ಜನಸಾಮಾನ್ಯರಿಗೆ ದುಬಾರಿಯಾದ ಮೈಸೂರು ದಸರ: ಯಾಕೆ ಈ ಆರೋಪ?
ಮೈಸೂರು, ಸೆಪ್ಟೆಂಬರ್ 26: ಐತಿಹಾಸಿಕ ಮೈಸೂರು ದಸರಾ ಎಂಬುದು ಜನಸಾಮಾನ್ಯರಿಂದ ಆರಂಭವಾಗಿ ಶ್ರೀಮಂತರ ತನಕ ಎಲ್ಲರೂ ಖುಷಿಯಾಗಿ ತಮ್ಮ ಇತಿಮಿತಿಯನ್ನು ಸಾರ್ವಜನಿಕವಾಗಿ ಸಂಭ್ರಮಿಸುವ ಜನೋತ್ಸವವಾಗಿದೆ. ಇಂತಹ ದಸರಾದಲ್ಲಿ ಜನ ಸಾಗರವೇ ನೆರೆಯುತ್ತದೆ. ಆದರೆ ದಸರಾದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಹಣ ನೀಡಿ ಖರೀದಿಸಬೇಕಾಗಿದೆ. ಯುವ ದಸರಾ ಹಾಗೂ ಜಂಬೂಸವಾರಿಯನ್ನು ಹತ್ತಿರದಿಂದ ನೋಡಲು ಪಾಸ್ ಗಳು ಅನಿವಾರ್ಯವಾಗಿವೆ.
ಈ ಬಾರಿಯ ದಸರಾ ಪಾಸ್ ಗಳನ್ನು ಗಮನಿಸಿದರೆ ಇದರ ಬೆಲೆ ದುಬಾರಿಯಾಗಿದೆ. ದುಪ್ಪಟ್ಟು ಹಣ ನೀಡಿ ಜನಸಾಮಾನ್ಯರು ಇದರಲ್ಲಿ ಭಾಗವಹಿಸಲು ಸಾಧ್ಯನಾ? ಹೀಗೊಂದು ಪ್ರಶ್ನೆಗಳು ಜನರಲ್ಲಿ ಹುಟ್ಟಿಕೊಂಡಿದೆ. ಏಕೆಂದರೆ ಈ ಬಾರಿಯ ನಾಡಹಬ್ಬ ಮೈಸೂರು ದಸರಾ ದುಬಾರಿಯಾಗಿದ್ದು, ಸಾಮಾನ್ಯ ಜನರ ಪಾಲಿಗೆ ಮನರಂಜನ ಕಾರ್ಯಕ್ರಮಗಳು ಗಗನ ಕುಸುಮವಾಗುವ ಎಲ್ಲ ಲಕ್ಷಣಗಳು ಕಂಡು ಬರಲಾರಂಭಿಸಿವೆ.

ದಸರಾ ಕಾರ್ಯಕ್ರಮಗಳಲ್ಲಿ ಯುವ ದಸರಾ ಬಹು ಮನರಂಜನಾ ಕಾರ್ಯಕ್ರಮವಾಗಿದ್ದು ಯುವ ಜನತೆ ಇದಕ್ಕೆ ಮುಗಿ ಬೀಳುತ್ತಾರೆ. ಈ ಬಾರಿ ಅ.3ರಿಂದ 12ರವರೆಗೆ ದಸರಾ ಮಹೋತ್ಸವ ನಡೆಯುತ್ತಿದ್ದು, ಸರ್ಕಾರ ಇದೇ ಮೊದಲ ಬಾರಿಗೆ ಭಾರಿ ಮೊತ್ತದ ಅನುದಾನ ನೀಡಿದ್ದರೂ, ವಿವಿಧ ದಸರಾ ಉಪ ಸಮಿತಿಗಳು ಆಯೋಜಿಸುತ್ತಿರುವ ಕಾರ್ಯಕ್ರಮಗಳು ಜನ ಸಾಮಾನ್ಯರಿಗೆ ದುಬಾರಿಯಾಗಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಯುವ ದಸರಾಗೆ ದುಬಾರಿ ಟಿಕೆಟ್ ವ್ಯವಸ್ಥೆ
ಯುವ ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್ ಪದ್ಧತಿ ಪರಿಚಯಿಸಲಾಗಿದೆ. ಯುವದಸರಾವು ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆ ಹಾಗೂ ಯುವ ಸಮುದಾಯವನ್ನು ಸಂಭ್ರಮದ ಅಲೆಯಲ್ಲಿ ತೇಲಿಸುತ್ತದೆ. ಆದರೆ ಈ ಬಾರಿ ಯುವ ದಸರಾ ಕಾರ್ಯಕ್ರಮ ವೀಕ್ಷಣೆಗೂ ಟಿಕೆಟ್ ಮಾಡಲಾಗಿದೆ. ಈ ಹಿಂದೆ ವಿಐಪಿ ಪಾಸ್ಗಳನ್ನು ನೀಡುವ ಪದ್ಧತಿ ಇತ್ತು. ಆದರೆ, ಈ ಬಾರಿ ವೇದಿಕೆಯ ಮುಂಭಾಗದ ಗ್ಯಾಲರಿ 1 ಮತ್ತು ಗ್ಯಾಲರಿ 2ಕ್ಕೆ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಗ್ಯಾಲರಿ 1ರಲ್ಲಿ ಕುಳಿತು ಯುವ ದಸರಾ ವೀಕ್ಷಿಸಲು 8 ಸಾವಿರ ರೂ. ಹಾಗೂ ಗ್ಯಾಲರಿ 2ರಲ್ಲಿ ಕುಳಿತು ವೀಕ್ಷಿಸಲು 5 ಸಾವಿರ ರೂ. ನಿಗದಿ ಪಡಿಸಲಾಗಿದೆ.

ಪ್ರತಿ ದಿನಕ್ಕೂ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳವಬೇಕು. ಈ ಪ್ರಮಾಣದ ಹಣ ನೀಡಿ ಮನೋರಂಜನ ಕಾರ್ಯಕ್ರಮ ವೀಕ್ಷಿಸಬೇಕೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ಪ್ರತಿವರ್ಷದಂತೆ ಈ ಬಾರಿಯೂ ದಸರಾ ವೇಳ ದೀಪಾಲಂಕಾರ ಮತ್ತು ಬೆಳಕಿನ ನಗರಿ ಮೈಸೂರನ್ನು ಡಬಲ್ ಡೆಕ್ಕರ್ (ಅಂಬಾರಿ) ಬಸ್ಸಿನಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಆದರೆ, ಅಂಬಾರಿ ಬಸ್ಸಿನಲ್ಲಿ ಕುಳಿತು ನಗರದ ಬೆಳಕಿನ ಸೌಂದರ್ಯ ಸವಿಯಲು ಟಿಕೆಟ್ ದರವನ್ನು 350ರಿಂದ 500 ರೂ.ಗೆ ಒಂದೇ ಸಲ ಏರಿಕೆ ಮಾಡಲಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಅಂಬಾರಿ ಬಸ್ ಹತ್ತಲು ಹಿಂದೆ ಮುಂದೆ ನೋಡುವಂತಾಗಿದೆ.

ಅಂಬಾರಿ ಬಸ್ ದರದಲ್ಲಿಯೂ ಹೆಚ್ಚಳ
ಈ ಹಿಂದೆ ಅಂಬಾರಿ ಬಸ್ ಏರಲು 350 ರೂ. ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಟಿಕೆಟ್ ಪಡೆದ ವ್ಯಕ್ತಿ ಕಳಗೆ ಅಥವಾ ಚಾವಣಿಯಲ್ಲಿ ಕುಳಿತು ದೀಪಾಲಂಕಾರ ವೀಕ್ಷಿಸಬಹುದಿತ್ತು. ಆದರೆ, ಈ ಬಾರಿ ಚಾವಣಿಯಲ್ಲಿ ಕುಳಿತು ನಗರ ವೀಕ್ಷಿಸಲು 500 ರೂ., ಕೆಳಗೆ (ಲೋಯರ್ ಡೆಕ್) ಕುಳಿತುಕೊಳ್ಳಲು 250 ರೂ. ದರ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರ ದಸರೆಗೆ 40 ಕೋಟಿ ರೂ. ಅನುದಾನ ಘೋಷಿಸಿದ್ದರೂ ದಸರಾ ಮಹೋತ್ಸವ ಸಮಿತಿ ಅಂಬಾರಿ ಬಸ್ ಟಿಕೆಟ್ ದರ ಹೆಚ್ಚಳ, ಯುವ ದಸರಾ ವೀಕ್ಷಣೆಗೆ ಟಿಕೆಟ್‌ಗೆ ದುಬಾರಿ ದರ ನಿಗದಿ ಪಡಿಸಿದೆ.
ಇದೆಲ್ಲ ಕ್ರಮಗಳಿಂದಾಗಿ ಜನ ಸಾಮಾನ್ಯರು ದಸರೆ ಕಾರ್ಯಕ್ರಮಗಳಿಂದ ದೂರರ ಉಳಿಯಲಿದ್ದು, ಉಳ್ಳವರಷ್ಟೇ ಕಾರ್ಯಕ್ರಮ ವೀಕ್ಷಿಸುವಂತಾಗಿದೆ. ಈ ನಡುವೆ ಅರಮನೆ ಅಂಗಳದಲ್ಲಿ ಹೆಚ್ಚುವರಿಯಾಗಿ 10 ಸಾವಿರ ಮಂದಿ ಕುಳಿತು ದಸರಾ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದಲೂ ಟಿಕೆಟ್ ಮೂಲಕ ಹಣ ವಸೂಲಿಗೆ ದಸರಾ ಮಹೋತ್ಸವ ಸಮಿತಿ ಇಳಿದಿದೆ ಎಂಬ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.












Click it and Unblock the Notifications