ಮೈಸೂರಿನಲ್ಲೂ ಪ್ರವಾಹ ಭೀತಿ: ದಕ್ಷಿಣ ಕಾಶಿ ನಂಜನಗೂಡಿಗೆ ಜಲದಿಗ್ಭಂಧನ
ಮೈಸೂರು, ಆಗಸ್ಟ್ 01: ಜಿಲ್ಲೆಯ ಗಡಿಭಾಗವಾದ ಕೇರಳ ಮತ್ತು ಕೊಡಗಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಪರಿಣಾಮ ಕಪಿಲೆ, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುತ್ತಿರುವುದರಿಂದ ಕೊಡಗು ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾವೇರಿ ನದಿ ಹರಿಯುವ ಕೊಪ್ಪ, ಲಕ್ಷ್ಮಣತೀರ್ಥ ಹರಿಯುವ ಹುಣಸೂರು ತಾಲೂಕಿನ ಕೆಲವು ಗ್ರಾಮಗಳು, ಕಪಿಲೆ ನದಿ ಪಾತ್ರದ ಹೆಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರದ ಹಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಅದರಲ್ಲೂ ಕಬಿನಿಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡುತ್ತಿರುವ ಕಾರಣ ಕಪಿಲೆ ರೌದ್ರಾವತಾರ ತಾಳಿದ್ದು ಪರಿಣಾಮ ದಕ್ಷಿಣಕಾಶಿ ನಂಜನಗೂಡಿಗೆ ಜಲದಿಗ್ಭಂಧನವಾಗಿದೆ.
ಪುಷ್ಯ ಮಳೆ ಆರ್ಭಟಿಸಿದ ಪರಿಣಾಮ ಕಾವೇರಿ, ಕಪಿಲಾ, ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನೆರೆ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ರವಾನಿಸುವ ಕೆಲಸವನ್ನು ಈಗಾಗಲೇ ಜಿಲ್ಲಾಡಳಿತ ಮಾಡಿದೆಯಲ್ಲದೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ನಡುವೆ ನಿರಂತರ ಮಳೆಯಿಂದ ಕೆಆರ್ಎಸ್, ಕಬಿನಿ ಮತ್ತು ನುಗು ಜಲಾಶಯ ತುಂಬಿರುವ ಪರಿಣಾಮ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟರುವುದರಿಂದ ಕಾವೇರಿ, ಕಪಿಲಾ ನದಿಗಳು ತುಂಬಿ ಹರಿದು ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿವೆ.

ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ 19 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರನ್ನು ನದಿಗೆ ಹರಿಸಿದ್ದು, ಎಚ್.ಡಿ.ಕೋಟೆ ತಾಲೂಕಿನ ಬಿದರಹಳ್ಳಿ, ಕಡೆಗದ್ದೆ, ಸಾಗರೆ, ಅಗತ್ತೂರು, ತುಂಬುಸೋಗೆ, ಇಟ್ನಾ, ಹೆಬ್ಬಲಗುಪ್ಪೆ, ನೇರಳೆ, ಮಾಗೂಡಿಲು ಗ್ರಾಮಗಳಲ್ಲಿ ನೆರೆ ಸಂಭವಿಸಿದೆ. ಮತ್ತೊಂದೆಡೆ ಕೆಆರ್ಎಸ್ ಜಲಾಶಯದಿಂದ 1.33 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ತಿ.ನರಸೀಪುರ ತಿರಮಕೂಡಲುವಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಹಲವು ಕಡೆ ಸೇತುವೆಗಳು ಜಲಾವೃತ
ಕಾವೇರಿ ಮತ್ತು ಕಪಿಲೆ ಸಂಗಮ ಸ್ಥಳವಾದ ತಿರುಮಕೂಡಲು ಪ್ರದೇಶದಲ್ಲಿ ಹಲವು ಪ್ರದೇಶ ಜಲಾವೃತವಾಗಿದೆ. ಜತೆಗೆ ಮಾಲಂಗಿ ಗ್ರಾಮವೂ ನೆರೆ ಹೊಡೆತಕ್ಕೆ ಸಿಲುಕಿದ್ದು, ಜನರನ್ನು ಸ್ಥಳಾಂತರಿಸಲಾಗಿದೆ. ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 70 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರನ್ನು ಹರಿಬಿಟ್ಟಿರುವುದರಿಂದ ಎಚ್.ಡಿ. ಕೋಟೆಯ ಬಿದರಹಳ್ಳಿ ಬಳಿಯ ಸೇತುವೆ, ನಂಜನಗೂಡು ತಾಲೂಕಿನ ಕಡಜಟ್ಟಿ ಸೇತುವೆ, ಸುತ್ತೂರು, ಹರದನಹಳ್ಳಿ, ಮುಳ್ಳೂರು, ತೊರೆಮಾವು, ಮಲ್ಲನ ಮೂಲೆ ಮಠದ ಬಳಿಯ ಸೇತುವೆಗಳು ಮುಳುಗಡೆಯಾಗಿವೆ. ಜತೆಗೆ ತಿ. ನರಸೀಪುರ-ತಲಕಾಡು ಮಾರ್ಗ ಕಲ್ಪಿಸುವ ಹೆಮ್ಮಿಗೆ ಬಳಿಯ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸಂಚಾರ ಬಂದ್ ಮಾಡಲಾಗಿದೆ.
ಸುತ್ತೂರಿನ ಸೇತುವೆ ಮೇಲೆ ನೀರು ಬಂದಿದ್ದು, ನದಿ ಅಂಚಿನ ಜಮೀನುಗಳಿಗೆ ನೀರು ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದರೆ ಬೊಕ್ಕಳ್ಳಿ, ಕುಳ್ಳಪ್ಪನ ಹುಂಡಿ, ಹೆಜ್ಜಿಗೆ ತುಂಬು ನೇರಳೆ, ನಂದಗುಡಿ ಗ್ರಾಮದ ಹಲವಾರು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದ್ದು ಜತೆಗೆ ಜಾನುವಾರುಗಳಿಗೂ ಸಮಸ್ಯೆ ಎದುರಾಗಿದೆ.

ಕಪಿಲೆ ಮತ್ತು ಕಾವೇರಿ ನದಿ ಸೃಷ್ಟಿಸಿರುವ ನೆರೆಯಿಂದ ಜಿಲ್ಲೆಯ 8 ಗ್ರಾಮಗಳು ಸಮಸ್ಯೆಗೀಡಾಗಿವೆ. ನಂಜನಗೂಡು ತಾಲೂಕಿನಲ್ಲಿ 105 ಕುಟುಂಬದ 254 ಸದಸ್ಯರು, ತಿ.ನರಸೀಪುರದ 29 ಕುಟುಂಬಗಳಲ್ಲಿನ 65 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸಧ್ಯ 306 ಮಂದಿ ಕಾಳಜಿ ಕೇಂದ್ರದಲ್ಲಿದ್ದು, ಉಳಿದ 13 ಮಂದಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ನಂಜನಗೂಡಿನ ತಗ್ಗು ಪ್ರದೇಶದಲ್ಲಿನ 6 ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿದೆ.
ಮತ್ತೆ ನಂಜುಂಡೇಶ್ವರನಿಗೆ ಜಲದಿಗ್ಬಂಧನ
ಕೇರಳದ ವೈನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕಪಿಲೆ ಭೋರ್ಗರೆಯುತ್ತಿದ್ದು, ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಲ್ಲನ ಮೂಲೆ ಮಠದ ಬಳಿ ನೀರು ಬಂದಿದೆ. ಜತೆಗೆ ನಂಜನಗೂಡು ಪಟ್ಟಣದ ಹಳ್ಳದಕೇರಿ, ತೋಪಿನ ಬೀದಿ, ಸರಸ್ವತಿ ಕಾಲನಿ ಹಾಗೂ ನಂಜುಂಡೇಶ್ವರ ದೇವಾಲಯದ ಸುತ್ತಲಿನ ಪ್ರದೇಶ ಸೇರಿದಂತೆ ದೇವಸ್ಥಾನದ ಸ್ನಾನಘಟ್ಟ, ಹದಿನಾರು ಕಾಲು ಮಂಟಪ ನೀರಿನಿಂದ ಆವೃತವಾಗಿದೆ. ಹಾಗೆಯೇ ನಂಜನಗೂಡು ತಾಲೂಕಿನ ಹೆಜ್ಜಿಗೆ, ಬೊಕ್ಕಳ್ಳಿ, ಹೊರಳವಾಡಿ ಗ್ರಾಮಗಳು ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿದ್ದು, ಮತ್ತೆ ನಂಜುಂಡೇಶ್ವರನಿಗೆ ಜಲದಿಗ್ಬಂಧನವಾಗಿದೆ.

ಒಟ್ಟಾರೆ ಮೈಸೂರು ಸುತ್ತಮುತ್ತಲಲ್ಲಿ ಪುಷ್ಯ ಮಳೆಯ ಆರ್ಭಟ ಮೈಸೂರು ಜಿಲ್ಲೆಯ ಮೇಲೆಯೂ ಪರಿಣಾಮ ಬೀರಿದ್ದು ನದಿಪಾತ್ರದ ಗ್ರಾಮಗಳು, ಪಟ್ಟಣಗಳು, ಪ್ರವಾಹವನ್ನು ಎದುರಿಸುವಂತಾಗಿದೆ. ಇದು ಹೊಸತೇನಲ್ಲ. ಮಳೆ ಹೆಚ್ಚಾಗಿ ನದಿಗಳು ಉಕ್ಕಿ ಹರಿದರೆ, ಜಲಾಶಯದಿಂದ ನೀರನ್ನು ಹರಿಸಿದರೆ ನದಿಪಾತ್ರದ ಜನರಿಗೆ ಸಮಸ್ಯೆಗಳು ಎದುರಾಗುವುದು ಸಹಜವಾಗಿದೆ. ಆದರೆ ಈ ಬಾರಿ ಧಾರಾಕಾರವಾಗಿ ಮಳೆ ಆಗಿಂದಾಗ್ಗೆ ಸುರಿಯುತ್ತಿರುವುದರಿಂದ ಮೇಲಿಂದ ಮೇಲೆ ಪ್ರವಾಹ ಸೃಷ್ಟಿಯಾಗಿ,. ಜನ ಸಂಕಷ್ಟ ಎದುರಿಸುವಂತಾಗಿದೆ.












Click it and Unblock the Notifications