ಮೈಸೂರು ದಸರಾ ಜಂಬೂಸವಾರಿ ದಿನದಂದು ನಡೆಯುವ ವಜ್ರಮುಷ್ಠಿ ಕಾಳಗದ ಬಗ್ಗೆ ನಿಮಗೆಷ್ಟು ಗೊತ್ತು?, ಇಲ್ಲಿದೆ ಮಾಹಿತಿ
ಮೈಸೂರು, ಅಕ್ಟೋಬರ್, 23: ಮೈಸೂರು ದಸರಾದ ಜಂಬೂಸವಾರಿಯ ದಿನದಂದು ಅಂಬಾವಿಲಾಸ ಅರಮನೆಯ ಕರಿಕಲ್ಲುತೊಟ್ಟಿಯಲ್ಲಿ ಜಟ್ಟಿಗಳು ವಜ್ರಮುಷ್ಠಿ ಕಾಳಗ ಮಾಡುವುದರೊಂದಿಗೆ ವಿಜಯದಶಮಿಯ ಕಾರ್ಯಕ್ರಮಗಳು ಆರಂಭವಾಗುವುದು ಸಂಪ್ರದಾಯವಾಗಿದೆ. ಹೀಗಾಗಿ ವಜ್ರಮುಷ್ಠಿ ಕಾಳಗ ನಡೆಸಲು ಜಟ್ಟಿಗಳ ಎರಡು ಜೋಡಿಯನ್ನು ಕಟ್ಟಲಾಗಿದೆ.
ಅಕ್ಟೋಬರ್ 24ರಂದು ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಮೈಸೂರಿನ ಉಸ್ತಾದ್ ಬಾಲಾಜಿ ಅವರ ಶಿಷ್ಯ ಎಸ್.ಪ್ರದೀಪ್ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಪ್ರವೀಣ್ ಜಟ್ಟಿಯನ್ನು ಜೋಡಿ ಹಾಗೂ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ವೆಂಕಟೆಶ್ ಜಟ್ಟಿ ಮತ್ತು ಬೆಂಗಳೂರಿನ ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಶಿಷ್ಯ ಬಂಗಾರ ಪ್ರಮೋದ್ ಅವರನ್ನು ಜೋಡಿಯನ್ನು ಕಟ್ಟಲಾಗಿದೆ.

ಅಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ಕಾಳಗ ನಡೆಯಲಿದೆ. ಕಾಳಗಕ್ಕೆ ಮುನ್ನ ಕೇಶಮುಂಡನ ಮಾಡಿಸಿಕೊಂಡು, ಮೈ ತುಂಬಾ ಕೆಂಪು ಮಣ್ಣು ಬಳಿದುಕೊಂಡ ಜಟ್ಟಿಗಳ ಜೋಡಿ ಕುಲದೇವತೆ ನಿಂಬುಜಾಂಬೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅರಮನೆ ಕರಿಕಲ್ಲುತೊಟ್ಟಿಯಲ್ಲಿ ಸಿದ್ಧಗೊಂಡ ಅಖಾಡದಲ್ಲಿ ವಜ್ರನಖ ಎಂಬ ಹರಿತವಾದ ಆಯುಧ ಧರಿಸಿ ಕಾದಾಡಲಿದ್ದಾರೆ. ಅಲ್ಲದೆ ಜಟ್ಟಿಯ ಮೈಯಿಂದ ರಕ್ತ ಚಿಮ್ಮಿದ ಕೂಡಲೇ ಕಾದಾಟ ಅಂತ್ಯಗೊಳ್ಳಲಿದೆ.
ವಜ್ರಮುಷ್ಠಿ ಕಾಳಗವೇ ರೋಚಕ
ಇನ್ನು ವಜ್ರಮುಷ್ಠಿ ಕಾಳಗದ ಕುರಿತಂತೆ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ವಿಜಯದ ಸಂಕೇತವಾಗಿ ಆಚರಣೆ ಮಾಡಿಕೊಂಡು ಬರುತ್ತಿರುವುದು ಸಂಪ್ರದಾಯವಾಗಿದೆ. ಮೈಸೂರು ಮಹಾರಾಜರು ಕುಸ್ತಿಯಲ್ಲಿ ಪ್ರಾವಿಣ್ಯತೆ ಹೊಂದಿದ್ದರಲ್ಲದೆ, ಕುಸ್ತಿಯನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಆಸ್ಥಾನದಲ್ಲಿ ಜಗಜಟ್ಟಿಗಳನ್ನಿಟ್ಟುಕೊಂಡಿದ್ದ ಮಹಾರಾಜರು ಅವರಿಗೆ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಿ ಗೆದ್ದವರಿಗೆ ಸನ್ಮಾನ ಮಾಡಿ ಪ್ರೋತ್ಸಾಹಿಸುತ್ತಿದ್ದರಂತೆ. ಬಹಳಷ್ಟು ಪರಾಕ್ರಮ ಮೆರೆದ ಜಟ್ಟಿಗಳು ಆಸ್ಥಾನದಲ್ಲಿದ್ದರು.
ವಜ್ರಮುಷ್ಠಿ ಕಾಳಗ ಹೇಗೆ ರೂಢಿಗೆ ಬಂತು ಎಂಬುವುದನ್ನು ನೋಡುವುದಾದರೆ, ಮೈಸೂರು ಒಡೆಯರ್ ದುರ್ಗಾ ಮಾತೆಯ ಶಾಂತಿಗಾಗಿ ನವರಾತ್ರಿ ಸಂದರ್ಭ ಈ ಆಚರಣೆಯನ್ನು ಜಾರಿಗೆ ತಂದರು ಎಂದು ಹೇಳಲಾಗುತ್ತದೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಇದು ಇತರೆ ಕುಸ್ತಿಗಿಂತ ಅಪಾಯಕಾರಿ. ತಲೆಬೋಳಿಸಿ ದೃಢಕಾಯವಾಗಿರುವ ಅನುಭವಿ ವಸ್ತಾದ್ ತನ್ನ ಬಲಗೈಗೆ (ಆನೆದಂತ ಅಥವಾ ಸಾರಂಗದ ಕೊಂಬಿನಿಂದ ತಯಾರಿಸಿದ ಆಯುಧ) ವಜ್ರನಖವನ್ನು ಹಿಡಿದು ಎಡಗೈಗೆ ಬಟ್ಟೆ ಕಟ್ಟಿಕೊಂಡಿರುತ್ತಾನೆ.
ರೋಚಕವಾಗಿ ನಡೆಯುವ ಜಟ್ಟಿ ಕಾಳಗ
ಇಂತಹ ನಾಲ್ವರು ಅಖಾಡದಲ್ಲಿ ಸೆಣೆಸಾಡುತ್ತಾರೆ. ತನ್ನ ಬಳಿಯಿರುವ ವಜ್ರನಖದಿಂದ ಎದುರಾಳಿಯ ಮೇಲೆ ಹೋರಾಡಬೇಕು. ಹೊಡೆತವನ್ನು ಕೂಡ ಆತನ ತಲೆ ಮೇಲೆಯೇ ಹೊಡೆಯಬೇಕು. ಹೀಗೆ ಹೊಡೆದ ಏಟು ತಲೆಗೆ ತಾಗಿ ರಕ್ತ ಚಿಮ್ಮಿದರೆ ಆತ ಸೋತ ಎಂದರ್ಥ. ಈ ಒಂದು ದಿನದ ಕಾಳಗಕ್ಕಾಗಿ ಜಟ್ಟಿಗಳು ಆರು ತಿಂಗಳಿನಿಂದ ತಾಲೀಮು ನಡೆಸುವುದರೊಂದಿಗೆ ಕಟ್ಟುನಿಟ್ಟಿನ ವ್ರತವನ್ನು ಸುಮಾರು ಒಂಬತ್ತು ದಿನಗಳ ಕಾಲ ಮಾಡುವುದು ವಿಶೇಷವಾಗಿದೆ.
ಇನ್ನು 1638ರಿಂದ 1659ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ರಣಧೀರ ಕಂಠೀರವ ನರಸರಾಜ ಒಡೆಯರ್ ಮಹಾನ್ ಕುಸ್ತಿಪಟುವಾಗಿದ್ದರು. ಇವರ ಆಡಳಿತಾವಧಿಯ ಕಾಲದಲ್ಲಿ ತಿರುಚನಾಪಳ್ಳಿಯ ಪ್ರಸಿದ್ಧ ಜಟ್ಟಿಯೊಬ್ಬರು ತನಗೆ ಸಮಾನರು ಯಾರು ಇಲ್ಲವೆಂದು ಅಹಂಕಾರದಿಂದ ಮೆರೆಯುತ್ತಿದ್ದನಂತೆ. ಅವರನ್ನು ಸೋಲಿಸಲು ನರಸರಾಜ ಒಡೆಯರ್ ಒಬ್ಬ ಕುಸ್ತಿಗಾರನಂತೆ ವೇಷಧರಿಸಿ ಅಲ್ಲಿಗೆ ತೆರಳಿ ತಮ್ಮ ಹಸ್ತ ಚಮತ್ಕಾರದಿಂದ ಆತನನ್ನು ಸಂಹರಿಸಿದರಂತೆ.
ಆ ನಂತರ ವಿಷಯ ತಿಳಿದ ಅಲ್ಲಿನ ಪಾಳೆಯಗಾರ ಹೇಗಾದರೂ ಮಾಡಿ ನರಸರಾಜ ಒಡೆಯರ್ ಅನ್ನು ಮುಗಿಸಲೇಬೇಕೆಂಬ ತೀರ್ಮಾನ ಮಾಡಿ ಸುಮಾರು 25 ಜಟ್ಟಿಗಳನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿದನು. ಹಾಗೆ ಬಂದ ಜಟ್ಟಿಗಳು ಹೊಂಚು ಹಾಕಿ ಒಡೆಯರ ಅಂತಃ ಪುರವನ್ನು ಪ್ರವೇಶಿಸಿ ಬಿಡುತ್ತಾರೆ. ಈ ವೇಳೆ ಧೈರ್ಯ ಗೆಡದ ನರಸರಾಜ ಒಡೆಯರ್ ಆ ಜಟ್ಟಿಗಳನ್ನು ಸೋಲಿಸಿದರು ಎಂಬ ಕಥೆಗಳಿವೆ.
ಮುಮ್ಮುಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಗ್ರಾಮವೊಂದನ್ನು ಗೋವಿಂದ ಜೆಟ್ಟಿ ಎಂಬಾತನಿಗೆ ಆತನ ಶೌರ್ಯ ನೋಡಿ ಬಿಟ್ಟುಕೊಟ್ಟಿದ್ದರಲ್ಲದೆ, ಜೆಟ್ಟಿಹುಂಡಿ ಎಂದು ಹೆಸರಿಟ್ಟರು. ಆ ಊರು ಇಂದಿಗೂ ಜೆಟ್ಟಿ ಹುಂಡಿಯಾಗಿ ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿದೆ.












Click it and Unblock the Notifications