ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಹೊಸ ಮೆರಗು!
ಮೈಸೂರು, ಫೆಬ್ರವರಿ 22: ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಇನ್ನಷ್ಟು ಮೆರಗು ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ದಸರಾದ ವೇಳೆ ವರ್ಷದ ಮೂರ್ನಾಲ್ಕು ತಿಂಗಳ ಕಾಲ ಜನ ಜಂಗುಳಿಯಿಂದ ಕೂಡಿ ಎಲ್ಲರನ್ನು ಆಕರ್ಷಿಸುವ ಮತ್ತು ಮೈಸೂರು ನಗರ ಸೇರಿದಂತೆ ದೂರದ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುವ ದಸರಾ ವಸ್ತು ಪ್ರದರ್ಶನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ಸದ್ಯ ವಸ್ತುಪ್ರದರ್ಶನ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾಹಿತಿ ನೀಡಿದ್ದಾರೆ. ಅವರು ಹೇಳುವಂತೆ ವಸ್ತುಪ್ರದರ್ಶನದ ಅಭಿವೃದ್ಧಿಗೆ 47 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಮೊದಲ ಹಂತದಲ್ಲಿ 20 ಕೋಟಿ ಅನುದಾನವನ್ನು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ವಸ್ತುಪ್ರದರ್ಶನ ಅಭಿವೃದ್ಧಿಗೆ ಮಾತ್ರವಲ್ಲದೆ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಇನ್ನು ವಸ್ತುಪ್ರದರ್ಶನ ಅಭಿವೃದ್ಧಿ ಹೇಗಿರಲಿದೆ ಎಂದು ನೋಡಿದ್ದೇ ಆದರೆ ಹಳೇಬೀಡು ಶೈಲಿಯಲ್ಲಿ ನವೀಕರಣ ಮಾಡಲಾಗುತ್ತಿದೆ. ಅಲ್ಲದೆ ಪ್ರಾಧಿಕಾರದ ಆವರಣದಲ್ಲಿರುವ ಎ ಬ್ಲಾಕ್ನಲ್ಲಿ ಒಟ್ಟು 154 ವಾಣಿಜ್ಯ ಮಳಿಗೆಗಳಿವೆ. ಇವು 20 ವರ್ಷಗಳ ಹಳೆಯ ಮಾದರಿಯಲ್ಲಿದ್ದು, ದಸರಾ ಸಮಯದಲ್ಲಿ 3 ತಿಂಗಳು ಮಾತ್ರ ಉಪಯೋಗಿಸಲಾಗುತ್ತಿದೆ. ಈ ಪ್ರದೇಶವನ್ನು ಹಳೇಬೀಡು ಶೈಲಿಯಲ್ಲಿ ಎಫ್ ಆರ್ ಪಿ ಬಳಲಿ ನವೀಕರಿಸಲಾಗುವುದು.
ಸಂಗೀತ ಮತ್ತು ಬೆಳಕಿನ ಕಾರಂಜಿ
ಇನ್ನು ಅಂತರಾಜ್ಯ ಹಾಗೂ ರಾಜ್ಯದ ಎಲ್ಲಾ ಕಲೆ ಮತ್ತು ಸಂಸ್ಕೃತಿಗಳಿಗೆ ಮೊದಲ ಆದ್ಯತೆ ನೀಡಿ ಅವಕಾಶ ಮಾಡಿಕೊಡಲಾಗುವುದು. ಇದರಿಂದ ದಸರಾ ಹೊರತುಪಡಿಸಿ, ಉಳಿದ 8 ತಿಂಗಳು ಪ್ರತಿ ತಿಂಗಳು 10 ರಿಂದ 15ದಿನಗಳ ವಸ್ತುಪ್ರದರ್ಶನ ಆಯೋಜಿಸಿದಲ್ಲಿ ಪ್ರಾಧಿಕಾರಕ್ಕೆ ವಾರ್ಷಿಕ 1 ಕೋಟಿ ಆದಾಯ ಬರುತ್ತದೆ. ಇದಕ್ಕಾಗಿ 10 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಸ್ತುಪ್ರದರ್ಶನಕ್ಕೆ ಪ್ರಾಧಿಕಾರದ ಸಂಗೀತ ಮತ್ತು ಬೆಳಕಿನ ಕಾರಂಜಿ ಪ್ರಮುಖ ಆಕರ್ಷಣೆಯಾಗಿದ್ದು, ಇವು 20 ವರ್ಷಗಳ ಹಳೆಯದಾಗಿದ್ದು, ಕಾರ್ಯನಿರ್ವಹಿಸಲು ಯೋಗ್ಯವಾದ ಸ್ಥಿತಿಯಲ್ಲಿಲ್ಲ. ಪ್ರತಿ ವರ್ಷ ದಸರಾ ವಸ್ತುಪ್ರದರ್ಶನ ನಡೆಯುವ ಸಮಯದಲ್ಲಿ 35 ಲಕ್ಷ ರೂ ರಿಪೇರಿ ಕಾಮಗಾರಿಗೆ ವೆಚ್ಚವಾಗುತ್ತಿದೆ. ಹೀಗಾಗಿ ಈ ಕಾರಂಜಿಗಳನ್ನು ವರ್ಷಪೂರ್ತಿ ಚಾಲ್ತಿಗೊಳಿಸಿ ಸಾರ್ವಜನಿಕರು, ಪ್ರವಾಸಿಗರನ್ನು ಆಕರ್ಷಿಸಲು 10 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿಸಲಾಗುತ್ತಿದೆ.

ಸಂಗೀತ ಕಾರಂಜಿ ವೀಕ್ಷಿಸಲು ಅವಕಾಶ
ಪ್ರತಿ ದಿನ ಸಂಜೆ ಪ್ರವಾಸಿಗರಿಗೆ ಸಂಗೀತ ಕಾರಂಜಿ ವೀಕ್ಷಿಸಲು ಅವಕಾಶ ನೀಡಲಾಗುವುದು. ಇದರಿಂದ ಪ್ರಾಧಿಕಾರಕ್ಕೆ ವಾರ್ಷಿಕವಾಗಿ ಅಂದಾಜು 1.5 ಕೋಟಿ ಆದಾಯ ಬರುತ್ತದೆ. ಈ ಎರಡೂ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಮುಗಿಯಲಿದ್ದು, ಏಪ್ರಿಲ್ ನಲ್ಲಿ ಕಾಮಗಾರಿ ಆರಂಭಿಸಿ ದಸರಾ ವೇಳೆಗೆ ಪೂರ್ಣಗೊಳಿಸಲಾಗುವುದು. ಅಲ್ಲದೆ ಜುರಾಸಿಕ್ ಪಾರ್ಕ್ ನಿರ್ಮಿಸುವ ಯೋಜನೆಯೂ ಇದೆ ಎಂದು ಹೇಳಿದ್ದಾರೆ.
ಮಾಜಿ ಸಂಸದ ಪ್ರತಾಪಸಿಂಹ ಸ್ವದೇಶಿ ದರ್ಶನ ಯೋಜನೆಯಲ್ಲಿ ವಸ್ತುಪ್ರದರ್ಶನಕ್ಕೆ ಅನುದಾನ ಬಂದಿದೆ ಎಂದು ತಪ್ಪು ಮಾಹಿತಿ ನೀಡಿದ್ದರು. ಆದರೆ, ಇಲ್ಲಿಯವರೆಗೆ ನಯಾ ಪೈಸೆ ಅನುದಾನ ಬಂದಿಲ್ಲ. ಈ ಸಂಬಂಧ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದ ಅವರು, ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ವಸ್ತುಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications