ಮೈಸೂರು ದಸರಾ 2023: ಗಜಪಡೆಗಳಿಗೀಗ ಅತಿಂಥ ಬೋಜನವಲ್ಲ..ಭೂರಿ ಬೋಜನ!

ಮೈಸೂರು, ಅಕ್ಟೋಬರ್‌ 08: ಮೈಸೂರು ದಸರಾ ಜಂಬೂಸವಾರಿಗೆ ಮೆರಗು ನೀಡುವ ಗಜಪಡೆ ಈಗಾಗಲೇ ಕಠಿಣ ತಾಲೀಮಿನಲ್ಲಿ ತೊಡಗಿಸಿಕೊಂಡಿದೆ. ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತಿದ್ದು, ಅವುಗಳ ಆರೋಗ್ಯದ ದೃಷ್ಟಿಯಿಂದ ಪೌಷ್ಠಿಕಾಂಶಗಳುಳ್ಳ ಆಹಾರವನ್ನು ನೀಡಲಾಗುತ್ತಿದೆ. ಆನೆ ಶಿಬಿರಗಳಲ್ಲಿ ನೀಡುವ ಆಹಾರಕ್ಕಿಂತಲೂ ವಿಶೇಷ ತಿನಿಸುಗಳನ್ನು ನೀಡುವ ಮೂಲಕ ಅವುಗಳನ್ನು ಸದೃಢಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಅರಮನೆ ಆವರಣದಲ್ಲಿ ಆನೆಗಳಿಗೆ ಟೆಂಟ್ ಗಳನ್ನು ಹಾಕಲಾಗಿದ್ದು, ಅಲ್ಲಿಯೇ ಅವುಗಳಿಗೆ ಮಜ್ಜನ ಮತ್ತು ಆಹಾರ ನೀಡಲಾಗುತ್ತಿದೆ. ಇನ್ನು ಆಹಾರಗಳನ್ನು ಕೂಡ ಪಶುವೈದ್ಯರ ಸಲಹೆಯಂತೆ ನೀಡಲಾಗುತ್ತಿದೆ. ಅದು ಅತಿಂಥ ಬೋಜನವಲ್ಲ ಭೂರಿ ಬೋಜನವಾಗಿದೆ. ಈ ಬಾರಿ ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯು ಆಗಿದ್ದು ಆತನೇ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಹೀಗಾಗಿ ಆತನಿಗೆ ವಿಶೇಷ ಸತ್ಕಾರಗಳು ನಡೆಯುತ್ತಿವೆ.

mysuru-dasara-2023

ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ, ಅರ್ಜುನ, ಕಂಜನ್, ವರಲಕ್ಷ್ಮೀ, ವಿಜಯ, ಭೀಮ, ಗೋಪಿ, ಧನಂಜಯ, ಮಹೇಂದ್ರ, ಪ್ರಶಾಂತ, ಸುಗ್ರೀವ, ರೋಹಿತ್, ಹಿರಣ್ಯಾ ಹಾಗೂ ಲಕ್ಷ್ಮೀ ಸೇರಿ 14 ಆನೆಗಳು ಜಂಬೂ ಸವಾರಿಯ ರೂವಾರಿಗಳಾಗಿದ್ದು, ಇವುಗಳನ್ನು ತಾಲೀಮಿನ ಮೂಲಕ ಜಂಬೂಸವಾರಿಗೆ ತಯಾರಿ ಮಾಡುವುದರ ಜತೆಗೆ ಅವುಗಳಿಗೆ ಆಹಾರಗಳನ್ನು ನೀಡಿ ಆರೋಗ್ಯವನ್ನು ಕಾಪಾಡಿ ದೇಹವನ್ನು ಸದೃಢಗೊಳಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಗಜಪಡೆಗೆ ವಿಶೇಷ ಪೌಷ್ಟಿಕ ಆಹಾರ ತಯಾರಿ

ಸದ್ಯ 14 ಆನೆಗಳಿಗೆ ಯಾವುದೇ ಕೊರತೆಯಾಗದಂತೆ ಉತ್ತಮ ಆಹಾರವನ್ನು ಅರಣ್ಯ ಇಲಾಖೆ ನಿತ್ಯವೂ ನೀಡುತ್ತಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಎಲ್ಲ ಆನೆಗಳಿಗೂ ಹೆಚ್ಚಿನ ದೈಹಿಕ ಸಾಮರ್ಥ್ಯ ಬಹುಮುಖ್ಯವಾಗಿದ್ದು ಅದು ಸಾಧ್ಯವಾಗಬೇಕಾದರೆ ಪೌಷ್ಠಿಕ ಆಹಾರದ ಅಗತ್ಯವಿದೆ. ಹೀಗಾಗಿಯೇ ಗಜಪಡೆಗೆ ವಿಶೇಷ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಕೊಡಲಾಗುತ್ತಿದೆ.

ಇಷ್ಟೇ ಅಲ್ಲದೆ ಅವುಗಳಿಗೆ ಸ್ನಾನ ಮಾಡಿಸುವುದು, ಆಹಾರ ನೀಡುವುದು ಹೀಗೆ ಅವುಗಳತ್ತ ಹೆಚ್ಚಿನ ಕಾಳಜಿ ವಹಿಸಿ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿದೆ. ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವನ್ನೇ ಬೆಳಗ್ಗೆ ಮತ್ತು ಸಂಜೆ ನೀಡಿ ಬಲಾಢ್ಯರನ್ನಾಗಿ ಮಾಡಲಾಗುತ್ತಿದೆ. ಈಗಾಗಲೇ ಕಾಡಿನ ಪರಿಸರದಲ್ಲಿದ್ದ ಆನೆಗಳೆಲ್ಲವೂ ನಗರಕ್ಕೆ ಬಂದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ.

ಏನೇನು ಆಹಾರ ಕೊಡುತ್ತಾರೆ ಗೊತ್ತಾ?

ಸಧ್ಯ ಆನೆಗಳ ಸಾಮರ್ಥ್ಯ ವೃದ್ಧಿಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಪ್ರತಿದಿನ ಮುಂಜಾನೆ 5.30ಕ್ಕೆ ಹಾಗೂ ಸಂಜೆ 4ಗಂಟೆಗೆ ಶಕ್ತಿ ವೃದ್ಧಿಸುವ, ಮೈಕಟ್ಟು ಅರಳಿಸುವ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಉದ್ದಿನ ಕಾಳು, ಹೆಸರು ಕಾಳು, ಗೋಧಿ, ಕುಸುಬಲ ಅಕ್ಕಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತಿದೆ. ಜೊತಗೆ ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ.

mysuru-dasara-2023

ಇನ್ನು ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಅಡುಗೆ ಮನೆಯಲ್ಲಿ ಆನೆಗಳಿಗೆ ವಿಶೇಷ ಆಹಾರ ತಯಾರಿಸಲಾಗುತ್ತಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿ ಬೇಯಿಸಲಾಗುತ್ತದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಬಲ ಅಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ. ಬೇಯಿಸಿದ ಧಾನ್ಯಗಳನ್ನು ಟ್ರೇಗೆ ಹಾಕಿ ಮುದ್ದೆಯಾಗಿ ಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಹೋಗುವ ಮುನ್ನ ನೀಡಲಾಗುತ್ತದೆ.

ಗಜಪಡೆಗಳಿಗೆ ವಿಶೇಷ ತಿನಿಸು ಕುಸುರೆ

ಸಂಜೆ ತಾಲೀಮು ಮುಗಿಸಿ ಬಂದ ನಂತರ ರಾತ್ರಿ 7ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥಗಳನ್ನು ಬೇಯಿಸಲಾಗುತ್ತದೆ. ರಾತ್ರಿ 9ರ ನಂತರ ಬೇಯಿಸಿದ ಆಹಾರ ಪದಾರ್ಥವನ್ನು ದಾಸ್ತಾನು ಕೊಠಡಿಯಲ್ಲಿಟ್ಟು ಬೀಗ ಹಾಕಿ ಸುರಕ್ಷಿತವಾಗಿಡಲಾಗುತ್ತದೆ. ಆ ಆಹಾರವನ್ನು ಮುಂಜಾನೆ 5ಕ್ಕೆ ಪಾತ್ರೆಯಿಂದ ತೆಗೆದು ಮುದ್ದೆ ಕಟ್ಟಿ 5.30 ರಿಂದ 6.30ರ ಒಳಗೆ ಎಲ್ಲಾ ಆನೆಗಳಿಗೂ ನೀಡಲಾಗುತ್ತದೆ. ಬಳಿಕ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಾಗುತ್ತದೆ. ಪ್ರತಿದಿನ ಒಂದೊಂದು ಆನೆಗೆ ಮೂರು ಕೆಜಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ನಂತರ ದಿನದಿಂದ ಅವುಗಳ ಪ್ರಮಾಣ ಹೆಚ್ಚಿಸಲಾಗುತ್ತದೆ.

ಮಧ್ಯಾಹ್ನದ ವೇಳೆ ಆನೆಗಳಿಗೆ ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಇಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿದ ಕುಸುರೆಯನ್ನು ನೀಡಲಾಗುತ್ತಿದೆ. ಆನೆಗಳು ಪ್ರತಿ ದಿನ ಮೂರು ಬಾರಿ ದಿನವೊಂದಕ್ಕೆ ಒಟ್ಟು 250ರಿಂದ 300ಲೀಟರ್ ನೀರು ಕುಡಿಯುತ್ತವೆ. ಮುಂಜಾನೆ 5.30ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರು ಕುಡಿಸಲಾಗುತ್ತದೆ.

ಭರದಿಂದ ಸಾಗಿದ ಭೂರಿ ಬೋಜನದ ತಯಾರಿ

ಇಷ್ಟೇ ಅಲ್ಲದೆ ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುತ್ತದೆ. ಬೆಳಗ್ಗೆ 6.30 ಮತ್ತು ರಾತ್ರಿ 7ಗಂಟೆಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ನೀಡಲಾಗುತ್ತದೆ. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ.

ಆನೆಗಳಿಗೆ ನೀಡುವ ಆಹಾರವೆಲ್ಲವೂ ಅವುಗಳ ತೂಕಕ್ಕೆ ಅನುಗುಣವಾಗಿವೇ ಇರುತ್ತದೆ. ಯಾವ ಆನೆಗೆ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ವೈದ್ಯರು ತಿಳಿಸುತ್ತಾರೆ. ಅದರಂತೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಆನೆಗಳಿಗೆ ನೀಡುವ ಆಹಾರವೆಲ್ಲವೂ ಅವುಗಳ ತೂಕವನ್ನು ಆದರಿಸಿ ನೀಡಲಾಗುತ್ತಿದೆ. ಒಟ್ಟಾರೆ ಗಜಪಡೆಯನ್ನು ಜಂಬೂ ಸವಾರಿಗೆ ತಯಾರಿ ಮಾಡುವ ಕಾರ್ಯ ಭರದಿಂದಲೇ ಸಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+