ಪಂಜಿನ ಕವಾಯತು ಮೂಲಕ 10 ದಿನದ ಮೈಸೂರು ದಸರಾ ಮಹೋತ್ಸವ ಸಂಪನ್ನ
ಮೈಸೂರು, ಅಕ್ಟೋಬರ್ 25: ಬನ್ನಿಮಂಟಪದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತು ಮೂಲಕ 10 ದಿನದ ದಸರಾ ಮಹೋತ್ಸವ ಸಂಪನ್ನವಾಯಿತು. ದಸರಾ ಮಹೋತ್ಸವದ ಪ್ರಯುಕ್ತ ಜಂಬೂ ಸವಾರಿ ಮುಗಿಯುತ್ತಿದ್ದಂತೆ ಬನ್ನಿಮಂಟಪದ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು, ನವರಾತ್ರಿಯ ಈ ಪಂಜಿನ ಕವಾಯತಿನ ಸಾಹಸ ದೃಶ್ಯಗಳಿಗೆ ಸಾಕ್ಷಿಯಾದರು.
10 ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಗೆಬಗೆಯ ಕಾರ್ಯಕ್ರಮಗಳು ಜನರನ್ನು ಮನರಂಜಿಸಿದವು. ಯುವ ದಸರಾ, ರೈತದಸರಾ, ಮಕ್ಕಳ ಮತ್ತು ಮಹಿಳಾ ದಸರಾ, ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ಏರ್ ಶೋ ಜನರ ಮನತಣಿಸಿದವು.

ಐದು ವರ್ಷದ ಬಳಿಕ ಪಂಜಿನ ಕವಾಯತಿನಲ್ಲಿ ಮಿಲಿಟರಿ ಪೊಲೀಸ್ ಕೋರ್‌ನ ಮೋಟಾರ್ ಬೈಕ್ ತಂಡ, ಶ್ವೇತ ಬಣ್ಣದ ದಿರಿಸು ಧರಿಸಿ ಬೈಕ್‌ಗಳಲ್ಲಿ ಬಂದು ಸತತ 25 ನಿಮಿಷ ನಡೆಸಿ ಕೊಟ್ಟ ನಾನಾ ಸಾಹಸಗಳು, ನೋಡುಗರನ್ನು ರೋಮಾಂಚನಗೊಳಿಸಿದವು. ಸಾಹಸಿಗಳ ಪ್ರದರ್ಶನಕ್ಕೆ ನೆರೆದಿದ್ದ ಪ್ರೇಕ್ಷಕರಿಂದ ಶಿಳ್ಳೆಯೊಂದಿಗೆ ಚಪ್ಪಾಳೆಯ ಸುರಿಮಳೆಯೇ ಆಯಿತು.
ಟೆಂಟ್ ಪೆಗ್ಗಿಂಗ್ ಸಾಹಸ
ಅಶ್ವಾರೋಹಿ ದಳದ ಪೊಲೀಸರು 20 ನಿಮಿಷ ಪ್ರದರ್ಶಿಸಿದ ಟೆಂಟ್ ಪೆಗ್ಗಿಂಗ್ ನೆರೆದಿದ್ದ ಪ್ರೇಕ್ಷಕರಿಗೆ ರೋಚಕ ಅನುಭವ ನೀಡಿತು. ಆರಂಭದಲ್ಲಿ ಒಬ್ಬೊಬ್ಬರಾಗಿ ಭೂಮಿಯಲ್ಲಿ ನೆಟ್ಟಿದ್ದ ಗೂಟಗಳನ್ನು ವೇಗದ ಕುದುರೆ ಸವಾರಿ ಮೂಲಕವೇ ಈಟಿಯಿಂದ ಕಿತ್ತೊಯ್ದರೆ, ಕಡೆಯಲ್ಲಿ ಒಟ್ಟೊಟ್ಟಿಗೆ ನಾಲ್ವರು ಪೊಲೀಸರು ಟೆಂಟ್ ಪೆಗ್ಗಿಂಗ್ ಮಾಡಿದ್ದು, ರೋಮಾಂಚನವುಂಟು ಮಾಡಿತು.

ಡ್ರೋಣ್‌ನ ಲೇಸರ್ ಶೋ
ಬನ್ನಿಮಂಟಪದ ಮುಖ್ಯದ್ವಾರದ ಬಳಿಯಿಂದ ಬೆಳ್ಳಕ್ಕಿಗಳ ರೀತಿ ಆಗಸಕ್ಕೆ ಚಿಮ್ಮಿದ ಡ್ರೋಣ್, ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಬಾನೆತ್ತರದಲ್ಲಿ ಹ್ಯಾಪಿ ದಸರಾ, ಕರ್ನಾಟಕ ಭೂಪಟ, ಮೈಸೂರು ಜಿಲ್ಲೆ ಭೂಪಟ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬಾರಿ ಆನೆ, ನಂದಿ ವಿಗ್ರಹ, ಸಿಯುಇನ್ 2024, ಗಂಡ ಭೇರುಂಡ ಕಲಾಕೃತಿಗಳನ್ನು ಕಂಡ ಪ್ರೇಕ್ಷಕರು ಸಂಭ್ರಮಿಸಿದರು.
ಪೊಲೀಸ್ ಬ್ಯಾಂಡಿನ ಹಿಮ್ಮೇಳದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ 300 ಪೊಲೀಸ್ ಪ್ರಶಿಕ್ಷಣಾರ್ಥಿಗಳು 600 ಪಂಜುಗಳನ್ನು ಹಿಡಿದು ಅಕ್ಷರಾಕೃತಿಗಳನ್ನು ಬೆಂಕಿಯ ಪಂಜಿನಲ್ಲಿ ಮೂಡಿಸಿದರು. ಇದಕ್ಕೂ ಮುನ್ನ ನಡೆದ ಧ್ವನಿ ಮತ್ತು ಬೆಳಕು ಪ್ರದರ್ಶನ ನಡೆಯಿತು. ಡಿಎನ್‌ಎ ಎಂಟರ್ ಪ್ರೈಸಸ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ದಸರಾ ವೈಭವಕ್ಕೆ ಮೆರುಗು ನೀಡಿದವು. ಆರಂಭದಲ್ಲಿ 300ಕ್ಕೂ ಹೆಚ್ಚು ಕಲಾವಿದರು ನಾನಾ ಗೀತೆಗೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.

ಗಮನ ಸೆಳೆದ ಪರೇಡ್
ಅಶ್ವಾರೋಹಿ ಪಡೆಯ ಎರಡು ದಳ, ಕೆಎಸ್‌ಆರ್‌ಪಿ ತುಕಡಿ, ಸಿಎಆರ್, ಡಿಎಆರ್, ಗೃಹ ರಕ್ಷಕ ದಳ, ಎನ್‌ಸಿಸಿಯ ಭೂದಳ, ನೌಕಾದಳ, ವಾಯುದಳ, ಸ್ಕೌಟ್ಸ್ ಗೈಡ್ಸ್, ರೈಲ್ವೆ ರಕ್ಷಕ ದಳ, ಭಾರತ ಸೇವಾದಳ ಬಾಲಕ, ಬಾಲಕಿಯರು, ಪೊಲೀಸ್ ಬ್ಯಾಂಡ್ ಸೇರಿದಂತೆ 18 ತುಕಡಿಗಳಿಂದ ನಡೆದ ಪರೇಡ್ ಗಮನ ಸೆಳೆಯಿತು. ಈ ವೇಳೆ ಮೂರು ಸುತ್ತು 27 ಕುಶಾಲುತೋಪುಗಳನ್ನು ಸಿಡಿಸಲಾಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications