ಮೈಸೂರು ರೈಲ್ವೆ ಅಭಿವೃದ್ಧಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಮನವಿ
ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಸರ್ಕಾರದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಇದೇ ವೇಳೆ ಮೈಸೂರಿನ ಅಭಿವೃದ್ಧಿ ಯೋಜನೆಗಳಿಗಾಗಿ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಮೈಸೂರಿನಲ್ಲಿರುವ ರೈಲ್ವೆ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.
ಐತಿಹಾಸಿಕ ಮೈಸೂರು ರೈಲ್ವೆ ನಿಲ್ದಾಣವನ್ನ ಆಧುನೀಕರಣಗೊಳಿಸುವ ಕುರಿತು ಹಾಗೂ ಮೈಸೂರಿನಲ್ಲಿ ವಿಮಾನ ನಿಲ್ದಾಣದ ವಿಸ್ತರಣೆಗೆ ಅನುಕೂಲವಾಗುವಂತೆ ರೈಲ್ವೆ ಹಳಿಗಳ ಸ್ಥಳಾಂತರ ವಿಷಯದ ಕುರಿತು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಸದರಿ ಯೋಜನೆಗಳ ತ್ವರಿತ ಕ್ರಮಕ್ಕೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿರುವುದಾಗಿ ಯದುವೀರ್ ಮಾಹಿತಿ ನೀಡಿದ್ದಾರೆ.

ನಮ್ಮ ಎಲ್ಲ ಬೇಡಿಕೆಗಳಿಗೆ ಹಾಗೂ ಮೈಸೂರಿನ ಅಭಿವೃದ್ದಿ ಯೋಜನೆಗಳಿಗೆ ಸಹಕರಿಸಿ ಬೆಂಬಲಿಸಿ ಅವುಗಳನ್ನು ಶೀಘ್ರ ಅನುಷ್ಠಾನಕ್ಕೆ ತರಲು ನೆರವಾಗುತ್ತಿರುವ ಕೇಂದ್ರ ಸಚಿವರಿಗೆ ಈ ಮೂಲಕ ಮೈಸೂರು-ಕೊಡಗು ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.
ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆಗೆ ಮನವಿ
ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೂಡ ದೆಹಲಿಗೆ ತೆರಳಿ, ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರಿಗೆ ಮನವಿ ಪತ್ರ ನೀಡಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ರಾಜ್ಯ ಸರ್ಕಾರವು ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯ ವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು ಎಂದು ತಿಳಿಸಿದ್ದಾರೆ.
ಅಗತ್ಯವಿರುವ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಉಚಿತವಾಗಿ ವರ್ಗಾಯಿಸಲಾಗಿದೆ. ಒಪ್ಪಂದದ ಷರತ್ತು ಪ್ರಕಾರ ನಿಯೋಜಿತರು ಮೈಸೂರು ವಿಮಾನ ನಿಲ್ದಾಣದ ಹೆಚ್ಚಿನ ಅಭಿವೃದ್ಧಿಯ ಬಂಡವಾಳ ವೆಚ್ಚ, ಮಾರ್ಪಾಡುಗಳು, ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಎಲ್ಲ ವೆಚ್ಚಗಳನ್ನು ಭರಿಸಬೇಕು. ಅದರಂತೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಿರುವ ಬಂಡವಾಳ ಹಾಗೂ ಇನ್ನಿತರೆ ವೆಚ್ಚಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ಭರಿಸಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹಿನ್ನೆಲೆ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಿರುವ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 319.14 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಕಾವೇರಿ ನೀರಾವರಿ ನಿಗಮ ನಿಯಮಿತವು ವಿಮಾನ ನಿಲ್ದಾಣ ವಿಸ್ತರಣೆ ಪ್ರದೇಶದಲ್ಲಿ ಎರಡು ಕಂದಕಗಳ ಹಾಗೂ 7 ಕಾಲುವೆಗಳ ಸ್ಥಳಾಂತರಕ್ಕೆ ವರದಿಯನ್ನು ಸಲ್ಲಿಸಿದೆ. ಇದಕ್ಕೆ 70 ಕೋಟಿಗಳ ವೆಚ್ಚವಾಗಲಿದೆ. ಹಾಗೆಯೇ ಕೆಪಿಟಿಸಿಎಲ್ ಕೂಡ ಹೈ-ಟೆನ್ಷನ್ ಲೈನ್ ಹಾಗೂ ಚೆಸ್ಕಾಂ ಲೋ ಟೆನ್ಶನ್ ವೈರ್‌ಗಳ ಮಾರ್ಗ ಬದಲಾವಣೆಗೆ 31.82 ಕೋಟಿಗಳ ಅಂದಾಜು ವೆಚ್ಚವಾಗಲಿದೆ. ಈ ಕಾಮಗಾರಿಗೆ 101.82 ಕೋಟಿಗಳ ಅನುದಾನದ ಅಗತ್ಯವಿದೆ ಎಂದು ಕೇಂದ್ರಕ್ಕೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 ಎಕರೆ ಭೂ ಸ್ವಾಧೀನಕ್ಕೆ ತಗಲುವ 319.14 ಕೋಟಿ ವೆಚ್ಚವನ್ನು ಭರಿಸಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ವಿಸ್ತರಣೆಯ ಅಂದಾಜು ವೆಚ್ಚ 101.84 ಕೋಟಿಗಳ ಯುಟಿಲಿಟಿ ಸ್ಥಳಾಂತರದ ಯೋಜನೆಯನ್ನು ರೂಪಿಸಿ ಶೀಘ್ರವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಕೋರಿದ್ದಾರೆ.












Click it and Unblock the Notifications