ಮುಚ್ಚುವ ಹಂತದಲ್ಲಿ ನಂಜನಗೂಡಿನ ಪ್ರತಿಷ್ಠಿತ ರೀಡ್ ಅಂಡ್ ಟೇಲರ್ ಸಂಸ್ಥೆ ?
ಮೈಸೂರು, ಜನವರಿ 11: ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ರೀಡ್ ಅಂಡ್ ಟೇಲರ್ ಕಾರ್ಖಾನೆ ದಿವಾಳಿಯ ಅಂಚಿನಲ್ಲಿದ್ದು, ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕೆಲಸ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಕಾರ್ಯ ಆರಂಭಿಸಿದ್ದ ರೀಡ್ ಅಂಡ್ ಟೇಲರ್ ಕಾರ್ಖಾನೆಯಲ್ಲಿ ಉಲ್ಲನ್ ಬಟ್ಟೆ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ 1,200 ಮಂದಿ ಕೆಲಸ ಮಾಡುತ್ತಿದ್ದಾರೆ.
ಕಾರ್ಖಾನೆ ಮುಚ್ಚುವ ಉದ್ದೇಶದಿಂದಲೇ ಮಾಲೀಕರು ವಿವಿಧ ಬ್ಯಾಂಕ್ ಗಳಲ್ಲಿ ಗರಿಷ್ಠ ಮಟ್ಟದ ಸಾಲ ಮಾಡಿ, ಅದನ್ನು ಕಾರ್ಖಾನೆಯ ಅಭಿವೃದ್ಧಿಗೆ ಬಳಸದೆ ದುರುಪಯೋಗ ಮಾಡಿ ಕೊಂಡಿದ್ದಾರೆ. ಕಾರ್ಖಾನೆ ಲಾಭದಾಯಕವಾಗಿದ್ದರೂ ಸಾಲ ಮತ್ತು ಬಡ್ಡಿಯನ್ನು ಮರು ಪಾವತಿ ಮಾಡಿಲ್ಲ.

ಹೀಗಾಗಿ ಕಂಪನಿಯ ಮೇಲೆ ಬ್ಯಾಂಕ್ ನವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧೀಕರಣದ ಮುಂದೆ ಮುಂಬೈನಲ್ಲಿ ದಾವೆ ಹೂಡಿದ್ದು, ನ್ಯಾಯಾಧೀಕರಣ ಕಂಪನಿಗೆ ರೆಸಲ್ಯೂಷನ್ ಪ್ರೊಫೆಷನಲ್ ಅವರನ್ನು (ಆರ್.ಪಿ) ನೇಮಕ ಮಾಡಲಾಗಿದೆ. ಆರ್.ಪಿ ಅವರು ನಂಜನಗೂಡಿನ ಕಾರ್ಖಾನೆಯಲ್ಲಿ ತಮ್ಮ ಕಾರ್ಯವನ್ನು ಪ್ರಾರಂಭಿಸಿ ಕಾರ್ಖಾನೆ ಕೊಳ್ಳಲು ಆಸಕ್ತಿ ಹೊಂದಿದ್ದಾರೆ.
ಇದರ ಮಧ್ಯೆ ನ್ಯಾಯಾಲಯದಿಂದ ನೇಮಿಸಿರುವ ನಿರ್ವಹಣಾ ಮಂಡಳಿಯವರು ಕಾರ್ಮಿಕರಿಗೆ ಮಾಸಿಕ ವೇತನವನ್ನು ಸರಿಯಾಗಿ ನೀಡದೆ ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ಕಾರ್ಮಿಕರ ವೇತನದಿಂದ ಕಡಿತ ಮಾಡಿದ್ದ ಎಲ್‍ಐಸಿ ಹಾಗೂ ಪಿಎಫ್ ಹಣವನ್ನೂ ಸಹ ಆಡಳಿತವರ್ಗ ಕಳೆದ 3 ತಿಂಗಳಿಂದ ಸಂಬಂಧಪಟ್ಟ ಸಂಸ್ಥೆಗೆ ಕಟ್ಟಿಲ್ಲ ಎಂದು ಆರೋಪಿಸಿದರು.

ಕಾರ್ಖಾನೆಯನ್ನು ಉಳಿಸಿ ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಲು ಸರ್ಕಾರದ ಮಟ್ಟದಲ್ಲಿ ತಾವು ಹಾಗೂ ಮುಖ್ಯಮಂತ್ರಿಗಳು ನ್ಯಾಯಾಧೀಕರಣ ನೇಮಿಸಿರುವ ಆರ್.ಪಿ ಮತ್ತು ಸ್ಥಳೀಯ ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘದ ಜತೆ ಮಾತುಕತೆ ನಡೆಸಿ ಕಾರ್ಖಾನೆ ನಡೆಸಲು ಸಹಾಯ ಮಾಡಬೇಕೆಂದು ಮನವಿ ಮಾಡಿದರು.












Click it and Unblock the Notifications