ಮೈಸೂರು ವಿವಿ 103ನೇ ಘಟಿಕೋತ್ಸವ: ಮಾಜಿ ವೇಗಿ ಜಾವಗಲ್ ಶ್ರೀನಾಥ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
ಮೈಸೂರು, ಅಕ್ಟೋಬರ್ 17: ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್, ವೈದ್ಯಕೀಯ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಎಸ್.ಶಂಕರ್, ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಘೋಷಿಸಿದೆ.
ಕ್ರಾರ್ಡ್ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ''ಅಕ್ಟೋಬರ್ 18ರಂದು ಬೆಳಗ್ಗೆ 10.30ಕ್ಕೆ ಕ್ರಾರ್ಡ್ ಭವನದಲ್ಲಿ ನಡೆಯುವ 103ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೂವರಿಗೂ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ" ಎಂದರು.

"ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪದ್ಮವಿಭೂಷಣ ಡಾ.ವಾಸುದೇವ್ ಕೆ. ಆತ್ರೆ ಘಟಿಕೋತ್ಸವ ಭಾಷಣ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪಾಲ್ಗೊಳ್ಳಲಿದ್ದಾರೆ" ಎಂದು ಮಾಹಿತಿ ನೀಡಿದರು.
ಗೌರವ ಡಾಕ್ಟರೇಟ್‌ಗೆ ಆಯ್ಕೆಯಾದವರ ವಿವರ
ಜಾವಗಲ್ ಶ್ರೀನಾಥ್
ಮೈಸೂರಿನಲ್ಲೇ ಶಾಲಾ-ಕಾಲೇಜು ವಿದ್ಯಾಭ್ಯಾಸ ನಡೆಸಿರುವ ಜಾವಗಲ್ ಶ್ರೀನಾಥ್ ಅವರು ಕಳೆದ ಬಾರಿ ಮೈಸೂರು ನಗರದ ಸ್ವಚ್ಛತೆ ಮತ್ತು ಮೈಸೂರು ಜಿಲ್ಲೆಯ ಚುನಾವಣಾ ರಾಯಭಾರಿಯಾಗಿದ್ದರು. ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್‌ನಲ್ಲಿ ಹುಟ್ಟಿದ ಶ್ರೀನಾಥ್ ಅವರು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲೇ ಹೈಸ್ಕೂಲ್ ವ್ಯಾಸಂಗ ನಡೆಸಿದ್ದಾರೆ.
ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 300 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆ ಇದೆ. ದಶಕಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿದ್ದ ಇವರು ಒಟ್ಟು ನಾಲ್ಕು (1992ರಿಂದ 2003) ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2003ರಲ್ಲಿ ವಿದಾಯ ಹೇಳಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸಕ್ತ ಐಸಿಸಿ ಮ್ಯಾಚ್ ರೆಫ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಡಾ.ಪಿ.ಎಸ್.ಶಂಕರ್
50 ವರ್ಷಗಳಿಂದ ವೈದ್ಯ ಶಿಕ್ಷಕರಾಗಿರುವ ಡಾ.ಪಿ.ಎಸ್.ಶಂಕರ್ ಅವರಿಗೆ ಈಗಾಗಲೇ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಆರು ಬಾರಿ ಗೌರವ ಡಾಕ್ಟರೇಟ್ ಲಭಿಸಿದೆ. ಎರಡು ಬಾರಿ ಪ್ರತಿಷ್ಠಿತ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವೈದ್ಯಶಾಸಕ್ಕೆ ಸಂಬಂಧಪಟ್ಟ 140ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಇವರ ಮುಡಿಗೇರಿದೆ. ಇಂಗ್ಲಿಷ್‌ನಲ್ಲಿ ವೈದ್ಯ ಪದಕೋಶ ಮತ್ತು ಕನ್ನಡದಲ್ಲಿ ವೈದ್ಯ ವಿಶ್ವಕೋಶವನ್ನು ರಚಿಸಿದ ಹೆಗ್ಗಳಿಕೆ ಇವರದು.
ಹಿರಿಯ ಪತ್ರಿಕೋದ್ಯಮಿ ಕೆ.ಬಿ.ಗಣಪತಿ
ಮೈಸೂರಿನ ಪತ್ರಿಕೋದ್ಯಮ ಕ್ಷೇತ್ರದ ಕೆ.ಬಿ.ಗಣಪತಿ ಅವರು 5 ದಶಕಗಳಿಂದ ಪತ್ರಿಕೋದ್ಯಮಿ ಹಾಗೂ ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದಾರೆ. ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ಅವರು ನಂತರ ಮುಂಬಯಿಗೆ ತೆರಳಿ ಅಲ್ಲಿಯ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮ ದಲ್ಲಿ ಡಿಪ್ಲೊಮಾ ಪದವಿ ಪಡೆದರು. 10ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಭಾರತೀಯ ವಿದ್ಯಾಭವನದ ಮೈಸೂರು ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.












Click it and Unblock the Notifications