Mysuru Dasara 2023: ನಾಗರಹೊಳೆಯಿಂದ ದಸರಾ ಗಜಪಯಣಕ್ಕೆ ಅದ್ಧೂರಿ ಚಾಲನೆ
ಮೈಸೂರು, ಸೆಪ್ಟಂಬರ್ 01: ನಾಡಹಬ್ಬ ಮೈಸೂರು ದಸರಾ 2023ಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆಯ ವೀರನಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಅಭಿಮನ್ಯು, ಭೀಮ, ಗೋಪಿ, ಧನಂಜಯ, ವರಲಕ್ಷ್ಮಿ, ಅರ್ಜುನ, ವಿಜಯ, ಮಹೇಂದ್ರ, ಕಂಜನ್ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು. ಕಲಾ ತಂಡಗಳು, ಮಂಗಳವಾದ್ಯಗಳ ಜೊತೆಗೆ ವರುಣನ ಸಿಂಚನದ ನಡುವೆ ಗಜಪಡೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು. ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಹಾಡಿಗಳ ನೂರಾರು ಮಹಿಳೆ ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು.
ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, 'ಗಜಪಯಣಕ್ಕೆ ವಿಜೃಂಭಣೆಯಿಂದ ಚಾಲನೆ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ನೇತೃತ್ವದಲ್ಲಿ ಆನೆಗಳನ್ನು ಮೈಸೂರಿಗೆ ಕರೆತರಲಾಗುವುದು. ದಸರಾ ಯಶಸ್ವಿಯಾಗಲಿ' ಎಂದು ಶುಭ ಹಾರೈಸಿದರು.

ಸೆಪ್ಟಂಬರ್ 4 ರಂದು ಅರಮನೆಗೆ ಗಜಪಡೆಗಳ ಆಗಮನವಾಗಲಿದ್ದು, ಅಂದು ಸಂಜೆ 5.30ರಿಂದ 6ರವರೆಗೆ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದ ಆನೆಗಳು ಸಹ ಈ ಬಾರಿಯ ದಸರಾದಲ್ಲಿ ಭಾಗಿಯಾಗಲಿದ್ದು, ಚಾಮರಾಜನಗರದಿಂದ ನಿನ್ನೆಯಿಂದ ಗಜಪಯಣ ಆರಂಭವಾಗಿದೆ.
ನಾಗರಹೊಳೆಯ ವೀರನಹೊಸಹಳ್ಳಿ ಗಜಪಯಣಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸಕರಾದ ಜಿ.ಡಿ.ಹರೀಶ್ ಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತಿ ಸಿಇಒ ಗಾಯತ್ರಿ ಕೆ.ಎಂ, ನಗರ ಪೊಲೀಸ್ ಆಯುಕ್ತ ರಮೇಶ್ ಬಿ., ಎಸ್ಪಿ ಸೀಮಾ ಲಾಟ್ಕರ್, ಅರಣ್ಯಾಧಿಕಾರಿ ಸೌರಭ್ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
ನಾಡಹಬ್ಬ ದಸರಾಗೆ ಬಂಡೀಪುರದಿಂದ ಮೈಸೂರಿಗೆ ಹೊರಟ ರೋಹಿತ್, ಹಿರಣ್ಯ
ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಿಂದ ಆನೆಗಳು ತೆರಳಿವೆ. ಗಂಡಾನೆ ರೋಹಿತ್ ಹಾಗೂ ಹೆಣ್ಣಾನೆಯಾದ ಹಿರಣ್ಯ ಮದ್ದೂರು ಚೆಕ್ ಪೋಸ್ಟ್‌ನಿಂದ ಸಾಂಪ್ರಾದಾಯಿಕ ಪೂಜೆ ಅರ್ಪಿಸಿಕೊಂಡು, ಕಬ್ಬು-ಬೆಲ್ಲ ಸೇವಿಸಿ ದಸರಾದಲ್ಲಿ ಭಾಗಿಯಾಗಲು ತೆರಳಿವೆ. ದಸರಾ ಜಂಬೂ ಸವಾರಿಯಲ್ಲಿ ರೋಹಿತ್ ಹಾಗೂ ಹಿರಣ್ಯ ಆನೆಗಳು ಪಾಲ್ಗೊಳ್ಳಲ್ಲಿದ್ದು, ಶಾಸಕ ಗಣೇಶ್ ಪ್ರಸಾದ್, ಬಂಡೀಪುರ ಸಿಎಫ್ಒ ಪ್ರಭಾಕರನ್ ಎರಡು ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟಿದ್ದರು.












Click it and Unblock the Notifications