ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು: ಸಂಸದ ಪ್ರತಾಪ್ ಸಿಂಹ
ಮೈಸೂರು, ಜೂನ್ 28: ಮೈಸೂರು ರೈಲ್ವೆ ನಿಲ್ದಾಣಕ್ಕೆ ಮೈಸೂರು ಅರಸರಾದ ಚಾಮರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಅವರ ಹೆಸರು ಇಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನ ಡಿಆರ್‌ಎಂ ಕಚೇರಿಯಲ್ಲಿ ಬುಧವಾರ ರೈಲ್ವೆ ಕಾಮಗಾರಿಗಳ ಪ್ರಗತಿಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, 1870ರಲ್ಲಿ ಅಂದಿನ ಮೈಸೂರು ಅರಸರಾಗಿದ್ದ ಚಾಮರಾಜ ಒಡೆಯರ್ ಅವರು ಮೈಸೂರಿಗೆ ರೈಲು ಸೇವೆಯನ್ನು ಆರಂಭಿಸಿದರು. ಹೀಗಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರಿಡಲಾಗುತ್ತದೆ. ಅಲ್ಲದೇ ಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನೂ ಪ್ರತಿಸ್ಠಾಪಿಸಲಾಗುವುದು ಎಂದರು.

2022ರ ವಿಶ್ವ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬಂದಿದ್ದರು. ಈ ವೇಳೆ ಮೈಸೂರು ರೈಲ್ವೆ ನಿಲ್ದಾಣದ ವಿಸ್ತರಣೆಗೆ ಭೂಮಿ ಪೂಜೆ ನೆರವೇರಿಸಿದ್ದರು. 344 ಕೋಟಿ ರೂಪಾಯಿ ಮಂಜೂರಾಗಿತ್ತು. ಟೆಂಡರ್ ಕೂಡ ಕರೆಯಲಾಗಿದೆ ಎಂದರು.
ಮುಂದಿನ ನವೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ. 3 ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ರೈಲ್ವೆ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ದಪಡಿಸುವ ಕಾರ್ಯಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ ಎಂದು ತಿಳಿಸಿದರು.
ಮೈಸೂರಿನ ಎರಡನೇ ರೈಲ್ವೆ ನಿಲ್ದಾಣವಾಗಿ ಆಗಸ್ಟ್ 15ಕ್ಕೆ ಅಶೋಕಪುರಂ ರೈಲು ನಿಲ್ದಾಣ ಸೇವೆಗೆ ಸಮರ್ಪಿತವಾಗಲಿದೆ. ಎಲ್ಲಾ ಪ್ರಮುಖ ರೈಲುಗಳು ಅಶೋಕಪುರಂ ರೈಲು ನಿಲ್ದಾಣದವರೆಗೂ ಹೋಗಲಿವೆ. ಮೈಸೂರು- ಚಾಮರಾಜನಗರ ನಡುವಿನ ವಿದ್ಯುತೀಕರಣ ಕಾಮಗಾರಿ ಕೈಗೊಳ್ಳುವಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಮೈಸೂರು ವಿಮಾನ ನಿಲ್ದಾಣದ ಬಳಿ 1.50 ಕಿ.ಮೀ. ತಿರುವು ಪಡೆದು ಪ್ರತ್ಯೇಕ ಮಾರ್ಗ ನಿರ್ಮಿಸಲು ಚಿಂತಿಸಲಾಗುತ್ತಿದೆ ಎಂದರು.

346.64 ಕೋಟಿ ರೂಪಾಯಿ ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆಗಸ್ಟ್ 30ಕ್ಕೆ ಟೆಕ್ನಿಕಲ್ ಬಿಡ್ ಆಗುತ್ತದೆ. ನವೆಂಬರ್ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುತ್ತದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಕೆಲವು ರೈಲುಗಳು ಕೆಂಗೇರಿ ತಲುಪಲು ತಡವಾಗುತ್ತಿದೆ. 2 ಗಂಟೆಯೊಳಗೆ ಕೆಂಗೇರಿ ತಲುಪುವಂತೆ ಅಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications