ಮೈಸೂರು ದಸರಾ ಮೆರವಣಿಗೆಗೆ 'ಕ್ಯಾಪ್ಟನ್' ಅಭಿಮನ್ಯು ಆಯ್ಕೆ.. ಕೊನೆಗೂ ಈಡೇರಿದ ನಾಡಿನ ಜನರ ಮಹಾದಾಸೆ
Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ತುಂಬಾ ವರ್ಷಗಳ ಕಾಲ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಕೋಟ್ಯಂತರ ಜನರ ಪ್ರೀತಿ ಪಾತ್ರನಾಗಿರುವ 'ಅಭಿಮನ್ಯು' ಆನೆಗೆ ವಿಶೇಷ ಗೌರವ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರವು ನಾಡಿನ ಜನತೆಯ ಮಹಾದಾಸೆಯನ್ನು ನೆರವೇರಿಸಲು ಮುಂದಾಗಿದೆ.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವನ್ನು ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು. ದಸರಾ ಗಜಪಡೆಯಿಂದಲೂ ಅಭಿಮನ್ಯುವನ್ನು ಕೈಬಿಡಲಾಗಿತ್ತು. ಆದರೆ, ಕೋಟ್ಯಂತರ ಅಭಿಮಾನಿಗಳ ಮಹಾದಾಸೆಗೆ ಮನ್ನಣೆ ನೀಡಿ ಹಿರಿಯ ಹಾಗೂ ಅನುಭವಿ ಅಭಿಮನ್ಯುವಿಗೆ ದಸರಾ ಮೆರವಣಿಗೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ.

ಅಭಿಮನ್ಯುವಿಗೆ ಜನರ ಮನದಲ್ಲಿ ವಿಶೇಷ ಸ್ಥಾನ
ಅಭಿಮನ್ಯು ಹಲವು ವರ್ಷಗಳ ಕಾಲ ಮೈಸೂರು ದಸರಾದ ಅಂಬಾರಿ ಹೊತ್ತು ನಾಡಿನ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ. ಆತನ ಶಾಂತ ಸ್ವಭಾವ, ಶಿಸ್ತು, ಧೈರ್ಯ ಹಾಗೂ ನಾಯಕತ್ವದ ಗುಣಗಳಿಂದಾಗಿ 'ಕ್ಯಾಪ್ಟನ್' ಅಂತಲೇ ಪ್ರಸಿದ್ಧಿ ಪಡೆದಿದ್ದಾನೆ.
ಅಭಿಮನ್ಯು ಅಭಿಮಾನಿಗಳಲ್ಲಿ ಸಂತಸ
ಹಿರಿಯ ಆನೆಯಾಗಿ ದಸರಾ ಗಜಪಡೆಯಲ್ಲಿರುವ ಇತರ ಆನೆಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವೂ ಅಭಿಮನ್ಯುವಿಗೆ ಇದೆ. ಆದ್ದರಿಂದ ನಿಶಾನೆ ಆನೆಯಾಗಿ ಅಭಿಮನ್ಯುವಿನ ಆಯ್ಕೆ ಅಭಿಮಾನಿಗಳಿಗೆ ಸಂತಸ ಮೂಡಿದಂತಾಗಿದೆ. ಈ ಮೂಲಕ ದಸರಾ ಜಂಬೂಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಅಂಬಾರಿ ಹೊರುವ ಜವಾಬ್ದಾರಿ ನಿವೃತ್ತಿ
ಸತತ ಆರು ಬಾರಿ ದಸರಾ ಕ್ಯಾಪ್ಟನ್ ಆಗಿ ಚಾಮುಂಡೇಶ್ವರಿ ದೇವಿಯ ಬಂಗಾರದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ ಅಭಿಮನ್ಯು, ತನ್ನ ಶಿಸ್ತು, ಧೈರ್ಯ, ಗಾಂಭೀರ್ಯ ಮತ್ತು ಕರ್ತವ್ಯನಿಷ್ಠೆಯಿಂದ ನಾಡಿನ ಜನರ ಮನ ಗೆದ್ದಿದ್ದಾನೆ. 60 ವರ್ಷ ಪೂರ್ಣಗೊಂಡ ಕಾರಣ ಅವನನ್ನು ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು.
2026ರ ದಸರಾ ಗಜಪಡೆಯ ಆರಂಭಿಕ ಪಟ್ಟಿಯಲ್ಲಿ ಅಭಿಮನ್ಯುವಿನ ಹೆಸರು ಇಲ್ಲದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆದರೆ, ಇದೀಗ ಆತನಿಗೆ ನಿಶಾನೆ ಆನೆಯ ಸ್ಥಾನ ನೀಡುವ ಮೂಲಕ ಗೌರವಪೂರ್ವಕ ವಿದಾಯ ನೀಡಲು ಮುಂದಾಗಿರುವುದು ಅಭಿಮಾನಿಗಳಿಗೆ ಸಂತಸ ಮೂಡಿದಂತಾಗಿದೆ.
ಸಚಿವ ರಾಮಲಿಂಗಾ ರೆಡ್ಡಿ ಆದೇಶದಲ್ಲಿ ಏನಿದೆ?
ಮೈಸೂರು ದಸರಾ ಕರ್ನಾಟಕದ ನಾಡಹಬ್ಬ ವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುದ ಐತಿಹಾಸಿಕ ಉತ್ಸವವಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ.
ಈ ಮಹತ್ವದ ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚಿಗೆ ಆಯೋಜಿಸಲಾದ ಅಭಿಮನ್ಯು ಆನೆಯ ವಿದಾಯಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿದ್ದು, ಸಾರ್ವಜನಿಕರು ಹಾಗೂ ದಸರಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವು ಅಭಿಮನ್ಯುವಿನ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ.
ಇದರ ಮುಂದುವರೆದ ಭಾಗವಾಗಿ, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲೂ ಅಭಿಮನ್ಯುವನ್ನು ಹೆಮ್ಮೆಯಿಂದ ಹಾಗೂ ಗೌರವಪೂರ್ವಕವಾಗಿ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಈ ವರ್ಷದ ಉತ್ಸವದಲ್ಲಿ ಘನಉಪಸ್ಥಿತಿವಹಿಸಿ ವಿಶೇಷ ಸ್ಥಾನ ಕಲ್ಪಿಸುವುದು ಸೂಕ್ತವಾಗಿದೆ.
ಅಭಿಮನ್ಯುವಿನಂತಹ ದಸರಾ ಪರಂಪರೆಯ ಹೆಮ್ಮೆಯ ಆನೆಯ ಹಲವು ವರ್ಷಗಳ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ 2026ರ ಜಂಬೂಸವಾರಿಯಲ್ಲಿ ಗೌರವಪೂರ್ವಕವಾಗಿ ಉಪಸ್ಥಿತಿಗೊಳಿಸುವುದರಿಂದ ದಸರಾ ಮಹೋತ್ಸವದ ವೈಭವ ಹಾಗೂ ಪರಂಪರೆಗೆ ಮತ್ತಷ್ಟು ಮೆರಗು ಬರಲಿದೆ.ಆದ್ದರಿಂದ, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿ ಅಭಿಮನ್ಯು ಆನೆಯನ್ನು ನಿಶಾನೆ ಆನೆಯನ್ನಾಗಿಸಿ, ಇದರ ಸೇವೆಯನ್ನು ಸ್ಮರಿಸುವಂತೆ ಸೂಕ್ತ ವ್ಯವಸ್ಥೆ ಹಾಗೂ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು.
ಜಂಬೂಸವಾರಿ ಮೆರವಣಿಗೆ ಆರಂಭಕ್ಕೂ ಮುನ್ನ ನಿಶಾನೆ ಆನೆ ಮುಂಚೂಣಿಯಲ್ಲಿ ಸಾಗುತ್ತದೆ. ಈ ಮೂಲಕ ಅಭಿಮನ್ಯು ಈ ಬಾರಿ ಅಂಬಾರಿ ಹೊರುವುದಿಲ್ಲವಾದರೂ, ದಸರಾ ಮೆರವಣಿಗೆಯಲ್ಲಿ ಪ್ರಮುಖ ಪಾತ್ರದೊಂದಿಗೆ ಕಾಣಿಸಿಕೊಳ್ಳಲಿದ್ದಾನೆ. ಈ ಹಿಂದೆ ಅಂಬಾರಿ ಹೊತ್ತಿದ್ದ ಅರ್ಜುನ ಆನೆಗೂ ನಿವೃತ್ತಿಯ ಬಳಿಕ ನಿಶಾನೆ ಆನೆಯಾಗಿ ದಸರೆಯಲ್ಲಿ ಭಾಗವಹಿಸುವ ಗೌರವ ನೀಡಲಾಗಿತ್ತು. ಅದೇ ರೀತಿಯಲ್ಲಿ ಹಲವು ವರ್ಷಗಳ ಕಾಲ ದಸರೆಯ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿರುವ ಅಭಿಮನ್ಯುವಿಗೂ ಗೌರವಪೂರ್ವಕ ವಿದಾಯ ನೀಡಲು ನಿರ್ಧರಿಸಲಾಗಿದೆ.
ಅರಣ್ಯ ಕಾರ್ಯಾಚರಣೆಯಲ್ಲೂ ಉತ್ತಮ ಸಾಧನೆ
ಅಭಿಮನ್ಯು ಕೇವಲ ಮೈಸೂರು ದಸರೆಯ ಅಂಬಾರಿ ಆನೆಯಾಗಿ ಮಾತ್ರವಲ್ಲದೆ, ಅರಣ್ಯ ಇಲಾಖೆಯ ಹಲವು ಕಾರ್ಯಾಚರಣೆಗಳಲ್ಲೂ ತನ್ನ ಸಾಮರ್ಥ್ಯ ತೋರಿಸಿದ್ದಾನೆ. ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವುದು ಹಾಗೂ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಅಭಿಮನ್ಯು ಪ್ರಮುಖ ಪಾತ್ರ ವಹಿಸಿದ್ದಾನೆ.
ಬೃಹದಾಕಾರದ ದೇಹ ಹೊಂದಿದ್ದರೂ ಅತ್ಯಂತ ಸೌಮ್ಯ ಸ್ವಭಾವದ ಅಭಿಮನ್ಯು ತನ್ನ ಮಾವುತರು ಮತ್ತು ಕಾವಾಡಿಗಳ ಮಾತನ್ನು ಶಿಸ್ತಿನಿಂದ ಪಾಲಿಸುತ್ತಿದ್ದ. ಇದೇ ಕಾರಣಕ್ಕೆ ಆತ ದಸರಾ ಅಭಿಮಾನಿಗಳ ಪಾಲಿಗೆ ಕೇವಲ ಆನೆಯಾಗಿರದೆ, ಮೈಸೂರು ದಸರೆಯ ಹೆಮ್ಮೆಯ 'ಕ್ಯಾಪ್ಟನ್' ಆಗಿ ಗುರುತಿಸಿಕೊಂಡಿದ್ದಾನೆ.


Click it and Unblock the Notifications
