ನಿಮ್ಮ ಧೋರಣೆ ನನಗೆ ದಬ್ಬಾಳಿಕೆ ಎನಿಸಿದೆ: ಸರಕಾರಕ್ಕೆ ದೇವನೂರು ಚಾಟಿ
ಮೈಸೂರು, ಜೂ. 3: ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು ಎನ್ನುವ ಮೂಲಕ ಶಿಕ್ಷಣ ಸಚಿವರಿಗೆ ಸಾಹಿತಿ ದೇವನೂರು ಮಹದೇವ ಮತ್ತೆ ಚಾಟಿ ಬೀಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಸಾಹಿತಿ ದೇವನೂರು ಮಹದೇವ ಅವರು ಶಿಕ್ಷಣ ಸಚಿವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
''ಈ ಹಿಂದೆ, ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ಮೇ 26ರಂದು ನಿಮಗೆ ಪತ್ರ ಬರೆದಿದ್ದೆ. ಆ ಪತ್ರದಲ್ಲಿ ನನಗೆ ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ''ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ,'' ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದನ್ನು ಪಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ರವರಿಗೂ ಬರೆದು ಕೊರಿಯರ್ ಮಾಡಿದ್ದ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ.
ನನ್ನ ಪಠ್ಯ ಮುಂದುವರಿಸದಂತೆ ಖಡಕ್ಕಾಗಿ ಪತ್ರ
''ಮತ್ತೂ ಹೇಳಬೇಕೆಂದರೆ, ಚತುದ್ವರ್ಣ ವಿರೋಧಿ ಬಸವಣ್ಣನವರ ಪಾಠವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕತ್ತು ಹಿಚುಕಿದೆ. ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಮಸ್ತಕ ಪರಿಷ್ಕರಣೆಗೆ ಆಧ್ಯಕ್ಷರನ್ನಾಗಿ ಮಾಡಲಾಗಿದೆ. ಒಂದು ಒಕ್ಕೂಟ ಸರಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯ ಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು, ಭಿನ್ನಾಭಿಪ್ರಾಯಗಳನ್ನು ಟೂಲ್ ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು. ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ,'' ಎಂದು ತಿಳಿಸಿದ್ದಾರೆ.

ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು ಎಂದು ಪತ್ರದ ಮೂಲಕ ದೇವನೂರು ಮಹಾದೇವ ಮನವಿ ಮಾಡಿದ್ದಾರೆ.
Recommended Video
(ಒನ್ಇಂಡಿಯಾ ಸುದ್ದಿ)












Click it and Unblock the Notifications