ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಿದ್ಧತೆ: ಜಂಬೂಸವಾರಿಗೆ ಗಜಪಡೆಯ ತಯಾರಿ
ಮೈಸೂರು, ಸೆಪ್ಟೆಂಬರ್ 16: ಐತಿಹಾಸಿಕ ಮೈಸೂರು ದಸರಾ ಸೂತ್ರಧಾರಿಗಳಾದ ಅಭಿಮನ್ಯು ನೇತೃತ್ವದ ಗಜಪಡೆ ತಾಲೀಮು ಆರಂಭಿಸಿದ್ದು, ಅಕ್ಟೋಬರ್ 24ರಂದು ನಡೆಯಲಿರುವ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವುದರೊಂದಿಗೆ ಮೈಸೂರು ದಸರಾವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಲು ತಯಾರಿ ಶುರುಮಾಡಿವೆ.
ಕಳೆದ ಕೆಲವು ದಿನಗಳಿಂದ ಸುಮ್ಮನೆ ನಡೆದುಕೊಂಡು ಬನ್ನಿಮಂಟಪದವರೆಗೆ ಹೋಗಿ ಬರುತ್ತಿದ್ದ ಗಜಪಡೆ ಇದೀಗ ಭಾರ ಹೊತ್ತು ತೆರಳುವ ಅಭ್ಯಾಸ ನಡೆಸುತ್ತಿವೆ. ಈ ಭಾರ ಹೊತ್ತು ನಡೆಯುವ ತಾಲೀಮಿಗೆ ಶುಕ್ರವಾರದಿಂದ ಚಾಲನೆ ನೀಡಲಾಗಿದ್ದು, ಅದು ದಿನನಿತ್ಯ ಮುಂದುವರೆಯುತ್ತಿದೆ. ಭಾರ ಹೊರಿಸುವ ತಾಲೀಮಿನ ಮೊದಲ ದಿನ ಕ್ಯಾಪ್ಟನ್ ಅಭಿಮನ್ಯು 600 ಕೆ.ಜಿ ಭಾರ ಹೊತ್ತು ಬನ್ನಿಮಂಟಪದವರೆಗೆ ನಿರಾಯಾಸವಾಗಿ ಹೆಜ್ಜೆ ಹಾಕಿ ಬಂದಿದ್ದಾನೆ.

ಕ್ಯಾಪ್ಟನ್ ಅಭಿಮನ್ಯು ಬೆನ್ನಿಗೆ 250 ಕೆ.ಜಿ ತೂಕದ ಗಾದಿ ಮತ್ತು ನಮ್ದಾ ಬಿಗಿದು, ಅದರಲ್ಲಿ ಕಬ್ಬಿಣದ ತೊಟ್ಟಿಲನ್ನು ಇರಿಸಿ 350 ಕೆ.ಜಿ ಮರಳು ಮೂಟೆಗಳನ್ನು ಇರಿಸಿ ಭಾರದ ತಾಲೀಮು ನಡೆಸಲಾಗುತ್ತಿದೆ. ಇದು ಬರೀ ಅಭಿಮನ್ಯುಗೆ ಮಾತ್ರವಲ್ಲದೆ, ಇತರೆ ಗಂಡಾನೆಗಳಿಗೂ ನಡೆಯಲಿದೆ. ಈ ಪೈಕಿ ಅರ್ಜುನ ಆನೆಯನ್ನು ಬಿಟ್ಟು ಇತರೆ 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ರೊಟೇಷನ್ ಆಗಿ ಐದು ದಿನ. 750 ಕೆಜಿ ಬರುವ ತನಕ ತಾಲೀಮು ನಡೆಯಲಿದೆ. ಈ ತಾಲೀಮು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ. ನಡೆಯಲಿದೆ. ಭಾರ ಹೆಚ್ಚಿಸಿದ ನಂತರ ಕೊನೆಯಲ್ಲಿ ಚಿನ್ನದ ಅಂಬಾರಿಯಷ್ಟೇ ತೂಕದ ಚಿನ್ನದ ಅಂಬಾರಿಯನ್ನು ಕಟ್ಟಿ ತಾಲೀಮು ನಡೆಸಲಾಗುತ್ತದೆ.
ಕಂಜನ್ ಆನೆ ಹೊಸ ಅನುಭವ
ಈ ತಾಲೀಮಿಗೆ ಗಜಪಡೆಯ ಎರಡನೇ ತಂಡ ಸೆಪ್ಟಂಬರ್ ಕೊನೆಯ ವಾರದಲ್ಲಿ ಸೇರಿಕೊಳ್ಳಲಿದೆ. ಸಾಮಾನ್ಯವಾಗಿ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಹೆಚ್ಚಿನ ಆನೆಗಳಿಗೆ ತಾಲೀಮು ಹೊಸತೇನಲ್ಲ. ಹಾಗಾಗಿ ಅವುಗಳಿಗೆ ಅಭ್ಯಾಸವಿರುವುದರಿಂದ ಕಷ್ಟವಾಗುವುದಿಲ್ಲ. ಆದರೆ ಹೊಸದಾಗಿ ಆಗಮಿಸುವ ಆನೆಗಳಿಗೆ ಇದೆಲ್ಲವೂ ಹೊಸತಾಗಿರುತ್ತದೆ. ಹೀಗಾಗಿ ಅವುಗಳತ್ತ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಈ ಬಾರಿ ಕಂಜನ್ ಎಂಬ ಆನೆಗೆ ಹೊಸ ದಸರಾ ಹೊಸ ಅನುಭವವಾಗಿದೆ. ಹೀಗಾಗಿ ಆತನತ್ತ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

ಇದುವರೆಗೆ ಕಾಡಿನ ನಡುವಿನ ಆನೆಶಿಬಿರದಲ್ಲಿದ್ದ ಕಂಜನ್ ಆನೆಗೆ ನಗರದ ಪರಿಸರ ಹೊಸದಾಗಿದ್ದು, ಇಲ್ಲಿನ ವಾತಾವರಣಕ್ಕೆ ಅದು ಒಗ್ಗಿಕೊಳ್ಳುವುದು ಅಗತ್ಯವಾಗಿದೆ. ಇತರ ಆನೆಗಳ ನಡುವೆ ಹೆಜ್ಜೆ ಹಾಕುತ್ತಿರುವ ಕಂಜನ್ ನಗರ ಪರಿಸರಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದು, ಆನೆಗಳ ಜತೆಗೆ ಯಾವುದೇ ಭಯ, ಆತಂಕವಿಲ್ಲದೆ ತಾಲೀಮಿನಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಜತೆಗೆ ತಾಲೀಮಿನ ವೇಳೆ ಪಕ್ಕದಲ್ಲಿ ಅಧಿಕಾರಿಗಳ ಕಾರು ಸೇರಿದಂತೆ ಏನೇ ಶಬ್ಧವಾದರೂ ಭಯಪಡದೆ ಧೈರ್ಯದಿಂದ ಹೆಜ್ಜೆ ಇಡುವ ಮೂಲಕ ಅರಣ್ಯ ಅಧಿಕಾರಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ತಾಲೀಮು ವೀಕ್ಷಿಸಲು ಜನರ ದಂಡು
ಇದೀಗ ಗಜಪಡೆ ಅರಮನೆಗೆ ಪ್ರವೇಶಿಸಿ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸುವುದರೊಂದಿಗೆ ನಗರಕ್ಕೆ ದಸರಾ ಕಳೆ ಬಂದಂತಾಗಿದೆ. ಜನ ಗಜಪಡೆಯ ತಾಲೀಮು ವೀಕ್ಷಿಸಲು ಅರಮನೆಯಿಂದ ಬನ್ನಿಮಂಟಪದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ನೆರೆಯುತ್ತಿದ್ದಾರೆ. ಇನ್ನು ಗಜಪಡೆ ಸಾಗುವ ರಾಜಮಾರ್ಗವನ್ನು ದುರಸ್ತಿಗೊಳಿಸುವ ಕಾರ್ಯವೂ ಆರಂಭವಾಗಿದೆ. ಇದೆಲ್ಲದರ ನಡುವೆ ಗಜಪಡೆಯನ್ನು ಪ್ರತಿದಿನವೂ ತಾಲೀಮಿಗೆ ಅಣಿಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕಾಗಿ ಮಾವುತ, ಕಾವಾಡಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿರಂತರ ಶ್ರಮವಹಿಸುತ್ತಾರೆ.
ಮಾವುತ ಮತ್ತು ಕಾವಾಡಿಗಳಿಗೆ ಆನೆಗಳ ಬೆನ್ನಿಗೆ ಭಾರ ಕಟ್ಟುವುದಕ್ಕೆ ನೈಪುಣ್ಯತೆ ಬೇಕಾಗುತ್ತದೆ. ಜತೆಗೆ ಇದನ್ನು ಕಟ್ಟಲು ಸುಮಾರು ಒಂದೂವರೆ ಗಂಟೆಯಾದರೂ ಬೇಕಾಗುತ್ತದೆ. ಇದರ ಬಗ್ಗೆ ಚೆನ್ನಾಗಿ ಅರಿತ ಮಾವುತರು ಮತ್ತು ಕಾವಾಡಿಗಳು ಈ ಕಾರ್ಯವನ್ನು ಅರಣ್ಯಾಧಿಕಾರಿಗಳ ಸೂಚನೆಯಂತೆ ನಿರ್ವಹಿಸುತ್ತಾರೆ.
ಮೈಸೂರಿಗೆ ಬರಲಿದೆ ದಸರಾ ಕಳೆ
ಭಾರ ಹೊರಿಸುವ ಮುನ್ನ ನಮ್ದಾ ಎಂದು ಕರೆಯುವ ಹೊದಿಕೆಯನ್ನು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. (ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲೆದು ಅದಕ್ಕೆ ತೆಂಗಿನ ನಾರು ತುಂಬಿಸಲಾಗಿರುತ್ತದೆ.) ಮೆತ್ತನೆಯ ನಮ್ದಾದ ಮೇಲೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು 300 ಕೆ.ಜಿ ಇರುತ್ತದೆ. ಇದನ್ನು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲುನ್ನು ತುಂಬಿಸಿ ಮಾಡಲಾಗುತ್ತದೆ. ಅದರ ಮೇಲೆ ಕಬ್ಬಿಣದ ತೊಟ್ಟಿಲನ್ನು ಇಟ್ಟು ಅದರಲ್ಲಿ ಭಾರದ ಮರಳು ಮೂಟೆಯನ್ನು ಇಡಲಾಗುತ್ತದೆ. ಇದನ್ನು ಹೊತ್ತು ಸಾಗುವುದೇ ಭಾರದ ತಾಲೀಮು ಆಗಿದೆ.
ಎರಡನೇ ಹಂತದ ಗಜಪಡೆ ಅರಮನೆ ಅಂಗಳವನ್ನು ಪ್ರವೇಶಿಸಿದ ಬಳಿಕ ಸುಮಾರು 14 ಆನೆಗಳ ಗಜಪಡೆ ತಾಲೀಮು ನಡೆಸುವುದನ್ನು ನೋಡುವುದೇ ಒಂದು ರೀತಿಯ ಮಜಾ ಆಗಿರುತ್ತದೆ. ದಿನಕಳೆದಂತೆ ಮೈಸೂರು ದಸರಾ ಕಳೆ ಇಡೀ ನಗರವನ್ನು ಆವರಿಸುತ್ತಾ ಹೋಗಲಿದ್ದು ಎಲ್ಲೆಲ್ಲೂ ದಸರಾ ಸಂಭ್ರಮ ಮನೆ ಮಾಡಲಿದೆ.












Click it and Unblock the Notifications