Breaking: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ತಮಿಳುನಾಡಿನಲ್ಲಿ ಐವರ ಬಂಧನ

ಮೈಸೂರು, ಆಗಸ್ಟ್‌ 28: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಸಮೀಪ ನಡೆದಿದ್ದ, ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನಲ್ಲಿ ಈ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಘಟನೆ ನಡೆದ 85 ಗಂಟೆಗಳ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರ ನಡೆಸಿದವರು ಕೂಲಿ ಕಾರ್ಮಿಕರು ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾಗಿದ್ದು, ಒಬ್ಬ ಚಾಮರಾಜನಗರದವನು ಎನ್ನಲಾಗಿದೆ. ಯುವಕ ಯುವತಿಯನ್ನು ಮೂರು ದಿನಗಳಿಂದ ಗಮನಿಸುತ್ತಿದ್ದ ಇವರು ನಾಲ್ಕನೇ ದಿನ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳದಲ್ಲಿ ದೊರೆತಿದ್ದ ಬಸ್‌ ಟಿಕೆಟ್, ಬಿಯರ್ ಬಾಟಲಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 Mysuru gang rape case: Police Arrest 5 accused in 85 Hours

ಆಗಸ್ಟ್‌ 24ರಂದು ಈ ಘಟನೆ ನಡೆದಿತ್ತು. ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬಂದು ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ಅಂದು ಸಂಜೆ 7.30ರ ವೇಳೆಗೆ ತನ್ನ ಗೆಳೆಯನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ತೆರಳಿದ್ದಾಗ ಹುಡುಗನ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಯ ಮೇಲೆ ಪಾನಮತ್ತರಾಗಿದ್ದ ಐದಾರು ಮಂದಿ ಯುವಕರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ್ದರು ಎನ್ನಲಾಗಿತ್ತು. ಆನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು.ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಒಂದು ಘಟನೆ ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಚ್ಚಿಬೀಳಿಸಿತ್ತು. ಶೀಘ್ರವೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅತ್ಯಾಚಾರ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಘಟನಾ ಸ್ಥಳದಲ್ಲಿ ಮೊಬೈಲ್ ಲೊಕೇಷನ್ ಪರಿಶೀಲನೆ ನಡೆಸಿದ್ದರು. ಪೊಲೀಸರಿಗೆ ಸ್ಥಳದಲ್ಲಿ 34 ಸಾಕ್ಷ್ಯಗಳು ದೊರೆತಿದ್ದವು,. ಸ್ಥಳದಲ್ಲಿ ಸಿಕ್ಕಿದ್ದ ಮದ್ಯದ ಬಾಟಲ್ ಸಂಗ್ರಹಿಸಿ ಅದರ ಬಾರ್‌ ಕೋಡ್‌ಗಳ ಪರಿಶೀಲನೆ ನಡೆಸಿ, ಮದ್ಯ ಖರೀದಿ ಮಾಡಿರುವ ಮದ್ಯದಂಗಡಿಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದರು. ಪ್ರಕರಣದ ತನಿಖೆಗೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಐದು ತಂಡಗಳನ್ನುರಚಿಸಲಾಗಿತ್ತು.

"ದುಷ್ಕರ್ಮಿಗಳು ನಮ್ಮ ಜೊತೆ ಗಲಾಟೆ ಮಾಡಿ, ನನ್ನ ತಲೆಗೆ ಕಲ್ಲಿನಿಂದ ಹೊಡೆದರು. ನಾನು ಪ್ರಜ್ಞೆ ತಪ್ಪಿ ಬಿದ್ದಾಗ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ," ಎಂದು ಅತ್ಯಾಚಾರ ಸಂತ್ರಸ್ತೆಯ ಗೆಳೆಯ ಶುಕ್ರವಾರ ಹೇಳಿಕೆ ನೀಡಿದ್ದನು. ಯುವತಿ ಹಾಗೂ ಆಕೆಯ ತಂದೆ ತಾಯಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ರಾಜ್ಯಕ್ಕೆ ಮರಳಿದ್ದಾರೆ.

ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ತಮಿಳುನಾಡಿನಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+