಈಗ ಮೈಸೂರು ಸಮಾವೇಶ ಇದೇ ಮಾದರಿಯಲ್ಲಿದೆ ಎಂಬುದು ಪೋಸ್ಟ್‌ಗಳ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಪಕ್ಷಗಳ ಸಮಾವೇಶದ ವೇದಿಕೆ ನಿರ್ಮಾಣ ಮಾಡುವ ಗುತ್ತಿಗೆಯನ್ನು ಒಬ್ಬರೇ ವ್ಯಕ್ತಿ ಪಡೆದಿದ್ದಾರೆ. ಈಗಾಗಲೇ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಆಗಸ್ಟ್ 9ರ ಶುಕ್ರವಾರ ಕಾಂಗ್ರೆಸ್ ಪಕ್ಷದ 'ಜನಾಂದೋಲನ' ಸಮಾವೇಶ ಯಶಸ್ವಿಯಾಗಿದೆ.
ಕಾಂಗ್ರೆಸ್ ನಾಯಕರು ವೇದಿಕೆ ಖಾಲಿ ಮಾಡುತ್ತಿದ್ದಂತೆಯೇ ಬಿಜೆಪಿ-ಜೆಡಿಎಸ್ 'ಮೈಸೂರು ಚಲೋ' ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಇದೇ ವೇದಿಕೆಯನ್ನು ಪುನರ್ ರಚನೆ ಮಾಡಲಾಗುತ್ತಿದೆ. ಆದ್ದರಿಂದ ಒಂದೇ ಊರು, ಎರಡು ದಿನ, ಒಬ್ಬರೇ ಗುತ್ತಿಗೆ ಎಂದು ಈ ಸಮಾವೇಶದ ವೇದಿಕೆಯನ್ನು ನೆಟ್ಟಿಗರು ಯಶ್ ನಟನೆಯ ರಾಮಾಚಾರಿ ಸಿನಿಮಾಕ್ಕೆ ಹೋಲಿಕೆ ಮಾಡಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರು ತನಕ ಪಾದಯಾತ್ರೆ ನಡೆಸುತ್ತಿವೆ. ಶನಿವಾರ ಸಂಜೆ ಈ ಪಾದಯಾತ್ರೆ ಮೈಸೂರು ನಗರ ತಲುಪಿದೆ.
'ಮೈಸೂರು ಚಲೋ ಪಾದಯಾತ್ರೆ'ಯ ಸಮಾರೋಪ ಸಮಾರಂಭ ಶನಿವಾರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ನೆಲದಲ್ಲಿಯೇ ನಡೆಯಲಿದೆ. ಈ ಸಮಾವೇಶಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಶುಕ್ರವಾರ ಮೈಸೂರಿನಲ್ಲಿ ಜನಾಂದೋಲನ ಸಮಾವೇಶವನ್ನು ನಡೆಸಿತ್ತು.












Click it and Unblock the Notifications