ಮೈಸೂರಿನ ನಾಯಕರ ಮನೆಗೂ ಬಂತು ಮೋದಿ ಫೋನ್ ಕಾಲ್
ಮೈಸೂರು, ಏಪ್ರಿಲ್ 27: ಸಂಘ ಪರಿವಾರದ ಹಿರಿಯರನ್ನು ಕುಶಲೋಪರಿ ವಿಚಾರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಜನಸಂಘದ ಮಾಜಿ ಉಪಾಧ್ಯಕ್ಷ, ನಗರ ಪಾಲಿಕೆ ಮಾಜಿ ಸದಸ್ಯ ವಿದ್ಯಾರಣ್ಯಪುರಂನ ನಿವಾಸಿ ಎನ್. ಆರ್. ಚಂದ್ರಶೇಖರ್ ಅವರಿಗೆ ಕರೆ ಮಾಡಿ ಭಾನುವಾರ ಆರೋಗ್ಯ ವಿಚಾರಿಸಿದ್ದಾರೆ.
ಈ ಹಿಂದೆ ಡಿ.ಎಚ್. ಶಂಕರ ಮೂರ್ತಿ ಮತ್ತು ಉಡುಪಿಯ ಭಟ್ ಅವರಿಗೆ ಕರೆ ಮಾಡಿದ್ದ ಮೋದಿ ಅವರು ಭಾನುವಾರ ಮಧ್ಯಾಹ್ನ ಚಂದ್ರಶೇಖರ್ ಅವರಿಗೆ ಕರೆ ಮಾಡಿ 3 ನಿಮಿಷಗಳ ಕಾಲ ಮಾತನಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಹಲವು ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡ ಚಂದ್ರಶೇಖರ್ ಅವರು, ಈಗಾಗಲೇ ತಮಗೆ 77 ವರ್ಷ ದಾಟಿದ್ದು, ಮುಂದೆ ಪಕ್ಷಕ್ಕಾಗಿ ಸಕ್ರಿಯವಾಗಿ ದುಡಿಯಲು ಕಷ್ಟವಾಗಲಿದೆ ಎಂದು ಮೋದಿ ಅವರಿಗೆ ಹೇಳಿದ್ದೇನೆ. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, ಇಲ್ಲ ಇಲ್ಲ, ನೀವು ಹಾಗೆ ಹೇಳಬಾರದು. ಈಗಾಗಲೇ ಬಹಳ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೀರಿ. ನಿಮ್ಮ ನಿಸ್ವಾರ್ಥ ಸೇವೆಯ ಅಗತ್ಯವಿದೆ ಎಂದರು. ಹೀಗೆ ಒಬ್ಬ ಕಾರ್ಯಕರ್ತನ ಬಗ್ಗೆ ಕಾಳಜಿ ವಹಿಸುವ ಮೋದಿ ಅವರ ಕಾರ್ಯವೈಖರಿ ಶ್ಲಾಘನೀಯವಾದದ್ದು ಎಂದು ಚಂದ್ರಶೇಖರ್ ಕೊಂಡಾಡಿದರು.












Click it and Unblock the Notifications